Site icon Vistara News

Bangaru Adigalar: ಓಂ ಶಕ್ತಿ ಪೀಠದ ಆಧ್ಯಾತ್ಮಿಕ ಗುರು ಬಂಗಾರು ಅಡಿಗಳಾರ್‌ ನಿಧನ; ಮೋದಿ ಸೇರಿ ಗಣ್ಯರ ಸಂತಾಪ

Bangaru adigalar

ಚೆನ್ನೈ: ಮೇಲ್‌ ಮರವತ್ತೂರಿನ ಅರುಳ್ಮಿಗು ಆದಿಪರಾಶಕ್ತಿ ಸಿದ್ದರ ಪೀಠದ ಸಂಸ್ಥಾಪಕ, ಖ್ಯಾತ ಆಧ್ಯಾತ್ಮಿಕ ಗುರು ಬಂಗಾರು ಅಡಿಗಳಾರ್‌ ಅವರು ಹೃದಯಾಘಾತದಿಂದ ಗುರುವಾರ ನಿಧನರಾದರು. ಆದಿಪರಾಶಕ್ತಿ ದೇಗುಲದ ಗರ್ಭಗುಡಿಯೊಳಗೆ ದಶಕಗಳ ಹಿಂದೆಯೇ ಮಹಿಳೆಯರಿಗೆ ಪ್ರವೇಶ ನೀಡಿ ಧಾರ್ಮಿಕ ಕ್ರಾಂತಿ ಮಾಡಿದ್ದ ಮಾತೃ ಹೃದಯಿ ಬಂಗಾರು ಅಡಿಗಳಾರ್‌ ಅವರು (Bangaru Adigalar), ಭಕ್ತರ ಪಾಲಿನ ʼಅಮ್ಮʼ ಎಂದೇ ಜನಪ್ರಿಯರಾಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ರಾಜ್ಯದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮೇಲ್ ಮರವತೂರಿನ ನಿವಾಸದಲ್ಲಿ ಬಂಗಾರು ಅಡಿಗಳಾರ್‌ (82) ಅವರು ನಿಧನರಾಗಿದ್ದು, ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಮೇಲ್‌ ಮರವತ್ತೂರಿನ ಅರುಳ್ಮಿಗು ಆದಿಪರಾಶಕ್ತಿ ಸಿದ್ದರ ಪೀಠವು ಓಂ ಶಕ್ತಿ ಪೀಠವೆಂದೂ ಪ್ರಸಿದ್ಧಿಯಾಗಿದೆ. ಇಲ್ಲಿಗೆ ತಮಿಳುನಾಡು ಅಷ್ಟೇ ಅಲ್ಲದೇ ಕರ್ನಾಟಕ, ಆಂಧ್ರ ಪ್ರದೇಶ ಸೇರಿ ದೇಶದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಶಬರಿಮಲೆ ಅಯ್ಯಪ್ಪ ಮಾಲೆಯಂತೆ ಇಲ್ಲಿಗೆ ಓಂ ಶಕ್ತಿ ಮಾಲೆ ಧರಿಸಿ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.

ಋತುಚಕ್ರದ ಅವಧಿ ಸೇರಿ ಎಲ್ಲ ಸಮಯದಲ್ಲೂ ಮಹಿಳೆಯರಿಗೆ ದೇಗುಲ ಪ್ರವೇಶ ಸೇರಿ ಪೂಜೆ ವಿಧಾನದಲ್ಲಿ ಅಡಿಗಳಾರ್‌ ಅವರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ಮಹಿಳೆಯರು ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಇದರಿಂದ ಹಲವೆಡೆ ಓಂ ಶಕ್ತಿ ದೇಗುಲಗಳು ಸ್ಥಾಪನೆಯಾದವು. ಇವರ ಆಧ್ಯಾತ್ಮಿಕ ಸೇವೆಯನ್ನು ಗುರುತಿಸಿ 2019ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದನ್ನೂ ಓದಿ | Navaratri: ವಿದ್ಯಾದೇವತೆ ಸರಸ್ವತಿ ಪೂಜೆ; ಏನಿದರ ಮಹತ್ವ?

