ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಸಮರ್ಪಕವಾಗಿ ಜಾರಿ ಮಾಡಲು ಪ್ರಜಾಪ್ರತಿನಿಧಿಗಳ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಪ್ರತಿ 1000 ಜನರಿಗೆ ಅಥವಾ 1000 ಜನಸಂಖ್ಯೆ ಒಂದು ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು (citizen volunteer) ನೇಮಕ ಮಾಡಲು ಆದೇಶ ಹೊರಡಿಸಲಾಗಿದೆ.
ಮನೆಯ ಯಜಮಾನಿಗೆ 2000 ರೂಪಾಯಿ ಆರ್ಥಿಕ ನೆರವು ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಸಚಿವ ಸಂಪುಟದಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿದೆ. ಯೋಜನೆಗೆ ಅರ್ಜಿ ಸಲ್ಲಿಕೆಗೆ ಜುಲೈ 16ರಂದು ಚಾಲನೆ ನೀಡುವ ಸಾಧ್ಯತೆ ಇದೆ. ಅರ್ಜಿದಾರರು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಒಮ್ಮೆಲೆ ಸಾವಿರಾರು ಜನರು ಅರ್ಜಿ ಸಲ್ಲಿಸಲು ಮುಂದಾಗುವುದರಿಂದ ನೂಕು ನುಗ್ಗಲು ಉಂಟಾಗಿ ಸಿಬ್ಬಂದಿಗೆ ಒತ್ತಡ ಏರ್ಪಡುತ್ತದೆ. ಹೀಗಾಗಿ ಈ ಕೇಂದ್ರಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಜನರಿಗೆ ಸಹಾಯ ಮಾಡಲು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಪ್ರಜಾಪ್ರತಿನಿಧಿಗಳನ್ನು ಗೌರವ ಸೇವೆ ಆಧಾರದ ಮೇಲೆ ನೇಮಕ ಮಾಡಲಿದ್ದು, ಪ್ರತಿ 1000 ಜನರಿಗೆ ಅಥವಾ ಸಾವಿರ ಜನರ ಒಂದು ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿಗಳು ಇರಲಿದ್ದಾರೆ. ಇಬ್ಬರಲ್ಲಿ ಒಬ್ಬರು ಮಹಿಳಾ ಪ್ರಜಾಪ್ರತಿನಿಧಿ ಆಯ್ಕೆ ಕಡ್ಡಾಯವಾಗಿದೆ. ಒಂದು ತಿಂಗಳ ಮಟ್ಟಿಗೆ ಪ್ರಜಾಪ್ರತಿನಿಧಿಗಳ ನೇಮಕ ಮಾಡಲಿದ್ದು, ಇವರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಜನರಿಗೆ ನೆರವು ನೀಡಲಿದ್ದಾರೆ.
2023-24 ಸಾಲಿನಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿದಾರರಿಗೆ ಅರ್ಜಿ ಸಲ್ಲಿಸಲು ನೆರವಾಗಲು ಗೌರವ ಸೇವೆ ಆಧಾರದ ಮೇಲೆ ಮಾರ್ಗಸೂಚಿಯನ್ವಯ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-1 ನಿರ್ಮಲಾ ಎಸ್. ಖಟಾವ್‌ಕರ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Anna Bhagya Scheme : ಕೇಂದ್ರದ ಅಕ್ಕಿಗೂ ಬಿತ್ತಾ ಕತ್ತರಿ?; ಈ ಬಾರಿ 3 KG ಅಕ್ಕಿ ಏಕೆ? ಸ್ಪಷ್ಟನೆ ನೀಡಿದ ಸಿಎಂ
ಪ್ರಜಾಪ್ರತಿನಿಧಿಗಳು ಗೃಹ ಲಕ್ಷ್ಮಿ ಆ್ಯಪ್‌ಗೆ ಲಾಗಿನ್ ಆಗಿ ಅನ್‌ಲೈನ್ ಅರ್ಜಿ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಸಲ್ಲಿಸುತ್ತಾರೆ. ಪ್ರಜಾಪ್ರತಿನಿಧಿಗೆ ಪ್ರತಿ ಅರ್ಜಿ ಸಲ್ಲಿಕೆಗೆ 15 ರೂಪಾಯಿ ಸೇವಾ ಶುಲ್ಕವಾಗಿ ಮಹಿಳಾ, ಮಕ್ಕಳ ಸರ್ಕಾರದಿಂದ ನೀಡಲಾಗುತ್ತದೆ. ಅರ್ಜಿದಾರರು ಯಾವುದೇ ಶುಲ್ಕ ನೀಡಬೇಕಿಲ್ಲ.