ಬೆಂಗಳೂರು: ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಘಟನೆಯ ಆಶ್ರಯದಲ್ಲಿ ಜನವರಿ ೧೨ರ ವಿವೇಕಾನಂದ ಜಯಂತಿಯಿಂದ ಜನವರಿ ೨೬ರ ಗಣರಾಜ್ಯೋತ್ಸವವರೆಗೆ ದೇಶದ ಹೆಸರಿನಲ್ಲಿ ಒಂದು ಗಿಡ ಎಂಬ ಮಹಾ ಅಭಿಯಾನ ನಡೆಯಲಿದೆ. ಬೀಜಾರೋಪಣದಿಂದ ವೃಕ್ಷಾರೋಪಣ-೨೦೨೩ ಎಂಬ ದೇಶಾದ್ಯಂತ ಪರಿಸರ ಬೆಳೆಸುವ ಸಾರ್ವಜನಿಕ ಕಳಕಳಿಯ ಆಂದೋಲನಕ್ಕೆ ವಿಸ್ತಾರ ನ್ಯೂಸ್ ಸಹಯೋಗವನ್ನು ನೀಡಿದೆ. ಜನವರಿ ೧೨ರಂದು ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಘಟನೆಯ ಅಖಿಲ ಭಾರತ ಮಟ್ಟದ ಒಂದು ಸಂಘಟನೆ. ದೇಶಾದ್ಯಂತ ರಾಜ್ಯ, ಜಿಲ್ಲೆ, ನಗರ ತಾಲೂಕು ಪ್ರತಿ ಹಂತದಲ್ಲೂ ತನ್ನದೇ ಆದ ಕಾರ್ಯಕರ್ತರ ಗುಂಪನ್ನು ಹೊಂದಿದೆ.
2019ರಲ್ಲಿ ಪ್ರಾರಂಭವಾದ ಈ ಸಂಘಟನೆ, ಅಂದಿನಿಂದ ರಾಷ್ಟ್ರದೆಲ್ಲೆಡೆ ಜಲ ಸಂರಕ್ಷಣೆ, ವೃಕ್ಷಾರೋಪಣ, ಮರು ಬಳಕೆ ಆಗದ ಪ್ಲಾಸ್ಟಿಕ್ ನಿಷೇಧ, ಇಂಧನ ಸಂರಕ್ಷಣೆ, ಜೀವ ವೈವಿಧ್ಯತೆಯ ಸಂರಕ್ಷಣೆ ಈ ಅಂಶಗಳಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ.
ಈ ಸಂಘಟನೆಯ ಎಲ್ಲ ಕಾರ್ಯಕರ್ತರ ಮೂಲ ಕಾರ್ಯ ಪ್ರತಿ ಮನೆ, ಪ್ರತಿ ದೇವಾಲಯ, ಶಿಕ್ಷಣ ಸಂಸ್ಥೆಗಳು, ಪ್ರತಿ ಆಸ್ಪತ್ರೆಗಳು, ಕಚೇರಿಗಳು ಹೀಗೆ ಎಲ್ಲ ಕಡೆ ಪರಿಸರ ಸ್ನೇಹಿ ಅಂಶಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು.
ಹವಾಮಾನ ವೈಪರಿತ್ಯ (climate change), ಇಂಗಾಲದ ಹೆಜ್ಜೆ ಗುರುತು (carbon foot print) ಇಂತಹ ವಿಷಯಗಳು ವಿಶ್ವವನ್ನೇ ಕಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಪ್ರತಿಯೊಬ್ಬರ ಜವಾಬ್ದಾರಿ ಅರಿವನ್ನು ಮೂಡಿಸಲು ಪರಿಸರ ಸಂರಕ್ಷಣ ಗತಿವಿಧಿ ಅನೇಕ ಅಭಿಯಾನ ಮಾಡುತ್ತಿದ್ದು , ಈಗ ಮನೆ ಮನೆಯಲ್ಲಿ ನರ್ಸರಿ, ಬೀಜಾರೋಪಣದಿಂದ ವೃಕ್ಷಾರೋಪಣ ಅನ್ನುವ ಹೊಸ ಅಭಿಯಾನ ಪ್ರಾರಂಭಿಸುತ್ತಿದೆ, ಈ ಅಭಿಯಾನ ದೇಶದಾದ್ಯಂತ ವಿವೇಕಾನಂದ ಜಯಂತಿಯಂದು ಪ್ರಾರಂಭಗೊಂಡು ಗಣರಾಜ್ಯೋತ್ಸವದ ವರೆಗೆ ನಡೆಯುತ್ತಿರುವುದರಿಂದ, ಪರಿಸರ ಕಾಳಜಿಯ ಜೊತೆಗೆ ಪ್ರತಿ ವ್ಯಕ್ತಿಯ ದೇಶ ಭಕ್ತಿ ಜಾಗೃತಗೊಳಿಸುವ ಸಲುವಾಗಿ ಈ ಅಭಿಯಾನಕ್ಕೆ ದೇಶದ ಹೆಸರಿನಲ್ಲಿ ಒಂದು ಗಿಡ ಎಂಬ ಶೀರ್ಷಿಕೆ ಕೊಡಲಾಗಿದೆ.
