ಬೆಂಗಳೂರು: ನಗರದಲ್ಲೇ ಕುಳಿತು ವಿದೇಶಿಯರನ್ನು ಆನ್‌ಲೈನ್ ಮೂಲಕ ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಮೇಲೆ ವೈಟ್‌ಫೀಲ್ಡ್ ಹಾಗೂ ಮಹದೇವಪುರ ಠಾಣೆ ಪೊಲೀಸರು ದಾಳಿ ಮಾಡಿ ಗುಜರಾತ್ ಮೂಲದ ಆರು ಆರೋಪಿಗಳನ್ನು ಬಂಧಿಸಿ, ಎರಡು ಕೋಟಿ ರೂಪಾಯಿ ಮೌಲ್ಯದ 127 ಕಂಪ್ಯೂಟರ್‌ಗಳು, 150 ಹೆಡ್ ಫೋನ್, 10 ಹಾರ್ಡ್ ಡಿಸ್ಕ್, ಆ್ಯಪಲ್ ಕಂಪನಿಯ ಆರು ಮೊಬೈಲ್, ಮೂರು ಕಾರು, ಎರಡು ಶಾಲಾ ವಾಹನ, ಒಂದು ಟಿಟಿ ವಾಹನ, 18 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಸಾಯಿಬಾಬಾ ಆಸ್ಪತ್ರೆ ಬಳಿಯ ಎಥಿಕಲ್ ಇನ್ಫಾರ್ಮೇಷನ್ ಟೆಕ್ನಾಲಜಿ ಕಂಪನಿಯಿಂದ ಆನ್‌ಲೈನ್ ವಂಚನೆ ನಡೆಸಲಾಗುತ್ತಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದ ಈ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಮಾತ್ರ ಸುಮಾರು ನೂರು ಮಂದಿ ಕೆಲಸ ಮಾಡುತ್ತಿದ್ದರು. ವಿದೇಶಿಯರರನ್ನು ಫೋನ್ ಕಾಲ್, ಎಸ್‌ಎಂಎಸ್ ಮೂಲಕ ಸಂಪರ್ಕಿಸಿ ಬ್ಯಾಂಕ್ ಹಾಗೂ ಆರ್ಥಿಕ ವ್ಯವಹಾರಗಳ ಅಧಿಕಾರಿಗಳ ಸೋಗಿನಲ್ಲಿ, ಅಮೆಜಾನ್ ಅಕೌಂಟ್ ಹಾಗೂ ಆನ್‌ಲೈನ್ ಶಾಪಿಂಗ್ ಖಾತೆಗಳನ್ನು ಬಳಸಿ ಆನ್‌ಲೈನ್ ಮೂಲಕ ಆರೋಪಿಗಳು ವಂಚಿಸುತ್ತಿದ್ದರು.
ಇದನ್ನೂ ಓದಿ | ಗಾಣಗಾಪುರ ದೇವಾಲಯದಲ್ಲಿ ನಕಲಿ ವೆಬ್‌ಸೈಟ್ ರಚಿಸಿ ವಂಚನೆ ಮಾಡಿದ್ದ ಅರ್ಚಕರಿಗೆ ನಿರೀಕ್ಷಣಾ ಜಾಮೀನು
ಆನ್‌ಲೈನ್ ವಂಚನೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್‌ನೊಂದಿಗೆ ಕಂಪನಿ ಮೇಲೆ ಗುರುವಾರ ತಡರಾತ್ರಿ ದಾಳಿ ಮಾಡಿ ಸುಮಾರು 70 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೊನೆಗೆ ಆರು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ಹೊರರಾಜ್ಯ, ವಿದೇಶಗಳಲ್ಲೂ ಆರೋಪಿಗಳ ಅಕ್ರಮ ಜಾಲ ಹರಡಿರುವ ಶಂಕೆಯಿದ್ದು, ದಾಳಿಯ ವೇಳೆ ಮಹತ್ವದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದು, ಕಂಪನಿ ಯಾರ ಒಡೆತನದಲ್ಲಿದೆ ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತೆಲುಗು ಸಿನಿಮಾ ಮಾದರಿಯಲ್ಲಿ ವಂಚನೆ
ಟಾಲಿವುಡ್‌ನ “ಮೋಸಗಾಳ್ಳು” ಎಂಬ ಸಿನಿಮಾದಲ್ಲಿ ನಾಯಕ ನಟ ಹಾಗೂ ಆತನ ಸಹೋದರಿ ಬಡತನದಿಂದ ಬೇಸತ್ತು, ಹೇಗಾದರೂ ಮಾಡಿ ಹಣ ಸಂಪಾದಿಸಬೇಕು ಎಂದು ನಕಲಿ ಕಾಲ್ ಸೆಂಟರ್ ಆರಂಭಿಸುತ್ತಾರೆ. ಕಂಪನಿಯಲ್ಲಿ ನೂರಾರು ನೌಕರರನ್ನು ಸೇರ್ಪಡೆ ಮಾಡಿಕೊಂಡು ಅಮೆರಿಕದಲ್ಲಿರುವ ನಾಗರಿಕರಿಗೆ, ಆದಾಯ ತೆರಿಗೆ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ನೀವು ತೆರಿಗೆ ಕಟ್ಟಿಲ್ಲ, ನಿಮ್ಮ ಎಟಿಎಂ ಕಾರ್ಡ್‌ನಲ್ಲಿ ಸಮಸ್ಯೆಯಿದೆ ಎಂದು ಹೇಳಿ ಲಕ್ಷಾಂತರ ರೂಪಾಯಿಯನ್ನು ಆನ್‌ಲೈನ್ ಮೂಲಕ ಪಡೆದು ವಂಚನೆ ಮಾಡುತ್ತಿರುತ್ತಾರೆ. ಆದರೆ ಆ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ತಾವು ನಕಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುವ ವಿಷಯವೇ ತಿಳಿದಿರುವುದಿಲ್ಲ. ಕೊನೆಗೆ ಸ್ಥಳೀಯ ಪೊಲೀಸರು ಹಾಗೂ ಅಮೆರಿಕ ಅಧಿಕಾರಿಗಳು ಈ ವಂಚನೆ ಜಾಲವನ್ನು ಭೇದಿಸುತ್ತಾರೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ನಕಲಿ ಐಟಿ ಕಂಪನಿ ನಡೆಸುತ್ತಿದ್ದ ಆರೋಪಿಗಳು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಆದರೆ, ಇಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರೂ ವಂಚನೆಯಲ್ಲಿ ಪಾಲ್ಗೊಂಡಿದ್ದರೆ ಎಂಬುದು ಪೊಲೀಸ್ ತನಿಖೆಯ ನಂತರ ಹೊರಬೀಳಬೇಕಿದೆ.
ಇದನ್ನೂ ಓದಿ | ‘ತೆಲುಗಿನ ಕ್ರೈಮ್ ಸಿನೆಮಾಗಳೇ ಪ್ರೇರಣೆ’; ನಿವೃತ್ತ ಯೋಧ ಸುರೇಶ್ ಕೊಲೆ ಆರೋಪಿಗಳು ಅರೆಸ್ಟ್