ಶಿವಮೊಗ್ಗ : ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಎಸಗಿದ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯ ಪುಸ್ತಕವನ್ನೇ ಮುಂದುವರಿಸಬೇಕು, ಕುವೆಂಪುರವರನ್ನ ಅವಮಾನಿಸಿದ ರೋಹಿತ್ ಚಕ್ರತೀರ್ಥರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಡಿರುವ ಬದಲಾವಣೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಪಾದಯಾತ್ರೆ ನಡೆಸಲಾಗುತ್ತಿದ್ದು, ಹಿರಿಯ ಕಲಾವಿದ ಹಂಸಲೇಖ ಪಾದಯಾತ್ರೆಗೆ ಬುಧವಾರ ಮುಂಜಾನೆ ಚಾಲನೆ ನೀಡಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕವಿಶೈಲದಿಂದ ಪಾದಯಾತ್ರೆ ಪ್ರಾರಂಭವಾಗಿದ್ದು, ಇದರ ನೇತೃತ್ವವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಹಿಸಿದ್ದಾರೆ. ಪಾದಯಾತ್ರೆಗೆ ಸಾಹಿತಿಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಪ್ರಗತಿಪರರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಜಾಲಾಡಲಿದೆ ಗುಪ್ತಚರ ಇಲಾಖೆ
ಕುಪ್ಪಳಿಯ ಕವಿಶೈಲದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಹಂಸಲೇಖ, ಕಿಮ್ಮನೆ ರತ್ನಾಕರ್ ಸೇರಿದಂತೆ ಗಣ್ಯರು ಪಾದಯಾತ್ರೆಗೆ ಚಾಲನೆ ನೀಡಿದರು.
ಈ ವೇಳೆ ಕಿಮ್ಮನೆ ರತ್ನಾಕರ್ ಮಾತನಾಡಿ, ರೋಹಿತ್ ಚಕ್ರತೀರ್ಥ ಮತ್ತು ಶಿಕ್ಷಣ ಸಚಿವ ನಾಗೇಶ್ ಮಾಡಿದ ಅಧ್ವಾನವನ್ನು ಕೈಬಿಡಬೇಕು. ಬಿಜೆಪಿಯ ಹೊಸ ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಮ್ಮ ವಿರೋಧವಿಲ್ಲ. ಆದರೆ ಸದನದಲ್ಲಿ ಚರ್ಚೆ ಮಾಡಬೇಕು. ವಿಷಯವಾರು ಸಮಿತಿ ರಚನೆ ಮಾಡಿ ಇಂತಹ ವಿಷಯವನ್ನ ಜಾರಿಗೊಳಿಸುತ್ತೇವೆ ಎಂಬುದನ್ನ ತಿಳಿಸಿ ನಂತರ ಅನುಷ್ಠಾನಗೊಳಿಸಬೇಕು ಎಂದರು.
ಸಂಗೀತ ನಿರ್ದೇಶಕ ಹಂಸಲೇಖ, ಪತ್ರಕರ್ತ ದಿನೇಶ್ ಅಮೀನಮಟ್ಟು ಸಾಹಿತಿಗಳಾದ ಜಿ.ಸಿದ್ದರಾಮಯ್ಯ, ಪ್ರೊಚೆನ್ನಿ, ನಾ. ಡಿಸೋಜ, ವಕೀಲ ಶ್ರೀಪಾಲ, ಡಿಎಸ್ಎಸ್ ಗುರುಮೂರ್ತಿ, ರೈತ ಸಂಘಟನೆಯ ಕೆ.ಟಿ.ಗಂಗಾಧರ್, ಜಿಲ್ಲಾ ಕಸಾಪದ ಅಧ್ಯಕ್ಷ ಡಿ.ಮಂಜುನಾಥ್ ಮೊದಲಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ | ನಾಡಗೀತೆಯನ್ನು ಅಪಮಾನಿಸಿದರೆ ಸುಮ್ಮನಿರುವುದಿಲ್ಲ: HDK