Site icon Vistara News

Organ donation | ಮೆದುಳು ನಿಷ್ಕ್ರಿಯ: ಮಹಿಳೆಯ ಅಂಗಾಂಗ ದಾನದಿಂದ 8 ಜನರಿಗೆ ಜೀವ ದಾನ

oragn donation

ಬೆಂಗಳೂರು: ಬ್ರೈನ್ ಸ್ಟ್ರೋಕ್‌ಗೆ ಒಳಗಾದ 29 ವರ್ಷದ ಮಹಿಳೆಯ ಕುಟುಂಬವು ಆಕೆಯ ಪ್ರಮುಖ ಅಂಗಗಳನ್ನು ದಾನ (Organ donation) ಮಾಡಿ, ಎಂಟು ಜನರ ಜೀವ ಉಳಿಸಲು ಸಹಾಯ ಮಾಡಿದೆ.

ಆಗಸ್ಟ್ 27ರಂದು ಬ್ರೇನ್ ಸ್ಟ್ರೋಕ್‌ಗೆ ಒಳಗಾಗಿದ್ದ ಕೋಲಾರದ ನಿವಾಸಿ ಶ್ವೇತಾ ಚೇತರಿಸಿಕೊಳ್ಳಲು ವಿಫಲರಾಗಿದ್ದರು. ಪತ್ನಿ ಚೇತರಿಸಿಕೊಳ್ಳಲೆಂಬ ಹಂಬಲದಿಂದ ಪತಿ ಹರೀಶ್ ವಿವಿಧ ಆಸ್ಪತ್ರೆಗಳಿಗೆ ಶ್ವೇತಾ ಅವರನ್ನು ಕರೆದೊಯ್ದು, ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದರು.

ಅವರನ್ನು ಆ. 28ರಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಕರೆತರಲಾಯಿತು. ಶ್ವೇತಾರನ್ನು ಉಳಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ ಹೊರತಾಗಿಯೂ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಆ. 31ರಂದು ವೈದ್ಯರು ಹೇಳಿದ್ದರು.

ಅವರ ಯಕೃತ್ತು, ಮೂತ್ರಪಿಂಡಗಳು, ಹೃದಯ ಕವಾಟ, ಚರ್ಮ ಮತ್ತು ಕಾರ್ನಿಯಾಗಳನ್ನು ಕಸಿ ಮಾಡಿ ತೆಗೆಯಲಾಯಿತು. ಹೀಗೆ ತೆಗೆದಿರುವ ಹೃದಯ ಕವಾಟವನ್ನು ಜಯದೇವ ಹೃದಯ ಕವಾಟ ಬ್ಯಾಂಕ್‌ಗೆ ಮತ್ತು ಚರ್ಮವನ್ನು ವಿಕ್ಟೋರಿಯಾ ಆಸ್ಪತ್ರೆಯ ಚರ್ಮದ ಬ್ಯಾಂಕ್‌ಗೆ ಕಳುಹಿಸಲಾಗಿದೆ. ಕಾರ್ನಿಯಾಗಳನ್ನು ಪ್ರಭಾ ನೇತ್ರ ಚಿಕಿತ್ಸಾಲಯಕ್ಕೆ ದಾನ ಮಾಡಲಾಯಿತು. ಒಂದು ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ಇಲ್ಲಿ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ, ಇನ್ನೊಂದು ಮೂತ್ರಪಿಂಡವನ್ನು ಎನ್‌ಯು ಆಸ್ಪತ್ರೆಯಲ್ಲಿ ರೋಗಿಗೆ ಕಸಿ ಮಾಡಲಾಗಿದೆ.

ಎಚ್ ಬಿ ಪಿ ಮತ್ತು ಲಿವರ್ ಕಸಿ ವಿಭಾಗದ ಮುಖ್ಯಸ್ಥ ಮತ್ತು ಹಿರಿಯ ಸಲಹೆಗಾರ ಡಾ. ಮಹೇಶ್ ಗೋಪಶೆಟ್ಟಿ ನೇತೃತ್ವದ ಕಸಿ ಶಸ್ತ್ರಚಿಕಿತ್ಸಕರ ತಂಡ, ಲಿವರ್‌ನ ಕಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿತು. ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಕುಮಾರ್ ಬಿ.ಟಿ. ಮತ್ತು ಹಿರಿಯ ಕಸಿ ಶಸ್ತ್ರಚಿಕಿತ್ಸಕ ಡಾ ನರೇಂದ್ರ ಎಸ್. ಅವರು ಮೂತ್ರಪಿಂಡ ಕಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದರು.

ಬೆಂಗಳೂರಿನ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಚೀಫ್ ಗ್ರೀಫ್ ಕನ್ಸಲ್ಟೆಂಟ್ ಮತ್ತು ಕಸಿ ವಿಧಾನದ ಸಂಯೋಜಕಿ ಸರಳಾ ಅನಂತರಾಜ್ ಪ್ರತಿಕ್ರಿಯಿಸಿ, ಜಾಗೃತಿ ಹೆಚ್ಚುತ್ತಿರುವ ಕಾರಣ ಹೆಚ್ಚಿನ ಜನರು ಅಂಗಾಂಗ ದಾನದ ಪ್ರತಿಜ್ಞೆ ಮಾಡಲು ಮುಂದಾಗುತ್ತಿದ್ದಾರೆ. ತಮ್ಮ ಜೀವನದಲ್ಲಿ ಇಂತಹ ವಿನಾಶಕಾರಿ ಸಮಯದಲ್ಲಿ, ಕುಟುಂಬಗಳು ಈ ಕಠಿಣ ನಿರ್ಧಾರವನ್ನು ಮಾಡಲು ಧೈರ್ಯ ಮತ್ತು ಸಹಾನುಭೂತಿಯನ್ನು ತೋರಿಸುತ್ತವೆ, ಅದು ಹಲವು ಜೀವಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.

ಶ್ವೇತಾ ಅವರು ಪತಿ, ಇಬ್ಬರು ಸಹೋದರರು ಮತ್ತು ತಾಯಿಯನ್ನು ಅಗಲಿದ್ದಾರೆ.

ಇದನ್ನೂ ಓದಿ | Snake bite | ಹಾವು ಕಚ್ಚಿ ಮೆದುಳು ನಿಷ್ಕ್ರಿಯಗೊಂಡು ಉರಗ ರಕ್ಷಕ ಸ್ನೇಕ್ ಲೋಕೇಶ್ ಸಾವು

Exit mobile version