ಬೆಳಗಾವಿ: ಚಿರತೆ ಸೆರೆಗೆ ಬಲ ಹೆಚ್ಚಿದರೂ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಮಾತ್ರ ಸಿಗುತ್ತಿಲ್ಲ. ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಶೋಧ (Operation Leopard) ಕಾರ್ಯಾಚರಣೆಯು 23ನೇ ದಿನವೂ ನಿರಾಸೆಯಿಂದಲೇ ಮುಕ್ತಾಯಕಂಡಿದ್ದು, ಭಾನುವಾರವೂ ಮುಂದುವರಿಯಲಿದೆ. ಅರಣ್ಯ ಸಿಬ್ಬಂದಿಗೆ ದರ್ಶನ ನೀಡಿ ಮಿಂಚಿ ಮರೆಯಾಗುತ್ತಿರುವ ಚಾಲಾಕಿ ಚಿರತೆಗಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿದರೂ ವರುಣ ಅಡ್ಡಗಾಲು ಹಾಕಿದ್ದಾನೆ.
ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿರುವ ಚಿರತೆ ಸೆರೆಗೆ ಶನಿವಾರವೂ ಬೃಹತ್ ಕಾರ್ಯಾಚರಣೆ ನಡೆಸಲಾಯಿತು. ಮೊದಲು 200 ಇದ್ದ ಸಿಬ್ಬಂದಿ ಸಂಖ್ಯೆಗೆ ಹೆಚ್ಚುವರಿಯಾಗಿ 100 ಮಂದಿಯನ್ನು ಸೇರ್ಪಡೆ ಮಾಡಲಾಯಿತು. ಜತೆಗೆ ಶಿವಮೊಗ್ಗದ ಸಕ್ರಬೈಲಿನಿಂದ ಬಂದಿರುವ ಗಜಪಡೆಯೂ ಕಾರ್ಯಾಚರಣೆಗೆ ಸಾಥ್ ನೀಡಿತು. 8 ಜನ ಅರಿವಳಿಕೆ ತಜ್ಞರು ಸಹ ಕಾರ್ಯೋನ್ಮುಖರಾಗಿದ್ದು. ಅಲ್ಲದೆ, 8 ಜೆಸಿಬಿಗಳು ಒಂದೊಂದು ದಿಕ್ಕಿನಲ್ಲಿ ಕಾರ್ಯಾಚರಣೆ ನಡೆಸಿವೆ.
15 ದಿನಗಳಿಂದ ಶಾಲೆಗಳು ಬಂದ್
ಚಿರತೆ ಪ್ರತ್ಯಕ್ಷ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ 22 ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣ ನೀಡುತ್ತಿದ್ದರೆ, ಸರ್ಕಾರಿ ಶಾಲೆ ಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಕೋವಿಡ್ ಕಾರಣಕ್ಕೆ 2 ವರ್ಷಗಳಿಂದ ಮಕ್ಕಳಿಗೆ ಸಮರ್ಪಕ ಶಿಕ್ಷಣ ದೊರೆತಿಲ್ಲ. ಕೋವಿಡ್ ನಿಯಂತ್ರಣಕ್ಕೆ ಬಂದು ಈ ಸಲ ಮಕ್ಕಳು ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದ್ದರು. ಆದರೆ ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಕಾರಣಕ್ಕೆ ನಗರ-ಗ್ರಾಮೀಣ ಭಾಗದ ಶಾಲೆಗಳಿಗೆ ರಜೆ ನೀಡಲಾಗಿದೆ. ಚಿರತೆ ಹಿಡಿಯಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕೂಡ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ | Operation leopard | ಚಿರತೆ ಸೆರೆಗೆ ದಿನಕ್ಕೆ ₹2.50 ಲಕ್ಷ, ಇಲ್ಲಿಯವರೆಗೆ ₹30 ಲಕ್ಷ ಖರ್ಚು!