Site icon Vistara News

Road Accident: ಬೆಳಗಾವಿಯಲ್ಲಿ ಭೀಕರ ಅಪಘಾತಕ್ಕೆ ಒಬ್ಬ ಬಲಿ; ಹತ್ತಕ್ಕೂ ಹೆಚ್ಚು ಜನ ಗಂಭೀರ

raod accident in belagavi auto fall down

ಬೆಳಗಾವಿ: ಇಲ್ಲಿನ ಐನಾಪೂರ ಹಾಗೂ ಉಗಾರ ಮಧ್ಯದಲ್ಲಿ ಸೋಮವಾರ ಸಂಜೆ ಭೀಕರ ರಸ್ತೆ ಅಪಘಾತ (Road Accident) ನಡೆದಿದ್ದು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದರೆ, ಒಬ್ಬರು ಮೃತಪಟ್ಟಿದ್ದಾರೆ. ಟಂಟಂ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದೇ ಈ ಅವಘಡಕ್ಕೆ ಕಾರಣವಾಗಿದೆ.

ಉಗಾರ ಕಡೆಯಿಂದ ಟಂಟಂ ಹಾಗೂ ಐನಾಪೂರ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಅವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಗಾಯಾಳುಗಳನ್ನು ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮೀರಜ್‌ ಪಟ್ಟಣದಲ್ಲಿನ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಕರೆದೊಯ್ಯಲಾಗಿದೆ.

ಟಂಟಂದಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ. ಈ ವೇಳೆ ಬಾಲಕಿಯೊಬ್ಬಳ ಕಾಲು ಮುರಿತಕ್ಕೊಳಪಟ್ಟಿದೆ ಎನ್ನಲಾಗಿದೆ. ಗಾಯಾಳುಗಳು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ, ಕೃಷ್ಣಾ ಕಿತ್ತೂರ, ಬನಜವಾಡ ಹಾಗೂ ಸಾಂಗಲಿಯ ಮೂರು ಜನ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಾಗವಾಡ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Viral News: ಹೆಂಡಕ್ಕಾಗಿ ಹೋರಾಟ! ಬಸ್‌ಗಳಲ್ಲಿ ಡಿಫೆನ್ಸ್‌ ಮದ್ಯ ಒಯ್ಯೋಕೆ ಬೇಕು ಪರ್ಮಿಶನ್; ನಾರಿಯರ ಪ್ರತಿಭಟನೆ

ಶಾಲಾ ಮಕ್ಕಳ ಕರೆದೊಯ್ಯುತ್ತಿದ್ದ ಆಟೋ ಪಲ್ಟಿ; ಮೂವರು ಗಂಭೀರ, 10 ಮಂದಿಗೆ ಗಾಯ

ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನ ಆಲಗೂಡು ಗ್ರಾಮದ ಬಳಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಪೆ ಆಟೋ ಪಲ್ಟಿ (Road Accident) ಆಗಿದೆ. 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾಗಿದ್ದರೆ, ಮೂವರು ಮಕ್ಕಳು ಗಂಭೀರಗೊಂಡಿದ್ದಾರೆ.

ಗಾಯಗೊಂಡ ಶಾಲಾ ಮಕ್ಕಳಿಗೆ ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರು ಮಕ್ಕಳು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಿ.ನರಸೀಪುರದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಅತಿ ವೇಗ ಚಾಲನೆ ಕಾರಣ ಎಂದು ಶಂಕಿಸಲಾಗಿದೆ.

ಮಿನಿ ಬಸ್‌ ಜಖಂ, ಚಾಲಕ ಮೃತ್ಯು

ತುಮಕೂರಿನ ಮಧುಗಿರಿ ತಾಲೂಕಿನ ಜಡೆಗೊಂಡನಹಳ್ಳಿ ಬಳಿ ಅಪಘಾತದಲ್ಲಿ ಮಿನಿ ಬಸ್‌ವೊಂದು ಛಿದ್ರ ಛಿದ್ರವಾಗಿದೆ. ಮಿನಿ ಬಸ್‌ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಗ್ಗಿಹಳ್ಳಿ ಮೂಲದ ಚಾಲಕ ಸಂಜೀವಯ್ಯ (35) ಮೃತಪಟ್ಟಿದ್ದಾರೆ. ಮಿನಿ ಬಸ್‌ನಲ್ಲಿದ್ದ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: POCSO Case: ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದವನಿಗೆ 25 ವರ್ಷ ಜೈಲು

ಹಿಟ್‌ ಆ್ಯಂಡ್‌ ರನ್‌ಗೆ ಒಬ್ಬ ಬಲಿ

ಬೆಂಗಳೂರು: ರಾಜಧಾನಿಯ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾರೆ. ಡಿಕ್ಕಿ ಹೊಡೆದ ವಾಹನ ನಿಲ್ಲಿಸದೆ (Hit and Run) ಪರಾರಿಯಾಗಿದೆ. ನಗರದ ಮೈಸೂರು ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮಾರು ಅರವತ್ತು ವರ್ಷದ ಈ ವ್ಯಕ್ತಿಯ ವಿವರಗಳು ತಿಳಿದುಬಂದಿಲ್ಲ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದ್ದು, ಕೆ. ಆರ್ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version