ಬಂಗಾರು ಅಡಿಗಳಾರ್‌ ಅವರು 1941ರ ಮಾರ್ಚ್ 3ರಂದು ಮೇಲ್‌ ಮರವತ್ತೂರಿನಲ್ಲಿ ಜನಿಸಿದರು. ಗೋಪಾಲ ನಾಯ್ಕರ್‌ ಮತ್ತು ಮೀನಾಕ್ಷಿ ಅಮ್ಮಾಳ್‌ ದಂಪತಿ ಪುತ್ರನಾದ ಬಂಗಾರು ಅಡಿಗಳಾರ್‌ ಅವರ ಮೂಲ ಹೆಸರು ಸುಬ್ರಮಣ್ಯಂ. ಶಿಕ್ಷಕರಾಗಿ ಜೀವನ ಆರಂಭಿಸಿದ ಅವರು ನಂತರ ಶಿಕ್ಷಕಿ ಲಕ್ಷ್ಮಿ ಅವರನ್ನು ವಿವಾಹವಾದರು. ನಂತರ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮುಂದುವರಿದರು.

ಅಡಿಗಳಾರ್‌ ಅವರು 1970ರಲ್ಲಿ ಆದಿಪರಾಶಕ್ತಿ ಸಿದ್ದರ ಪೀಠವನ್ನು ಸ್ಥಾಪಿಸಿದರು. ವಾರದ ಪೂಜಾ ಮಂದಿರ ಆರಂಭ, ದೇಶ-ವಿದೇಶಗಳಲ್ಲಿ 2500ಕ್ಕೂ ಹೆಚ್ಚು ಸಾಪ್ತಾಹಿಕ ಪೂಜಾ ಮಂದಿರಗಳನ್ನು ಸ್ಥಾಪಿಸಿರುವ ಇವರು, ಆದಿಪರಾಶಕ್ತಿ ಚಾರಿಟಬಲ್‌ ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷರಾಗಿದ್ದರು. ಇವರ ಟ್ರಸ್ಟ್‌ ಅಡಿಯಲ್ಲಿ ವೈದ್ಯಕೀಯ ಕಾಲೇಜು ಸೇರಿ ಹಲವು ಶಿಕ್ಷಣ ಸಂಸ್ಥೆಗಳು ಇವೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ

ಬಂಗಾರು ಅಡಿಗಳಾರ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಶ್ರೀ ಬಂಗಾರು ಅಡಿಗಳಾರ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಆಧ್ಯಾತ್ಮಿಕತೆ ಮತ್ತು ಸಹಾನುಭೂತಿಯಿಂದ ಸಮೃದ್ಧವಾಗಿರುವ ಅವರ ಜೀವನ ಅನೇಕರಿಗೆ ಎಂದೆಂದಿಗೂ ಮಾರ್ಗದರ್ಶನವಾಗಿರುತ್ತದೆ. ಮಾನವೀಯತೆಗೆ ದಣಿವರಿಯದ ಸೇವೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ, ಅವರು ಅನೇಕರ ಜೀವನದಲ್ಲಿ ಭರವಸೆ ಮತ್ತು ಜ್ಞಾನದ ಬೀಜ ಬಿತ್ತಿದರು. ಅವರ ಕೆಲಸವು ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿದೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಸೃಷ್ಟಿ ಸ್ಥಿತಿ ಲಯಕಾರಿಣಿಯಾದ ಜಗನ್ಮಾತೆಯ ಸ್ವರೂಪ ವೈಭವ: ನವರಾತ್ರಿ

ವಿವಿಧ ಗಣ್ಯರ ಸಂತಾಪ

ಆಧ್ಯಾತ್ಮಿಕ ಗುರು ಬಂಗಾರು ಅಡಿಗಳಾರ್‌ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಂಸದ ಬಿ.ವೈ,ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

Exit mobile version