ಹುಬ್ಬಳ್ಳಿ: ಸಿಂಪಲ್ ರಾಜಕಾರಣಿ ಎಂದು ಸ್ಥಳೀಯವಾಗಿ ಗುರುತಿಸಿಕೊಂಡಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಿ.ಕೆ. ಚವ್ಹಾಣ ತಮ್ಮ 75ನೇ ವಯಸ್ಸಿನಲ್ಲಿ ಎರಡನೇ ಬಾರಿ ದಾಂಪತ್ಯ (Old Man Marriage) ಜೀವನಕ್ಕೆ ಕಾಲಿಟ್ಟಿದ್ದಾರೆ.
ಬುಧವಾರ ಸಂಜೆ ಹುಬ್ಬಳ್ಳಿಯ ಅರವಿಂದ ನಗರದ ಸ್ವಗ್ರಹದಲ್ಲಿ ಅದ್ಧೂರಿ ಕಲ್ಯಾಣವನ್ನು ನಡೆಸಲಾಗಿದೆ. ಕುಟುಂಬಸ್ಥರು ಹಾಗೂ ಬಂಧು ಬಳಗದವರ ಸಮ್ಮುಖದಲ್ಲಿಯೇ ಮಾಜಿ ಮೇಯರ್ ಚವ್ಹಾಣ ಅವರು ತಮ್ಮ ಮೊದಲ ಪತ್ನಿಯ ಸಹೋದರಿ ಅನಸೂಯ ಅವರನ್ನು ವರಿಸಿದ್ದಾರೆ.
ಡಿ.ಕೆ.ಚವ್ಹಾಣ್ ಅವರ ಮೊದಲ ಪತ್ನಿ ಶಾರದಾ ಕಳೆದ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಅಗಲಿದ್ದರು. ಪತ್ನಿ ನಿಧನದಿಂದ ಮಾನಸಿಕವಾಗಿ ನೊಂದಿದ್ದ ಡಿ.ಕೆ.ಚವ್ಹಾಣ ಮನೆಯಲ್ಲಿ ಏಕಾಂಗಿಯಂತಾಗಿದ್ದರು. ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿದ್ದರೂ ಯಾರೊಂದಿಗೂ ಬೇರೆಯದೆ ಒಬ್ಬಂಟಿಯಾಗಿ ಇರುತ್ತಿದ್ದರು. ಇದು ಮನೆಯವರನ್ನು ಚಿಂತೆಗೀಡು ಮಾಡಿತ್ತು. ಆಗ ಶಾರದಾ ಅವರ ಅಕ್ಕ ಅನಸೂಯ ಅವರು ವಿವಾಹವಾಗದೇ ಇರುವುದು ನೆನಪಾಗಿದೆ. ಹೀಗಾಗಿ ಅವರನ್ನು ಸಂಪರ್ಕ ಮಾಡಿ ಮದುವೆಗೆ ಮನವೊಲಿಸಿದ್ದಾರೆ. ಮೊದ ಮೊದಲು ನಿರಾಕರಿಸಿದರಾದರೂ ಎಲ್ಲರ ಒತ್ತಡಕ್ಕೆ ಮಣಿದು ಒಪ್ಪಿದ್ದಾರೆ.
ಕುಟುಂಬಸ್ಥರು, ಸಂಬಂಧಿಕರು ಸೇರಿ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯ ನೆರವೇರಿಸಿದ್ದಾರೆ. ಮಾಜಿ ಮೇಯರ್ ಮದುವೆ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರು ಭಾಗಿಯಾಗಿದ್ದರು.
ಮಕ್ಕಳ ಸಲಹೆ ಮೇರೆಗೆ ವಿವಾಹವಾದೆ
ಪತ್ನಿ ಶಾರದಾ ನಿಧನದಿಂದ ಒಂಟಿತನ ಕಾಡುತ್ತಿತ್ತು. ಮಕ್ಕಳು, ಸೊಸೆಯಂದಿರ ಸಲಹೆಯಂತೆ ಮದುವೆಯಾಗಿದ್ದೇನೆ ಎಂದು ಡಿ.ಕೆ. ಚವ್ಹಾಣ ಪ್ರತಿಕ್ರಿಯೆ ನೀಡಿದ್ದಾರೆ. ಅನಸೂಯ ಅವರೂ ಪ್ರತಿಕ್ರಿಯೆ ನೀಡಿದ್ದು, “ನಾನು ಮದುವೆಯಾಗದಿರಲು ತೀರ್ಮಾನಿಸಿದ್ದೆ. ಆದರೆ ತಂಗಿ ಶಾರದಾ ನಿಧನದ ನಂತರ ಪರಿಸ್ಥಿತಿ ಬದಲಾಗಿದೆ. ನನಗೆ ತಾಳಿ ಭಾಗ್ಯ ಸಿಕ್ಕಿದ್ದು ಖುಷಿಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | IND VS NZ | ಕಿವೀಸ್ ವಿರುದ್ಧದ ಸರಣಿಯಲ್ಲಿ ಸ್ವತಂತ್ರವಾಗಿ ಆಡುವಂತೆ ಹಾರ್ದಿಕ್ ಪಡೆಗೆ ಲಕ್ಷ್ಮಣ್ ಕಿವಿಮಾತು