Site icon Vistara News

Onion prices fall: ಈರುಳ್ಳಿ ಬೆಲೆ ಕುಸಿತಕ್ಕೆ ಕುಸಿದ ರೈತ; ಬೆಂಗಳೂರಲ್ಲಿ ಮಾರಿದ್ದು ದಕ್ಕಲಿಲ್ಲ; ಊರಲ್ಲಿ ಮಾರಿದರೂ ದರ ಸಿಗುತ್ತಿಲ್ಲ

Onion prices fall Farmers are worried Demand for scientific pricing

ಕಲಬುರಗಿ: ಮಾರುಕಟ್ಟೆಯಲ್ಲಿರುವ ಬೆಲೆ ರೈತರಿಗೆ ಸಿಗುತ್ತಿಲ್ಲ ಎಂಬ ಕೂಗು ಮತ್ತೆ ಕೇಳಿಸತೊಡಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗದೆ (Onion prices fall) ರೈತರೊಬ್ಬರು ಕಂಗಾಲಾಗಿದ್ದಾರೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದ ರೈತರೊಬ್ಬರು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.

ರೈತ ಮಾಣಿಕ್‌ರಾವ್ ಮಾಲಿಪಾಟೀಲ ಎಂಬುವವರು ಯಲಕಪಳ್ಳಿ ಗ್ರಾಮದ ತಮ್ಮ ನಾಲ್ಕು ಎಕರೆ ಭೂಮಿಯಲ್ಲಿ 2 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಈರುಳ್ಳಿಯನ್ನು ಬೆಳೆದಿದ್ದರು. ಆದರೆ, ಈರುಳ್ಳಿಗೆ ವೈಜ್ಞಾನಿಕ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೊಲದಲ್ಲಿ ರಾಶಿ ಹಾಕಿರುವ ಈರುಳ್ಳಿಯನ್ನು ತೋರಿಸುತ್ತಿರುವ ರೈತ

ಮಾಣಿಕ್‌ರಾವ್ ಈಗಾಗಲೇ ಬೆಂಗಳೂರಿನಲ್ಲಿ 18 ಟನ್ ಈರುಳ್ಳಿಯನ್ನು ಕೆಜಿಗೆ 4 ರೂಪಾಯಿಯಿಂದ 8.79 ರೂಪಾಯಿವರೆಗೆ ಮಾರಾಟ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಆದಾಯ ನಿರೀಕ್ಷೆಯಲ್ಲಿದ್ದ ಇವರಿಗೆ ಈಗ ಆಘಾತವಾಗಿದೆ.

ಇದನ್ನೂ ಓದಿ: Congress leader attacked : ಯುವ ಕಾಂಗ್ರೆಸ್‌ ಅಧ್ಯಕ್ಷನಿಗೆ ಚೂರಿಯಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು

ಒಳ್ಳೆಯ ದರ ಸಿಗದೇ ಇರುವುದಕ್ಕೆ ಜಮೀನಿನಲ್ಲಿ ಇನ್ನೂ 7 ಟನ್ ಈರುಳ್ಳಿ ಸಂಗ್ರಹಿಸಿಟ್ಟಿದ್ದಾರೆ. ನಮ್ಮ ರೈತರ ಕಷ್ಟವನ್ನು ಕೇಳುವವರೇ ಇಲ್ಲ. ಕಷ್ಟಪಟ್ಟು ಬೆಳೆ ಬೆಳೆಯುತ್ತೇವೆ. ಆದರೆ, ನಮಗೆ ಅದರ ದರವು ಸಿಗುವುದೇ ಇಲ್ಲ. ಈ ಬಾರಿ ಒಳ್ಳೆಯ ಇಳುವರಿ ಬಂದಿತ್ತು. ಉತ್ತಮ ಬೆಲೆ ಸಿಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ, ಈಗ ನನಗೆ ತೀವ್ರ ನಷ್ಟವಾಗುತ್ತಿದೆ. ಹಾಕಿದ ಬೀಜದ ದುಡ್ಡು ಸಹ ಹುಟ್ಟುವುದಿಲ್ಲ ಎಂದರೆ ಏನರ್ಥ? ಬೆಂಗಳೂರಿಗೆ ಸಾಗಾಟ ಮಾಡಿದ ವಾಹನದ ಖರ್ಚು ಸಹ ನಷ್ಟದ ಬಾಬ್ತಿಗೆ ಸೇರಿದೆ. ಶಾಸಕರೇ, ಕೃಷಿ ಸಚಿವರೇ ನಮ್ಮತ್ತ ನೋಡಿ, ನಮಗೆ ಸೂಕ್ತ ಬೆಲೆ ಕಲ್ಪಿಸಿ ರೈತರ ಸಂಕಷ್ಟಕ್ಕೆ ನೆರವಾಗಿ ಎಂದು ರೈತ ಮಾಣಿಕ್‌ರಾವ್ ಮಾಲಿಪಾಟೀಲ ಗೋಳಿಟ್ಟಿದ್ದಾರೆ.

