ನವದೆಹಲಿ: ಅದು 2022ರ ಸೆಪ್ಟೆಂಬರ್. ಸೋನಿಯಾ ಗಾಂಧಿ ಆಪ್ತ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರೇ ಎಐಸಿಸಿ ಅಧ್ಯಕ್ಷರಾಗುತ್ತಾರೆ ಎನ್ನಲಾಗಿತ್ತು. ಆದರೆ, ರಾಜಸ್ಥಾನ ಮುಖ್ಯಮಂತ್ರಿ ಹುದ್ದೆ ಮೇಲಿನ ಅತಿಯಾದ ಪ್ರೀತಿ, ಸಚಿನ್ ಪೈಲಟ್ ಅವರಿಗೆ ಸಿಎಂ ಗಾದಿ ಬಿಡಬಾರದು ಎಂಬ ಧೋರಣೆ ಹಾಗೂ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದ ಹಿನ್ನೆಲೆಯಲ್ಲಿ ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷ ಗಾದಿಯ ರೇಸ್‌ನಿಂದ ಹಿಂದೆ ಉಳಿದರು. ಆಗ, ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮಧ್ಯೆ ಸ್ಪರ್ಧೆ ನಡೆದು, ಕೊನೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಹೀಗೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಗುರುವಾರಕ್ಕೆ (ಅಕ್ಟೋಬರ್ 26) ಒಂದು ವರ್ಷ ತುಂಬಿದೆ.
ಹಾಗಾದರೆ, ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಒಂದು ವರ್ಷದಲ್ಲಿ ಪಕ್ಷವನ್ನು ಹೇಗೆ ಮುನ್ನಡೆಸಿದರು? ಅವರ ಅವಧಿಯಲ್ಲಿ ಪಕ್ಷ ಮಾಡಿದ ಸಾಧನೆ ಏನು? ಖರ್ಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳೇನು? ಅನುಭವಿಸಿದ ಹಿನ್ನಡೆಗಳೇನು? ಮಲ್ಲಿಕಾರ್ಜುನ ಖರ್ಗೆ ಅವರ ಮುಂದಿರುವ ಸವಾಲುಗಳೇನು ಎಂಬುದರ ಮಾಹಿತಿ ಇಲ್ಲಿದೆ.
ಖರ್ಗೆ ಅವರ ಸಾಧನೆಗಳೇನು?
ಹಾಗೆ ನೋಡಿದರೆ, ನೆಹರು-ಗಾಂಧಿ ಕುಟುಂಬಸ್ಥರ ಹೊರತಾಗಿ ಕಾಂಗ್ರೆಸ್ ಪಕ್ಷವನ್ನು ಯಾರೂ ಸಮರ್ಥವಾಗಿ ಮುನ್ನಡೆಸಲು ಸಾಧ್ಯವಿಲ್ಲ ಎಂಬ ಮಾತಿತ್ತು. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ಈ ಮಾತನ್ನು ಹುಸಿಗೊಳಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದುವರೆಗೆ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಅಧಿಕಾರದ ಗದ್ದುಗೆ ಏರಿದೆ. ಅದರಲ್ಲೂ, ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲುವುದರ ಹಿಂದೆ ಖರ್ಗೆ ರಣತಂತ್ರದ ಪಾತ್ರ ಹೆಚ್ಚಿದೆ.
ಬಿಕ್ಕಟ್ಟು ಶಮನ, ಒಗ್ಗಟ್ಟಿಗೆ ನಮನ
ಕಾಂಗ್ರೆಸ್‌ನಲ್ಲಿರುವ ಆಂತರಿಕ ಬಿಕ್ಕಟ್ಟಿನಿಂದಾಗಿಯೇ ಸೋನಿಯಾ ಗಾಂಧಿ ಅವರು ಅಧ್ಯಕ್ಷ ಹುದ್ದೆಯಿಂದ ಹಿಂದೆ ಸರಿಯಬೇಕಾಯಿತು. ಆದರೆ, ಖರ್ಗೆ ಅವರು ಅಧ್ಯಕ್ಷರಾದ ಬಳಿಕ ಪಕ್ಷದ ಆಂತರಿಕ ಬಿಕ್ಕಟ್ಟು ಶಮನಗೊಳಿಸಲು ಆದ್ಯತೆ ನೀಡಿದರು. ರಾಜಸ್ಥಾನ, ಹಿಮಾಚಲ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಸಾಲು ಸಾಲು ಸಭೆ, ನಾಯಕರ ಜತೆಗಿನ ಮಾತುಕತೆ ಮೂಲಕ ಪಕ್ಷದ ಆಂತರಿಕ ಬಿಕ್ಕಟ್ಟನ್ನು ಕಡಿಮೆ ಮಾಡಿದ್ದಾರೆ. ಅದರಲ್ಲೂ, ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಅವರ ನಡುವಿನ ಬಿಕ್ಕಟ್ಟನ್ನು ಕುಂಠಿತಗೊಳಿಸಿದ್ದು ಖರ್ಗೆ ಅವರ ಪ್ರಮುಖ ಸಾಧನೆಯಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಸಿಎಂ ಗಾದಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟವನ್ನೂ ಶಮನಗೊಳಿಸಿ, ‘ಗ್ಯಾರಂಟಿ’ ಸರ್ಕಾರ ಟೇಕ್‌ಆಫ್ ಆಗುವಂತೆ ಮಾಡುವಲ್ಲಿಯೂ ಖರ್ಗೆ ನಾಯಕತ್ವ ಹಿರಿದಾಗಿದೆ.
