Site icon Vistara News

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Tigre Found in Mysuru again Beware of this village

ಮೈಸೂರು: ಕುಂತರೂ ನಿಂತರೂ ಕಾಡು ಪ್ರಾಣಿಗಳ ಭೀತಿ (Operation Tiger) ಹೆಚ್ಚಾಗಿದೆ. ಮೈಸೂರಲ್ಲಿ ರೈತ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನು ಕಾರ್ಯಾಚರಣೆ ನಡೆಸಿ ಸೆರೆಯಿಡಲಾಗಿತ್ತು.ಇದೀಗ ಮತ್ತೊಂದು ಹುಲಿ ಪ್ರತ್ಯಕ್ಷಗೊಂಡಿದ್ದು, ಜನರ ನಿದ್ದೆಗೆಡಿಸಿದೆ.

ಆಹಾರ ಅರಸಿ ಕಾಡು ಪ್ರಾಣಿಗಳು (Wild animals Attack) ನಾಡಿನತ್ತ ಹೆಜ್ಜೆ ಹಾಕುತ್ತಿವೆ. ರಾಜ್ಯದಲ್ಲಿ ಚಿರತೆ (Leopard attack), ಕಾಡಾನೆ, ಕರಡಿ ಹೀಗೆ ಹಲವು ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಎಲ್ಲೆಂದರಲ್ಲಿ, ಯಾವಾಗೆಂದರೆ ಆಗ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ.

ಸದ್ಯ ಮೈಸೂರಲ್ಲಿ ಚಿರತೆ, ಕಾಡಾನೆ ಭೀತಿಯ ನಡುವೆಯೇ ಮತ್ತೆ ಹುಲಿ ಕಾಟ ಹೆಚ್ಚಾಗಿದೆ. ಸಿಸಿ ಕ್ಯಾಮೆರಾದಲ್ಲಿ ಹುಲಿ ಚಲನವಲನವು ಸೆರೆಯಾಗಿದೆ. ಮೈಸೂರು ತಾಲೂಕಿನ ಚಿಕ್ಕಕಾನ್ಯ ಬಳಿ ಹುಲಿ ಪ್ರತ್ಯಕ್ಷಗೊಂಡಿದೆ. ಜಯಪುರ ಹೋಬಳಿ ಸಿಂಧುವಳ್ಳಿ, ಬ್ಯಾತಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಗ್ರಾಮಗಳ ಮಧ್ಯದಲ್ಲಿ ಹುಲಿ ಓಡಾಟ ನಡೆಸಿದೆ.

ಇದನ್ನೂ ಓದಿ: Operation Tiger : ಮಹಿಳೆ ಸಹಿತ ಇಬ್ಬರ ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್?

ಹುಲಿ ಸೆರೆಗಾಗಿ ಅರಣ್ಯ ಇಲಾಖೆಯು ಬೋನ್ ಇಟ್ಟಿದೆ. ಸಿಸಿ ಕ್ಯಾಮೆರಾ ಮೂಲಕ ಹುಲಿ ಚಲನವಲನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಶಾಸಕ ಜಿ.ಟಿ.ದೇವೇಗೌಡ ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದಾರೆ. ಸೂಕ್ತ ಕಾರ್ಯಾಚರಣೆ ಮೂಲಕ‌ ಹುಲಿ ಸೆರೆಹಿಡಿಯುವಂತೆ ಸೂಚನೆ ನೀಡಿದ್ದಾರೆ.

ಇನ್ನು ಗ್ರಾಮಸ್ಥರು ರಾತ್ರಿ ವೇಳೆ ಅನಾವಶ್ಯಕವಾಗಿ ಓಡಾಡದಂತೆ ಸೂಚಿಸಿದ್ದಾರೆ. ಹುಲಿ ಕಾರ್ಯಾಚರಣೆ ಮುಗಿಯುವವರೆಗೆ ಜನರು ಸಹಕರಿಸಬೇಕು. ಟಿ.ವಿ.ಎಸ್. ಕಂಪನಿಯ ನೌಕರರು ರಾತ್ರಿಪಾಳಿ ಮುಗಿಸಿ ಹೋಗುವಾಗ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ಎ.ಸಿ.ಎಫ್. ಲಕ್ಷ್ಮಿಕಾಂತ್, ಆರ್.ಎಫ್.ಒ.ಸುರೇಂದ್ರ ಸೇರಿದಂತೆ ಮತ್ತಿತರರು ಹುಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಕಾಫಿ ತೋಟದಲ್ಲಿ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪ

ಕಾಫಿ ತೋಟದಲ್ಲಿ ಅಡಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಕಾಳಿಂಗ ಸರ್ಪ ಕಂಡು ಸ್ಥಳೀಯರು ಬೆಚ್ಚಿಬಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದ ಶ್ರೀನಿವಾಸ್ ಎಂಬುವವರ ಕಾಫಿ ತೋಟದಲ್ಲಿದ್ದ 15 ಅಡಿ ಉದ್ದದ, 14 ಕೆಜಿ ತೂಕದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಉರಗ ತಜ್ಞ ಮಹಮ್ಮದ್ ಫಾರಾನ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಅರಣ್ಯ ಇಲಾಖೆ ಅಧಿಕಾರಿ ಸಮ್ಮುಖದಲ್ಲಿ ಬಿಸಲೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version