Site icon Vistara News

R Ashok: ವಾಲ್ಮೀಕಿ ಹಗರಣ; ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದ ಆರ್‌. ಅಶೋಕ್‌

Opposition Party leader R Ashok pressmeet about Valmiki Development Corporation scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಅಧಿಕಾರಿಗಳ ಮೇಲೆ ಎತ್ತಿ ಹಾಕುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅವರ 40 ವರ್ಷಗಳ ಶುದ್ಧ ಹಸ್ತದ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆರೋಪಿಸಿದ್ದಾರೆ. ಎಲ್ಲ ತಪ್ಪುಗಳನ್ನು ಸಿದ್ದರಾಮಯ್ಯ ಅಧಿಕಾರಿಗಳ ಮೇಲೆ ಹಾಕಿದ್ದಾರೆ. ಎಲ್ಲ ಅಧಿಕಾರಿಗಳೇ ಮಾಡಿದ್ದರೆ ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದು ಆರ್‌ ಅಶೋಕ್‌ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಚ್ಚಿಹಾಕುವ ಸ್ಪಷ್ಟ ತೀರ್ಮಾನವನ್ನು ಕಾಂಗ್ರೆಸ್‌ ಮಾಡಿದೆ. ಅದಕ್ಕೆ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿದ್ದಾರೆ. ಎಲ್ಲ ಅಧಿಕಾರಿಗಳೇ ಮಾಡಿದ್ದರೆ, ಮುಖ್ಯಮಂತ್ರಿಯೇನು ಕತ್ತೆ ಕಾಯುತ್ತಿದ್ದರೇ? ಆ ಅಧಿಕಾರಿ ಹಿಂದೆಯೇ ತಪ್ಪು ಮಾಡಿದ್ದರೆ ಅದೇ ಹುದ್ದೆಯಲ್ಲಿ ಉಳಿಸಿಕೊಂಡಿದ್ದು ಏಕೆ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದ್ದು, ಅವರೆಷ್ಟು ಶುದ್ಧ ಹಸ್ತರು ಎಂದು ಬಯಲಾಗಿದೆ. ರಾಜ್ಯದ ಜನರ ಹಣವನ್ನು ಕಳ್ಳ ಖಾತೆಯಲ್ಲಿ ಇಟ್ಟಿದ್ದು ರಾಜ್ಯ ಸರ್ಕಾರ. ಇದರಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪಾತ್ರವೇ ಇಲ್ಲ. ಬ್ಯಾಂಕ್‌ ಅಧಿಕಾರಿಗಳು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದರು. ಆದರೆ ಸರ್ಕಾರ ವಿಶೇಷ ತನಿಖಾ ದಳಕ್ಕೆ ನೀಡಿ ಮುಚ್ಚಿ ಹಾಕಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: NEET UG 2024 Result: ಕ್ಷೇತ್ರವಾರು ನೀಟ್‌ ಪರೀಕ್ಷಾ ಫಲಿತಾಂಶ ಪ್ರಕಟ

ಸಿಎಂ ಸಿದ್ದರಾಮಯ್ಯ ಪುಟಗಟ್ಟಲೆ ಜಾಹೀರಾತು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಜತೆಗೆ, ಜಾತಿ ಬಗ್ಗೆ ಹೇಳಿದ್ದಾರೆ. ನಿರ್ದಿಷ್ಟ ಜಾತಿಯ ವಿರುದ್ಧ ಯಾವುದೇ ಆಪಾದನೆ ಮಾಡಬಾರದು ಎಂದು ಸಂವಿಧಾನದಲ್ಲೇ ತಿದ್ದುಪಡಿ ಮಾಡಲಿ. ಸಿಎಂ ಸಿದ್ದರಾಮಯ್ಯ ಬೆಚ್ಚಿ ಬಿದ್ದಿರುವುದರಿಂದ ಹೀಗೆ ಮಾತಾಡುತ್ತಿದ್ದಾರೆ. 40 ಕ್ಕೂ ಅಧಿಕ ದಾಖಲೆಗಳನ್ನು ನಾನು ಕೊಟ್ಟಿದ್ದು, ಈ ಬಗ್ಗೆ ಸಿಎಂ ಸ್ಪಷ್ಟೀಕರಣ ಕೊಡದೆ ಎಲ್ಲಕ್ಕೂ ಪದ್ಮನಾಭ ಕಾರಣ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