ಇಂಡಿಯಾ ಒಕ್ಕೂಟ ರಚನೆ, ಮುಂದಾಳತ್ವ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಶತಾಯ ಗತಾಯ ಸೋಲಿಸುವ ದಿಸೆಯಲ್ಲಿ 26 ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚನೆಯ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ ದೊಡ್ಡದಿದೆ. ನಿತೀಶ್ ಕುಮಾರ್ ಸೇರಿ ಹಲವು ನಾಯಕರ ಜತೆ ಮಾತುಕತೆ, ಇಂಡಿಯಾ ಒಕ್ಕೂಟ ರಚನೆ, ಒಕ್ಕೂಟದಲ್ಲಿ ಒಗ್ಗಟ್ಟು, ಬಿಜೆಪಿ ವಿರುದ್ಧ ರಣತಂತ್ರ ಸೇರಿ ಹಲವು ರೀತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವು ಪರಿಣಾಮ ಬೀರಿದೆ.
ಖರ್ಗೆ ಅನುಭವಿಸಿದ ಹಿನ್ನಡೆಗಳೇನು?
ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಆಂತರಿಕ ಬಿಕ್ಕಟ್ಟು ಶಮನಗೊಳಿಸುವಲ್ಲಿ ಯಶಸ್ವಿಯಾದರೂ, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ,, ಜನಾಭಿಪ್ರಾಯ ರೂಪಿಸುವಲ್ಲಿ ಅವರ ನಾಯಕತ್ವ ತುಸು ಹಿನ್ನಡೆ ಅನುಭವಿಸಿದೆ. ಮಣಿಪುರ ವಿಷಯದ ಕುರಿತು ಧ್ವನಿ ಎತ್ತುವುದನ್ನು ಅರ್ಧಕ್ಕೇ ನಿಲ್ಲಿಸಿದ್ದು, ಬೆಲೆಯೇರಿಕೆ ವಿಷಯವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳದಿರುವುದು ಕೂಡ ಲೋಕಸಭೆ ಚುನಾವಣೆ ದೃಷ್ಟಿಯಿಂದ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇನ್ನು ಇಂಡಿಯಾ ಒಕ್ಕೂಟದ ರಚನೆ ಬಳಿಕ ಮಿತ್ರಪಕ್ಷಗಳಲ್ಲೇ ಉಂಟಾದ ಬಿಕ್ಕಟ್ಟು ಶಮನ, ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಉಂಟಾದ ಗೊಂದಲ ನಿವಾರಣೆ ಸೇರಿ ಹಲವು ವಿಷಯಗಳಲ್ಲಿ ಖರ್ಗೆ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮರ್ಜಿಗೆ ಕಾಯುತ್ತಿರುವಂತಿದೆ.
ಇದನ್ನೂ ಓದಿ: PM Candidate: ಖರ್ಗೆ ಅಥವಾ ರಾಹುಲ್ ಪ್ರಧಾನಿ ಅಭ್ಯರ್ಥಿ! ಸುಳಿವು ಬಿಟ್ಟುಕೊಟ್ಟ ಶಶಿ ತರೂರ್
ಅವರ ಮುಂದಿರುವ ಸವಾಲುಗಳೇನು?
ಮಲ್ಲಿಕಾರ್ಜುನ ಖರ್ಗೆ ಅವರು ಒಂದು ವರ್ಷ ಪಕ್ಷವನ್ನು ಮುನ್ನಡೆಸಿದರೂ, ಮುಂದಿರುವ ಸವಾಲುಗಳು ಬೆಟ್ಟದಷ್ಟಿವೆ. ವರ್ಷಾಂತ್ಯದಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಇದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದರಲ್ಲೂ, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವುದು ಕೂಡ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದರ ಜತೆಗೆ ಚುನಾವಣೆಗಳ ವೇಳೆ ಭುಗಿಲೇಳುವ ಆಂತರಿಕ ಬಿಕ್ಕಟ್ಟು, ಲೋಕಸಭೆ ಚುನಾವಣೆ ಮುಗಿಯುವವರೆಗೆ ಇಂಡಿಯಾ ಒಕ್ಕೂಟದ ಒಗ್ಗಟ್ಟು ಕಾಪಿಟ್ಟುಕೊಳ್ಳುವುದು ಕೂಡ ಖರ್ಗೆ ಅವರ ಮುಂದಿರುವ ಸವಾಲುಗಳಾಗಿವೆ.