ನಾವೇನು ಮಾಡಬೇಕು?: ಈಗ ಬೀಜ ಹಾಕಿ, ಮಳೆಗಾಲದಲ್ಲಿ ಗಿಡ ನೆಡಿ
ಪ್ರತಿ ಮನೆಯಲ್ಲೂ ದಿನ ಬಳಕೆ ಹಣ್ಣುಗಳಿಂದ ಸಹಜವಾಗಿಯೇ ಲಭ್ಯವಾಗುವ ಬೀಜಗಳನ್ನು ಬಳಸಿ, ಮನೆಯಲ್ಲಿ ಬರುವ ಹಾಲಿನ ಕವರ್, ರಿಫೈನ್ಡ್ ಎಣ್ಣೆ ಕವರ್‌ಗಳನ್ನು ಬಳಸಿ ಈಗ ಬೀಜ ಬಿತ್ತನೆ ಮಾಡಿ ತಯಾರಾದ ಸಸಿಯನ್ನು ಮಳೆಗಾಲದಲ್ಲಿ ನೆಡುವ ಕಾರ್ಯ ಪ್ರತಿ ಮನೆಯಲ್ಲೂ ಆಗಬೇಕು, ಈ ಮೂಲಕ ಪ್ರಕೃತಿ ಮಾತೆಯ ಪೋಷಣೆ ಆಗಬೇಕು, ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಮೂಡಬೇಕು ಅನ್ನುವುದೇ ಅಭಿಯಾನದ ಮುಖ್ಯ ಉದ್ದೇಶ.
ಇಡೀ ದೇಶದಲ್ಲಿ 10,000 ಕಾರ್ಯಕರ್ತರು ಈ ಅಭಿಯಾನದ ಯಶಸ್ವಿಗೆ ಕೆಲಸ ಮಾಡಲಿದ್ದಾರೆ.
ಕರ್ನಾಟಕದಲ್ಲಿ ಸಹ 1,200ಕ್ಕೂ ಅಧಿಕ ಕಾರ್ಯಕರ್ತರು ಈ ಅಭಿಯಾನದ ಅನುಷ್ಠಾನ ಮಾಡಲು ಜನರನ್ನು ಸಂಪರ್ಕಿಸಿ ʻಹರಿತ ಮಿಲನ್ʼ ಅನ್ನುವ ವಿಶೇಷ ಕಾರ್ಯಕ್ರಮ ಮಾಡಲಿದ್ದಾರೆ.
ಮನೆ ಮನೆಗಳಲ್ಲಿ ಕನಿಷ್ಠ ಬೀಜಾರೋಪಣ ಮಾಡಿ ಮುಂದಿನ ಜನಾಂಗಕ್ಕಾಗಿ ಪ್ರತಿಯೊಬ್ಬರೂ ಒಂದು ಗಿಡವನ್ನು ನೆಟ್ಟು ಪೋಷಿಸುವಂತಾಗಬೇಕು, ಹೀಗಾಗಿ ಸಮಾಜ ಬಂಧುಗಳು ಸ್ವಯಂಪ್ರೇರಣೆಯಿಂದ ತಮ್ಮ ತಮ್ಮ ಮನೆಗಳಲ್ಲಿ ಈ ಅಭಿಯಾನ ಆರಂಭಿಸಲು ಪರ್ಯಾವರಣ ಸಂರಕ್ಷಣೆ ಗತಿ ವಿಧಿ ಕೋರಿದೆ.
ಇದನ್ನೂ ಓದಿ | Joshimath Sinking | ಉತ್ತರಾಖಂಡದ ಜೋಶಿಮಠ ಪಟ್ಟಣ ಮುಳುಗುತ್ತಿರುವುದೇಕೆ? 600 ಮನೆ ಬಿರುಕು ಬಿಟ್ಟಿರುವುದೇಕೆ?