ಗ್ರಾಮದ ಸುತ್ತಮುತ್ತಲೇ ಮಾರಾಟಕ್ಕೆ ನಿರ್ಧಾರ

ಈಗಾಗಲೇ ಮಾರಾಟ ಮಾಡಿರುವ ೧೮ ಟನ್‌ ಈರುಳ್ಳಿಗಂತೂ ಬೆಲೆ ಸಿಗಲಿಲ್ಲ. ಇನ್ನು ಉಳಿದಿರುವ ೭ ಟನ್‌ ಈರುಳ್ಳಿಯನ್ನಾದರೂ ಸೂಕ್ತ ದರಕ್ಕೆ ಮಾರಾಟ ಮಾಡಿ, ಹಾಕಿದ ಖರ್ಚನ್ನಾದರೂ ಮರಳಿ ಪಡೆಯಬೇಕು ಎಂದುಕೊಂಡಿದ್ದೇನೆ. ಇದಕ್ಕಾಗಿ ಗ್ರಾಮದ ಸುತ್ತಮುತ್ತ ಮಾರಾಟ ಮಾಡುತ್ತೇನೆ. ಆದರೆ, ಇಲ್ಲಿಯೂ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು ಎಂದು ಮಾಣಿಕ್‌ರಾವ್‌ ಆಗ್ರಹಿಸಿದ್ದಾರೆ.

ರಸ್ತೆಯಲ್ಲಿ ಹೋಗುವವರಿಗೆ ಕಾಸಿಲ್ಲದೆ ಕೊಟ್ಟರು ಎಲೆಕೋಸು

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ರೈತರ ಗೋಳು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಲಕ್ಷ ಲಕ್ಷ ಬಂಡವಾಳ ಹಾಕಿ ಬೆಳೆದ ಎಲೆಕೋಸಿಗೆ ಮಾರುಕಟ್ಟೆಯಲ್ಲಿ (Chamarajnagar Farmers) ಸರಿಯಾದ ಬೆಲೆ ಸಿಗದೆ ರೈತರು ಕಂಗಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹೋಗಿಬರುವ ಜನರಿಗೆಲ್ಲ ರೈತರು ಉಚಿತವಾಗಿ ಎಲೆಕೋಸನ್ನು ಕೊಟ್ಟು ಕಳುಹಿಸುತ್ತಿದ್ದಾರೆ.

ಗುಂಡ್ಲುಪೇಟೆ ತರಕಾರಿ ಮಾರುಕಟ್ಟೆಯಲ್ಲಿ ಎಲೆಕೋಸು ಬೆಳೆದ ರೈತರ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್‌ಗೆ ಎಲೆಕೋಸು ಕೊರಿಯರ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ನನ್ನನ್ನು ಮೂಲೆಗುಂಪು ಮಾಡಿಲ್ಲ, ಟಿಪ್ಪು-ಹಿಜಾಬ್​ಗಳೆಲ್ಲ ಅನಗತ್ಯ ವಿಚಾರಗಳು: ಬಿ.ಎಸ್​. ಯಡಿಯೂರಪ್ಪನವರ ಮಾತುಗಳಿವು

ಇಷ್ಟು ಮಾತ್ರವಲ್ಲದೇ ತಾವು ಬೆಳದ ಎಲೆಕೋಸನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗದೆ, ನಡುರಸ್ತೆಯಲ್ಲಿ ನಿಂತು ಹೋಗಿ ಬರುವ ವಾಹನಗಳನ್ನು ತಡೆದು ಉಚಿತವಾಗಿ ಎಲೆಕೋಸು ವಿತರಣೆ ಮಾಡಿದ್ದಾರೆ. ಒಂದು ಕೆಜಿ ಎಲೆಕೋಸಿನ ಬೆಲೆ ಕೇವಲ 75 ಪೈಸೆ ಇದೆ. ಜಮೀನಿಂದ ತರಕಾರಿ ಮಾರುಕಟ್ಟೆಗೆ ಎಲೆಕೋಸು ಸಾಗಣೆಯ ಬಾಡಿಗೆಯೂ ಸಿಗದೆ ರೈತರು ಹತಾಶರಾಗಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಹಾಕದೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಉಚಿತವಾಗಿ ಹಂಚಿದ್ದಾರೆ.

Exit mobile version