ಬೆಂಗಳೂರು: ಅನ್ನಪೂರ್ಣೇಶ್ವರಿ ನಗರದ ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್ ಸಿಬಿಎಸ್‌ಇ ಶಿಕ್ಷಣ ಮಾನ್ಯತೆ ಇದೆ ಎಂದು ಹೇಳಿ ವಂಚನೆ ನಡೆಸಿದೆ ಎಂಬ ಆರೋಪದ ಬೆನ್ನಿಗೇ ಈಗ ಇನ್ನೊಂದು ಆರ್ಕಿಡ್ ಸ್ಕೂಲ್ ಅದೇ ಆರೋಪಕ್ಕೆ ಗುರಿಯಾಗಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆರ್ಕಿಡ್ ಸ್ಕೂಲ್‌ಗೂ ಸಿಬಿಎಸ್‌ಇ ಮಾನ್ಯತೆ (CBSE Affiliation) ಇಲ್ಲ ಎಂಬ ವಿಷಯ ಪೋಷಕರನ್ನು ಕಂಗೆಡಿಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಆರ್ಕಿಡ್ ಸ್ಕೂಲ್‌ನಲ್ಲಿ ಎಂಟನೇ ತರಗತಿ ಪಬ್ಲಿಕ್ ಪರೀಕ್ಷೆ ವಿಷಯಕ್ಕೆ ಬಂದಾಗ ಸಿಬಿಎಸ್‌ಇ ಮಾನ್ಯತೆ ಇಲ್ಲದಿರುವುದು ಬಯಲಿಗೆ ಬಂದಿತ್ತು. ಇಲ್ಲಿ ಕೂಡಾ ಅದೇ ಹಂತದಲ್ಲಿ ಪೋಷಕರಿಗೆ ಗೊತ್ತಾಗಿದೆ. ಸ್ಕೂಲ್‌ಗೆ ಸಿಬಿಎಸ್‌ಇ ಮಾನ್ಯತೆ ಇಲ್ಲದೆ ಇರುವುದರಿಂದ ರಾಜ್ಯ ಪಠ್ಯಕ್ರಮದ ಪ್ರಕಾರವೇ ಪರೀಕ್ಷೆ ನಡೆಸಲು ಮುಂದಾಗಿದ್ದನ್ನು ಪೋಷಕರು ಪ್ರಶ್ನಿಸಿದ್ದಾರೆ.
ಈ ಸ್ಕೂಲ್‌ಗೆ ಸಿಬಿಎಸ್‌ಇ ಮಾನ್ಯತೆ ಇದೆ ಎಂದು ನಂಬಿಸಿ ಸಂಸ್ಥೆ ವಿದ್ಯಾರ್ಥಿಗಳ ಪ್ರವೇಶಾತಿ ವೇಳೆ ಲಕ್ಷಾಂತರ ರೂಪಾಯಿ ಡೊನೇಷನ್ ಪಡೆದಿದೆ. ತಾವು ಸಿಬಿಎಸ್‌ಇ ಎಂಬ ಕಾರಣಕ್ಕೆ ಇಷ್ಟೊಂದು ಹಣ ಕೊಟ್ಟಿದ್ದೇವೆ. ಒಂದು ವೇಳೆ ರಾಜ್ಯ ಪಠ್ಯಕ್ರಮವೇ ಎಂದಾದರೆ ಈ ಸ್ಕೂಲ್‌ಗೇ ಸೇರಿಸುತ್ತಿರಲಿಲ್ಲ. ಅಥವಾ ಇಷ್ಟೊಂದು ಶುಲ್ಕ ಪಾವತಿಸುವ ಅಗತ್ಯವೂ ಇರಲಿಲ್ಲ ಎಂದು ಪೋಷಕರು ಹೇಳಿದ್ದಾರೆ.
ʻʻಅಡ್ಮಿಷನ್ ಮಾಡಿಸಿಕೊಳ್ಳುವಾಗ ನಮ್ಮದು CBSE ಮಾನ್ಯತೆ ಪಡೆದ ಶಾಲೆ ಅಂತ ಹೇಳಿದ್ದರು. ಈಗ ನೋಡಿದರೆ ಮಗುವನ್ನು ಸ್ಟೇಟ್ ಸಿಲೆಬಸ್ ಅಲ್ಲಿಯೇ ಎಕ್ಸಾಂ ಬರೆಸಲು ಶಾಲಾ ಆಡಳಿತ ಮುಂದಾಗಿದೆ. ಸ್ಟೇಟ್ ಸಿಲೆಬಸ್‌ನಲ್ಲಿ ಮಗು ಎಕ್ಸಾಂ ಬರೆಯೋದಾದ್ರೆ ನಾವ್ಯಾಕೆ ಲಕ್ಷ ಲಕ್ಷ ಫೀಸ್ ಕಟ್ಟಬೇಕು. ನಮ್ಮಿಂದ ಕಂತೆ ಕಂತೆ ಹಣ ಕಟ್ಟಿಸಿಕೊಂಡು ಈಗ ಮಾನ್ಯತೆಯ ಪ್ರೋಸೆಸ್ ಅಲ್ಲಿದ್ದೇವೆ ಅಂತ ನಾಟಕದ ಮಾತು ಆಡುತ್ತಿದ್ದಾರೆʼʼ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಇನ್ನೆಷ್ಟು ಶಾಲೆಗಳು ಮಾನ್ಯತೆ ಪಡೆದಿಲ್ಲ ಎಂದು ಹೇಳಲಾಗುತ್ತಿದ್ದು, ಈ ವಂಚನೆಗೆ ಶಾಶ್ವತ ಪರಿಹಾರ ಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಪೋಷಕರ ಈ ಆತಂಕಕ್ಕೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿ ಸೋಮವಾರ ಸಭೆಯೊಂದನ್ನು ನಡೆಸಲಿದೆ. ಇದಕ್ಕಾಗಿ ಸಾಕಷ್ಟು ಪೋಷಕರು ಶಾಲೆ ಬಳಿ ಆಗಮಿಸಿದ್ದಾರೆ.