Site icon Vistara News

R Ashok: ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ, ಸುಭದ್ರ ಬಜೆಟ್‌: ಆರ್‌. ಅಶೋಕ್‌ ಶ್ಲಾಘನೆ

Opposition Party Leader R Ashok Reaction about Union Budget

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ ಹಾಗೂ ದೇಶದ ಭವಿಷ್ಯ ಬರೆಯುವ ಸುಭದ್ರ ಬಜೆಟ್‌ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಶ್ಲಾಘಿಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಈ ಆಯವ್ಯಯವು ಭಾರತ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗಲಿದೆ. ರೈತರು, ಮಹಿಳೆಯರು, ಯುವಜನರು, ತೆರಿಗೆ ಪಾವತಿಸುವವರ ಬದುಕನ್ನು ವಿಶ್ಲೇಷಿಸಿ ಅವರ ಅನುಕೂಲಕ್ಕೆ ತಕ್ಕಂತಹ ಬಜೆಟ್‌ ನೀಡಲಾಗಿದೆ. ಇದಕ್ಕಾಗಿ ಆರ್ಥಿಕ ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಯಾವಾಗಲೂ ಅನುದಾನ ತಾರತಮ್ಯದ ಬಗ್ಗೆ ಹೇಳುತ್ತದೆ. 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ ನೀಡುವ ಪಿಎಂ ಗತಿಶಕ್ತಿ ಮಾಸ್ಟರ್‌ ಪ್ಲಾನ್‌ ಅನ್ನು ಕೇಂದ್ರ ಸರ್ಕಾರ ಇನ್ನೂ 1 ವರ್ಷ ಮುಂದುವರಿಸಲಿದೆ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಖಾಲಿ ಖಜಾನೆಯ ರಾಜ್ಯ ಸರ್ಕಾರ ಇಂತಹ ಯೋಜನೆಗಳನ್ನು ಬಳಸಿಕೊಂಡಾದರೂ ಜನಕಲ್ಯಾಣಕ್ಕೆ ಶ್ರಮಿಸಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: IBPS: ರಾಷ್ಟ್ರೀಕೃತ ಬ್ಯಾಂಕ್‌ಗಳ 6,128 ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

ರಾಜ್ಯ ಕಾಂಗ್ರೆಸ್‌ ಸರ್ಕಾರ ಅನ್ನಭಾಗ್ಯ ಯೋಜನೆ ಮುಂದುವರಿಸಲು ಹಾಗೂ ಅಕ್ಕಿ ನೀಡಲು ಇನ್ನೂ ತಿಣುಕಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಿಎಂ ಗರೀಬ್‌ ಕಲ್ಯಾಣ ಅನ್ನ ಯೋಜನೆಯನ್ನು 5 ವರ್ಷ ವಿಸ್ತರಿಸಿ, 80 ಕೋಟಿ ಜನರಿಗೆ ಆಹಾರ ಭದ್ರತೆ ಕಲ್ಪಿಸಿದೆ.

ಕ್ಯಾನ್ಸರ್‌ನ 3 ಔಷಧಿಗಳ ಮೇಲಿನ ಕಸ್ಟಮ್‌ ತೆರಿಗೆ ರದ್ದುಪಡಿಸಿ, ರೋಗಿಗಳ ಕುಟುಂಬಕ್ಕೆ ವೆಚ್ಚ ಕಡಿಮೆ ಮಾಡಲಾಗಿದೆ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ.6 ರಷ್ಟು ಕಡಿತ, ಮೊಬೈಲ್ ಹಾಗೂ ಚಾರ್ಜರ್‌ಗಳ ಮೇಲಿನ ತೆರಿಗೆ ಇಳಿಕೆ ಮೊದಲಾದ ಶ್ಲಾಘನೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಇದು ಬೆಲೆ ಇಳಿಕೆಯ ಸುರಕ್ಷಿತ ಬಜೆಟ್‌ ಎಂದು ಆರ್‌.ಅಶೋಕ್‌ ಬಣ್ಣಿಸಿದ್ದಾರೆ.

ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಿ ಜನರಿಗೆ ಸುಭದ್ರ ಬದುಕು ಸಿಗಲಿದೆ. ಈ ದೂರದೃಷ್ಟಿಯ ಯೋಜನೆಯಿಂದ ರಾಜಧಾನಿ ಬೆಂಗಳೂರು ತನ್ನ ಹಿರಿಮೆಯನ್ನು ಉಳಿಸಿಕೊಳ್ಳಲಿದೆ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದೆ. ಇದಕ್ಕೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Team India: ನೂತನ ಕೋಚ್​ ಗಂಭೀರ್​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರರು

ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ, 1 ಕೋಟಿ ಕುಟುಂಬಗಳಿಗೆ 300 ಯುನಿಟ್ ವಿದ್ಯುತ್‌, ಮುದ್ರಾ ಯೋಜನೆಯಡಿ 20 ಲಕ್ಷ ರೂ. ಸಾಲ, 1 ಲಕ್ಷ ವಿದ್ಯಾರ್ಥಿಗಳಿಗೆ ಶೇ.3 ಬಡ್ಡಿ ದರದ ಸಾಲ ಮೊದಲಾದ ಯೋಜನೆಗಳು ಜನಕಲ್ಯಾಣಕ್ಕೆ ಹೊಸ ದಿಕ್ಕು ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

Exit mobile version