ಕಾರವಾರ: ಅತಿ ವಿರಳವಾಗಿ ಕಂಡುಬರುವ ಒಕ್ಕಣ್ಣಿನ (ಒಂದೇ ಕಣ್ಣು) ನಾಗರ ಹಾವು ತಾಲೂಕಿನ ಕದ್ರಾದಲ್ಲಿ (kadra) ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಕಾರವಾರ ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎಂಬುವವರ ಮನೆಯ ಬಳಿ ಸುಮಾರು 4.5 ಅಡಿ ಉದ್ದದ ಹಾವೊಂದು ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ತೆರಳಿದ ಅವರು, ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣಕರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಈ ನಾಗರ ಹಾವಿಗೆ ಒಂದು ಕಣ್ಣು ಇರಲಿಲ್ಲ. ಈ ಒಕ್ಕಣ್ಣಿನ ನಾಗಿಣಿ ಒಂದು ಕಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡಿದೆ.
ಇದನ್ನೂ ಓದಿ: SK Bhagavan: ಎರಡೂ ಕಣ್ಣು ದಾನ ಮಾಡಿದ ಭಗವಾನ್: ಕೊನೆ ಆಸೆ ಈಡೇರಿಸಲು ರಾಘವೇಂದ್ರ ರಾಜಕುಮಾರ್ ನಿರ್ಧಾರ
“ಈ ರೀತಿ ಒಕ್ಕಣ್ಣಿನ ನಾಗರ ಹಾವು ಕಾಣಸಿಗುವುದು ತೀರಾ ವಿರಳವಾಗಿದೆ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇಲ್ಲ. ಕೆಲವೊಮ್ಮೆ ಹಾವುಗಳು ಮುಂಗುಸಿ ಜೊತೆ ಕಾದಾಡುವ ಸಂದರ್ಭದಲ್ಲಿ ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಇಲಿಗಳು ಕಚ್ಚುವುದರಿಂದಲೂ ಹೀಗೆ ಆಗಿರುವ ಸಾಧ್ಯತೆ ಇರುತ್ತದೆ” ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ.
“ಅತಿ ವಿರಳವಾಗಿ ಅನುವಂಶೀಯವಾಗಿ ಹಠಾತ್ ಬದಲಾವಣೆಯಿಂದಾಗಿಯೂ ಇಂತಹ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಒಂದು ಕಣ್ಣಿನ ದೃಷ್ಟಿ ಕುಂಠಿತಗೊಂಡರೆ ಹಾವುಗಳ ಜೀವನ ಕ್ರಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವು ನಿಸರ್ಗದಲ್ಲಿ ಸಹಜ ಜೀವನವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಇದು ನಾಗರ ಹಾವುಗಳ ಮಿಲನ ಋತುವಾಗಿರುವುದರಿಂದ ನಾಗರ ಹಾವುಗಳು ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಒಂದು ಹೆಣ್ಣು ನಾಗರ ಹಾವು ಇದ್ದ ಜಾಗದ ಆಸುಪಾಸಿನಲ್ಲಿ ಎರಡು ನಾಗರ ಹಾವುಗಳಿರುವ ಸಾಧ್ಯತೆ ಕೂಡ ಇರುತ್ತದೆ” ಎಂದು ಮಂಜುನಾಥ ನಾಯಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Baba Ramdev in Goa: ಅಂಬಾನಿ, ಅದಾನಿಗಿಂತಲೂ ನನ್ನ ಸಮಯದ ಮೌಲ್ಯ ಹೆಚ್ಚು ಎಂದ ಬಾಬಾ ರಾಮದೇವ್