ಆನೇಕಲ್: ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಇರುವ ಕೃಷ್ಣಾ ರೆಡ್ಡಿ ಬಡಾವಣೆಯ ನಿರ್ಮಾಣ ಹಂತದಲ್ಲಿರುವ ಪಾಳು ಬಿದ್ದ ಕಟ್ಟಡದಲ್ಲಿ ಕಾಣಿಸಿಕೊಂಡ ಚಿರತೆ (Leopard Spotted) ಕೊನೆಗೂ ಪತ್ತೆಯಾಗಿದೆ. ಆದರೆ, ಅದು ಅರಿವಳಿಕೆ ನೀಡಲು ಹೋದ ವೈದ್ಯಾಧಿಕಾರಿಗಳಿಗೆ ದಾಳಿ ಮಾಡಿ ಗಾಯಗೊಳಿಸಿ, ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದೆ.
ಈ ಮೂಲಕ ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಭಾರಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ (Operation Leopard) ಅಲ್ಪ ಯಶಸ್ಸನ್ನು ಪಡೆದಿದೆ. ಆದರೆ, ಇದು ಮುಂದುವರಿಯಲಿದ್ದು ಇಂದೇ ಪತ್ತೆಯಾಗುವ ಸಾಧ್ಯತೆ ಇದೆ. ಚಿರತೆ ಕಟ್ಟಡದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜಿಗಿದು ಪರಾರಿಯಾಗುತ್ತಿದೆ.
ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಓಡಾಡಿತ್ತು. ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಮರುದಿನ ಗಮನಿಸುವಾಗ ಅಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿತ್ತು. ಕಡೆಂಜಾ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯಾಹ್ನದ ಹೊತ್ತಿಗೇ ಚಿರತೆ ಮೆಟ್ಟಿಲು ಹತ್ತಿ ಹೋಗುವುದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು.
ಈ ಎಲ್ಲ ಘಟನಾವಳಿಗಳ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ದಿನವಾದರೂ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ನಡುವೆ ಮಂಗಳವಾರ ಸಂಜೆ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಿದ್ದರೂ ಸಿಕ್ಕಿರಲಿಲ್ಲ. ಮೂರನೇ ದಿನದ ಕಾರ್ಯಾಚರಣೆಗೆ ಹುಣಸೂರಿನಿಂದ ವನ್ಯ ಜೀವಿ ರಕ್ಷಣಾ ತಂಡ ಆಗಮಿಸಿತ್ತು. ಜತೆಗೆ ವನ್ಯ ಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಕೂಡಾ ಬಂದಿದ್ದರು.
ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಪತ್ತೆಯಾದ ಚಿರತೆ
ಬುಧವಾರ ಮುಂಜಾನೆ ಕಟ್ಟಡದ ಎಲ್ಲ ಸ್ಕೆಚ್‌ಗಳೊಂದಿಗೆ ಕಾಲಿಟ್ಟ ಅರಣ್ಯಾಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಕಟ್ಟಡದ ಬೇಸ್‌ಮೆಂಟ್‌ನಲ್ಲೇ ಚಿರತೆ ಕಂಡಿದೆ. ಕೂಡಲೇ ಸಜ್ಜಿತರಾದ ಅಧಿಕಾರಿಗಳು ಅದಕ್ಕೆ ಅರಿವಳಿಕೆ ಪ್ರಯೋಗವನ್ನು ನಡೆಸಿದ್ದಾರೆ. ಆದರೆ ಆ ಹೊತ್ತಿಗೇ ಚಿರತೆ ಇಬ್ಬರು ವೈದ್ಯಾಧಿಕಾರಿಗಳ ಮೇಲೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವೈದ್ಯರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚಿರತೆಗೆ ಮೊದಲ ಸುತ್ತಿನ ಅರಿವಳಿಕೆ ನೀಡಲಾಗಿದೆ ಎಂದು ಹೇಳಲಾಗಿದೆ. ಹಾಗೆ ಸ್ವಲ್ಪ ಮಂಪರಿಗೆ ಸರಿದಂತೆ ಕಂಡ ಚಿರತೆ ಕೆಲವೇ ನಿಮಿಷದಲ್ಲಿ ಎಚ್ಚೆತ್ತು ದಾಳಿ ಮಾಡಿದೆ ಎನ್ನಲಾಗಿದೆ. ದಾಳಿ ಮಾಡಿದ ಬಳಿಕ ಅದು ಬೇಸ್‌ಮೆಂಟ್‌ನಿಂದ ತಪ್ಪಿಸಿಕೊಂಡಿದ್ದು ಬೇರೆ ಮಹಡಿಗೆ ಹೋಗಿದೆ. ಈಗ ಅದನ್ನು ಬೆನ್ನಟ್ಟಲು ಅಧಿಕಾರಿಗಳು ಮುಂದಾಗಿದ್ದಾರೆ.
ಚಿರತೆಗೆ ಎರಡು ಬಾರಿ ಅರವಳಿಕೆ ಮದ್ದು ನೀಡಿದ್ದ ವೈದ್ಯ ಕಿರಣ್
ಸಾಮಾನ್ಯವಾಗಿ ಯಾವುದೇ ಪ್ರಾಣಿಗೆ ಅರವಳಿಕೆ ಮದ್ದು ನೀಡಬೇಕಾದ್ರೆ ಹೆಚ್ಚು ಮಾಂಸ ಇರುವ ಸ್ಥಳ ನೋಡಿ ಹೊಡೆಯಬೇಕು. ಆದರೆ, ಅರಿವಳಿಕೆ ಹಾಕುವ ಪ್ರಯತ್ನದಲ್ಲಿ ವೈದ್ಯರು ವಿಫಲವಾಗಿದ್ದಾರೆ. ಎರಡು ಬಾರಿ ಅರವಳಿಕೆ ಮದ್ದು ಹೊಡೆದರೂ ಸರಿಯಾದ ಜಾಗಕ್ಕೆ ಬಿದ್ದಿರಲಿಲ್ಲ ಎನ್ನಲಾಗಿದೆ. ಎರಡನೇ ಬಾರಿ ಹೊಡೆದ ಅರಿವಳಿಕೆ ಯಶಸ್ವಿಯಾಗಿದೆ ಎಂದು ತಿಳಿದು ಡಾ. ಕಿರಣ್ ಅವರು ಪರಿಶೀಲನೆಗೆ ಮುಂದಾಗಿದ್ದರು ಎನ್ನಲಾಗಿದೆ. ಅಷ್ಟರಲ್ಲಿ ಚಿರತೆ ಕಿರಣ್ ಮೇಲೆ ದಾಳಿ ಮಾಡಿ ಎಸ್ಕೇಪ್ ಆಗಿದೆ. ಕುತ್ತಿಗೆ ಭಾಗ ಮತ್ತು ಕೈಗೆ ಪರಚಿ ಎಸ್ಕೇಪ್ ಆಗಿದೆ. ಓಡುವ ಭರದಲ್ಲಿ ಇನ್ನಿಬ್ಬರ ಮೇಲೆಯೂ ದಾಳಿ ಮಾಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.
ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