ಬೆಂಗಳೂರು: ಅಫಜಲಪುರ ಮಾಜಿ ಶಾಸಕ, ಸಚಿವ ಮಾಲೀಕಯ್ಯ ಗುತ್ತೇದಾರ್, ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಬೆಂಬಲಿಗರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ (Operation Hasta) ಸೇರಿದ್ದಾರೆ.
ಮಾಜಿ ಸಚಿವ ಗುತ್ತೇದಾರ್ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಬಳಿಕ ಕಲಬುರಗಿ ಜಿಲ್ಲೆಯಲ್ಲಿ ಉಂಟಾದ ರಾಜಕೀಯ ಅಸಮಾಧಾನದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಕಾಂಗ್ರೆಸ್‌ಗೆ ಮರಳಿದ್ದಾರೆ. ಹಾಗೆಯೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷದಿಂದ ದೂರ ಉಳಿದಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಇದೀಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿ ಬಗ್ಗೆ ಮಾಲೀಕಯ್ಯ ಗುತ್ತೇದಾರ್ ಅಸಮಾಧಾನ ಯಾಕೆ?
ಸಹೋದರ ನಿತಿನ್ ಗುತ್ತೇದಾರ್ ಹಾಗೂ ಮಾಲೀಕಯ್ಯ ಗುತ್ತೇದಾರ್ ನಡುವಿನ ಸಂಬಂಧ ಮೊದಲಿನಿಂದಲೂ ಎಣ್ಣೆ ಶೀಗೇಕಾಯಿ ಆಗಿತ್ತು. ಒಬ್ಬರು ಒಂದು ಪಕ್ಷದಲ್ಲಿದ್ದರೆ ಮತ್ತೊಬ್ಬರು ಆ ಪಕ್ಷವನ್ನು ತೊರೆಯುತ್ತಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಿತಿನ್ ಗುತ್ತೇದಾರ್ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಇದರಿಂದ ಮಾಲೀಕಯ್ಯ ಗುತ್ತೇದಾರ್ ಸೋಲು ಕಾಣಬೇಕಾಯಿತು. ಈಗ ಈಚೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿತಿನ್ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದು ಮಾಲೀಕಯ್ಯ ಅವರ ಕಣ್ಣನ್ನು ಕೆಂಪಗಾಗಿಸಿತ್ತು.
ಇದನ್ನೂ ಓದಿ: Lok Sabha Election 2024: ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ
ನಿತಿನ್ ಬಿಜೆಪಿ ಸೇರ್ಪಡೆ ಸಂಬಂಧ ಮಾಲೀಕಯ್ಯ ಗುತ್ತೇದಾರ್ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. 2018ರ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಗೆಲ್ಲಬೇಕಿತ್ತು. ನಿತಿನ್ ಮತ್ತು ಕೆಲವು ಬಿಜೆಪಿ ಮುಖಂಡರು ನನಗೆ ಮೋಸ ಮಾಡಿದರು. 2023ರಲ್ಲಿ ನಿತಿನ್ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ನನ್ನನ್ನು ಸೋಲಿಸಿದ್ದಾನೆ. ಈಗ ಆತನಿಂದ ಕೋಟಿ ಕೋಟಿ ಹಣ ಪಡೆದು ಅವನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ಗಂಭೀರ ಆರೋಪ ಮಾಡಿದ್ದರು. ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.