ಚಿಕ್ಕಬಳ್ಳಾಪುರ: ಆನ್‌ಲೈನ್ ಲೋನ್ ಆ್ಯಪ್ (Online Loan App) ಹಾವಳಿ ವಿಪರೀತವಾಗಿದ್ದು, ಎಷ್ಟೇ ಕಾನೂನಿನ ಪ್ರಕಾರ ಕಡಿವಾಣ ಹಾಕಿದರೂ ಕಿರುಕುಳಗಳು ಮಾತ್ರ ನಿಂತಿಲ್ಲ. ಲೋನ್ ಪಡೆದುಕೊಳ್ಳುವ ವ್ಯಕ್ತಿಗಳಿಗೆ ಮಾನಸಿಕ ಹಿಂಸೆಯನ್ನು ಕೊಡುವುದು, ಬ್ಲ್ಯಾಕ್‌ಮೇಲ್ ಮಾಡುವುದು ಸೇರಿದಂತೆ ಇನ್ನಿತರ ಅಕ್ರಮ ಮಾರ್ಗಗಳ ಮೂಲಕ ಹೆದರಿಸುವ ಕೆಲಸ ನಡೆಯುತ್ತಿದೆ. ಆನ್‌ಲೈನ್ ಲೋನ್ ಆ್ಯಪ್‌ವೊಂದರ ಉಪಟಳಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಯತ್ನ ಮಾಡಿ ಆಸ್ಪತ್ರೆ ಸೇರಿದ್ದಾರೆ.
ಟಿಬಿ ಟ್ಯಾಂಕ್ ಬಂಡ್ ರಸ್ತೆ ಬಳಿಯ ನಿವಾಸಿ ಕಾರ್ ವರ್ಕ್‌ಶಾಪ್ ಮಾಲೀಕ ಬಾಬಜಾನ್ ಎಂಬುವವರು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ನೂರಕ್ಕೆ ನೂರು ಬಡ್ಡಿ ಹಾಕಿ ಹಿಂಸೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಹಣ ಕಟ್ಟದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೊ ಹಾಕುವುದಾಗಿ ಬೆದರಿಕೆ ಒಡ್ಡಿದ್ದರು. ಆದರೆ, ಬಡ್ಡಿ ಹಣ ಕಟ್ಟಿ ಸುಸ್ತಾಗಿದ್ದ ಬಾಬಜಾನ್ ಅವರು, ಹಣ ಕಟ್ಟುವಲ್ಲಿ ವಿಳಂಬವಾಗಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಇವರ ಮುಖವನ್ನು ಹೋಲುವ ನಕಲಿ ಬೆತ್ತಲೆ ಫೋಟೊವನ್ನು ಹರಿಬಿಟ್ಟಿದ್ದಾರೆ.
ಹೀಗೆ ತನ್ನನ್ನು ಹೋಲುವ ಬೆತ್ತಲೆ ಫೋಟೊವನ್ನು ಆ್ಯಪ್‌ನವರು ಹರಿಬಿಟ್ಟಿದ್ದರಿಂದ ಮನನೊಂದ ಬಾಬಜಾನ್, ವಿಷ ಸೇವನೆ ಮಾಡಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಆಸ್ಪತ್ರೆ ಸೇರಿದ್ದರೂ ಫೋನ್ ಮಾಡಿ ಟಾರ್ಚರ್ ನೀಡಿದ್ದಾರೆ ಎಂದು ಬಾಬಾಜಾನ್ ಪತ್ನಿ ತಾಜುನ್ನೀಸಾ ಆರೋಪಿಸಿದ್ದಾರೆ. ಈ ಸಂಬಂಧ ಕಂಪನಿ ವಿರುದ್ಧ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಲು ಕುಟುಂಬ ಮುಂದಾಗಿದೆ.