ಶಿವಮೊಗ್ಗ: ಸೋಮವಾರ ಅದ್ಧೂರಿಯಾಗಿ ನಡೆದ ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport) ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸೊರಬ ತಾಲೂಕಿನ ಚಿಮ್ಮನೂರು ಗ್ರಾಮದ ಮಲ್ಲಿಕಾರ್ಜುನಪ್ಪ (೫೦) ಎಂಬವರೇ ಮೃತಪಟ್ಟವರು.
ಸೊರಬದ ಕಡೆಯಿಂದ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಇತರರು ಕಾರ್ಯಕ್ರಮಕ್ಕೆ ಬಂದಿದ್ದರು. ಮಲ್ಲಿಕಾರ್ಜುನ ಅವರು ಬೆಳಗ್ಗೆ ಗ್ರಾಮಸ್ಥರೊಂದಿಗೆ ಬಸ್ಸಿನಲ್ಲಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ಸೋಗಾನೆ ಗ್ರಾಮದ ಕೆಇಬಿ ಕಚೇರಿ ಹತ್ತಿರ ಮಲ್ಲಿಕಾರ್ಜುನ ಅವರು ಅಸ್ವಸ್ಥರಾದರು.
ಬಾಯಾರಿಕೆಯಿಂದ ನೀರು ಕೇಳಿದ್ದ ಮಲ್ಲಿಕಾರ್ಜುನ ಅವರು ತಕ್ಷಣವೇ ಸಮೀಪದ ಕೋಳಿ ಫಾರಂಗೆ ಹೋಗಿ ನೀರು ಕುಡಿದಿದ್ದರು. ನೀರು ಕುಡಿದು ವಿಶ್ರಾಂತಿ ಪಡೆಯುವಾಗ ಅಲ್ಲೇ ಅಸ್ವಸ್ಥರಾಗಿ ಸಾವು ಸಂಭವಿಸಿತು. ಗ್ರಾಮಸ್ಥರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದೀಗ ಸಾವಿಗೆ ಕಾರಣವಾದ ಅಂಶ ಯಾವುದು ಎನ್ನುವುದರ ಬಗ್ಗೆ ಮಾಹಿತಿ ದೊರೆಯಬೇಕಾಗಿದೆ.
ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಮೊಗ್ಗ ಮಾತ್ರವಲ್ಲದೆ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಂದಲೂ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಏರ್‌ಪೋರ್ಟ್‌ನಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲೇ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಬಳಿಕ ಸುಮಾರು ನಾಲ್ಕು ಕಿ.ಮೀ. ದೂರದ ಕಾರ್ಯಕ್ರಮ ಸ್ಥಳಕ್ಕೆ ನಡೆದುಕೊಂಡೇ ಹೋಗಬೇಕಾಗಿತ್ತು.