ಸಚಿವರ ತಪ್ಪಿಲ್ಲ ಎಂದ ಮೇಲೆ ಬಿ. ನಾಗೇಂದ್ರ ರಾಜೀನಾಮೆ ಯಾಕೆ ಕೊಟ್ಟರು? ಹಾಗಾದರೆ ಸಿಎಂ ಅವರನ್ನು ಅರ್ಧ ದಾರಿಯಲ್ಲೇ ಕೈ ಬಿಟ್ಟಿದ್ದಾರೆ ಎಂದರ್ಥ. ಲೋಕಸಭೆ ಚುನಾವಣೆಗಾಗಿ ನಾಗೇಂದ್ರ ಹಾಗೂ ಬಸವನಗೌಡ ದದ್ದಲ್‌ ಶ್ರಮ ವಹಿಸಿ, ಕಾಂಗ್ರೆಸ್‌ ಪಕ್ಷಕ್ಕಾಗಿ ಹಣ ಸಂಗ್ರಹ ಮಾಡಿ ತೆಲಂಗಾಣಕ್ಕೆ ಕಳುಹಿಸಿದ್ದಾರೆ ಎಂದು ದೂರಿದರು.

ತನಿಖೆ ಮಾಡಿ

ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆ ಎಂದು ಆರೋಪ ಮಾಡಿ, ಅಧಿಕಾರಕ್ಕೆ ಬಂದು 15 ತಿಂಗಳಾದರೂ 40 ಪರ್ಸೆಂಟ್‌ ಆರೋಪದ ತನಿಖೆ ಇನ್ನೂ ಮುಗಿಸಿಲ್ಲ. ಹಿಂದಿನ ಸರ್ಕಾರ ಹಗರಣ ಮಾಡಿದ್ದರೆ, ಅದನ್ನು ತನಿಖೆ ಮಾಡಲು ಇಷ್ಟು ಸಮಯ ಬೇಕೆ ಎಂದು ಪ್ರಶ್ನೆ ಮಾಡಿದರು.

ಬಿಜೆಪಿಗೆ ಯಾವ ಒತ್ತಡವೂ ಇಲ್ಲ. ಆದರೆ ರಾಜ್ಯದ ಜನರ ಒತ್ತಡ ಮಾತ್ರ ಇದೆ. ಜನರಿಗಾಗಿ ಹಾಗೂ ದಲಿತರಿಗಾಗಿ ಈ ಮಟ್ಟಕ್ಕೆ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ದಲಿತರ ಹಣ ವಾಪಸ್‌ ಸಿಗಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಪಕ್ಷದ ಉದ್ದೇಶ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದ 21 ಹಗರಣಗಳನ್ನು ನಾವೇ ತನಿಖೆ ಮಾಡುತ್ತೇವೆ. ಅವರು ಅಧಿಕಾರದಿಂದ‌ ಕೆಳಕ್ಕಿಳಿದು ನಮಗೆ ಅಧಿಕಾರ ನೀಡಲಿ ಎಂದು ಆರ್‌.ಅಶೋಕ್‌ ಸವಾಲು ಹಾಕಿದರು.

ಇದನ್ನೂ ಓದಿ: Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

ಬ್ರ್ಯಾಂಡ್ ಬೆಂಗಳೂರು ಆಗಬೇಕೆಂದರೆ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಎಲ್ಲರ‌‌ ಬಳಿ ಚರ್ಚೆ ಮಾಡಿ ಅನುದಾನ ನೀಡಲಿ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿತ್ತು. ಅದೇ ರೀತಿ ಕಾಂಗ್ರೆಸ್ ಕೂಡ ನಡೆದುಕೊಳ್ಳಲಿ. ಈಗಾಗಲೇ‌ ನಗರದಲ್ಲಿ ಕಸದ ರಾಶಿ ಹೆಚ್ಚಿದ್ದು, ವಿಲೇವಾರಿ ಮಾಡಲು ಕೂಡಲೇ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.

Exit mobile version