ಬೆಂಗಳೂರು: ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಅದರಲ್ಲೂ ಚಿರತೆ ಪ್ರತ್ಯಕ್ಷವಾಗುತ್ತಿರುವುದು (Operation Leopard) ಸಾಮಾನ್ಯವಾಗುತ್ತಿದೆ. ಬೆಂಗಳೂರು ಹೊರವಲಯದ ಐಟಿಸಿ ಫ್ಯಾಕ್ಟರಿ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಏರ್‌ಪೋರ್ಟ್ ರಸ್ತೆ ತರಬನಹಳ್ಳಿ ಬಳಿಯ ಐಟಿಸಿ ಫ್ಯಾಕ್ಟರಿ ಬಳಿ ಕಾಣಿಸಿಕೊಂಡಿರುವ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಚಿರತೆ ಓಡಾಟವು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು, 2 ತಂಡಗಳಿಂದ ಚಿರತೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಫ್ಯಾಕ್ಟರಿ ಭದ್ರತಾ ಸಿಬ್ಬಂದಿಯಿಂದ ಚಿರತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಚಿರತೆ ಸೆರೆಗಾಗಿ 2 ಬೋನ್ ಇಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ, ಸಿಸಿ ಕ್ಯಾಮೆರಾಗಳ ಮೇಲೆ ಹದ್ದಿನ ಕಣ್ಣಿಟ್ಟುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಸಿಗರೇಟ್ ಫಿಲ್ಟರ್ ಉತ್ಪಾದನಾ ಘಟಕವಾಗಿರುವ ಐಟಿಸಿ ಫ್ಯಾಕ್ಟರಿಯ ವ್ಯಾಪ್ತಿ 80 ಎಕರೆಗೂ ಹೆಚ್ಚಿದೆ. ನೂರಾರು ಮಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಚಿರತೆ ಕಾಣಿಸಿಕೊಂಡಿರುವುದರಿಂದ ಫ್ಯಾಕ್ಟರಿ ಆವರಣದ ಸುತ್ತಮುತ್ತ ಓಡಾಡಲು ಕಾರ್ಮಿಕರು ಭಯಪಡುವಂತಾಗಿದೆ.
ಕಳೆದ ವರ್ಷವೂ 8 ಚಿರತೆಗಳ ಸೆರೆ
ಸೋಮಪುರ ಸಮೀಪದ ಕೋಡಿಪಾಳ್ಯ ಚಿರತೆಗಳು ಪ್ರತ್ಯಕ್ಷವಾಗಿದ್ದು, ಬಿಡಿಎ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚಿರತೆಯು ಜಿಂಕೆಯನ್ನು ಬೇಟೆಯಾಡಿತ್ತು. ಈ ಪ್ರದೇಶದ ಸುತ್ತಮುತ್ತ ಶಾಲೆಗಳಿವೆ. ಕಳೆದ ಒಂದೂವರೆ ವರ್ಷದಲ್ಲಿ 7ರಿಂದ 8 ಚಿರತೆಗಳನ್ನು ಹಿಡಿಯಲಾಗಿತ್ತು. ಈಗಲೂ ಕನಿಷ್ಠ 7 ಚಿರತೆಗಳು ಆ ಭಾಗದಲ್ಲೇ ಇವೆ ಎಂದು ಕಗ್ಗಲೀಪುರ ರೇಂಜ್‌ನ ನಿವೃತ್ತ ಆರ್‌ಎಫ್ಒ ಗೋಪಾಲ್ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಅವುಗಳು ಮನಷ್ಯನ ಮೇಲೆ ಆಕ್ರಮಿಸುವುದಿಲ್ಲ. ಬದಲಿಗೆ ಕುರಿ, ಮೇಕೆ, ಮೊಲ, ನಾಯಿ, ಹಂದಿ, ಜಿಂಕೆಯಂತಹ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ. ಕಾಡಿನ 15 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಅವು ವಾಸಿಸುತ್ತವೆ. ಆಹಾರ ಸಿಗುವುದು ಖಾತ್ರಿಯಾದರೆ ಆ ಜಾಗವನ್ನು ಬಿಟ್ಟು ಕದಲುವುದಿಲ್ಲ. ಚಿರತೆಯು ಪ್ರತಿನಿತ್ಯ ತನ್ನ ವಾಸ ಸ್ಥಾನವನ್ನು ಬದಲಿಸುತ್ತಿರುತ್ತದೆ ಎಂದು ಗೋಪಾಲ್ ತಿಳಿಸಿದ್ದಾರೆ.
ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತುಗಳು ಪತ್ತೆ, ರೈತರಲ್ಲಿ ಆತಂಕ
ಐಟಿಸಿ ಫ್ಯಾಕ್ಟರಿ ಹಿಂಭಾಗದಲ್ಲಿರುವ ರೈತರ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ತರಬನಹಳ್ಳಿ ಗ್ರಾಮದ ಬಳಿ ಚಿರತೆ ಓಡಾಡಿಕೊಂಡಿದ್ದು, ಹೆಜ್ಜೆಗಳನ್ನ ಗುರುತಿಸಿ ಅರಣ್ಯ ಇಲಾಖೆ ಅಧಿಕಾರಿಗಳು ರೌಂಡ್ ಮಾಡಿದ್ದಾರೆ. ಜಮೀನುಗಳಲ್ಲಿ ಕೆಲಸ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ತೋಟದ ಮನೆಯನ್ನು ಖಾಲಿ ಮಾಡಿ ಕೆಲ ರೈತರು ಹೊರಟಿದ್ದಾರೆ. ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿದೆ. ಇತ್ತ ಐಟಿಸಿ ಫ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದರೂ ಆಡಳಿತ ಮಂಡಳಿ ರಜೆ ನೀಡಿಲ್ಲ. ಹಾಗಾಗಿ 400ಕ್ಕೂ ಹೆಚ್ಚು ಕಾರ್ಮಿಕರು ಭಯದಲ್ಲೇ ಕೆಲಸ ಮಾಡುವಂತಾಗಿದೆ.
ಇದನ್ನೂ ಓದಿ | Accident news | ಗಾಂಜಾ ನಶೆಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ; ಪಿಕಪ್ ಚಾಲಕ, ನಿರ್ವಾಹಕನಿಗೆ ಸಾರ್ವಜನಿಕರಿಂದ ಧರ್ಮದೇಟು