ಚಿಕ್ಕಮಗಳೂರು: ಇತ್ತೀಚೆಗೆ ಅಂಗಾಂಗ ದಾನದ (Organ donation) ಕುರಿತು ಜನರಲ್ಲಿ ಅರಿವು ಹೆಚ್ಚಾಗುತ್ತಿದ್ದು, ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಬಹು ಅಂಗಾಂಗ ದಾನಕ್ಕೆ ಕುಟುಂಬಸ್ಥರು ಒಪ್ಪುವ ಮೂಲಕ ಹಲವರ ಬದುಕಿಗೆ ದಾರಿ ದೀಪವಾಗುತ್ತಿದ್ದಾರೆ. ಈಗ ಮೂಡಿಗೆರೆಯ ವ್ಯಕ್ತಿಯೊಬ್ಬರ ಕುಟುಂಬವೂ ಅಂಗಾಂಗ ದಾನಕ್ಕೆ ಒಪ್ಪಿ ಇನ್ನೊಬ್ಬರ ಜೀವಗಳಿಗೆ ವರದಾನವಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಬಳಿ ಬೈಕ್-ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಧನ್ಯಕುಮಾರ್ (37) ಎಂಬಾತ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧನ್ಯಕುಮಾರ್ ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಬದುಕುವುದು ಅಸಾಧ್ಯ ಎಂದು ವೈದ್ಯರು ಹೇಳಿದ್ದರು.
ಅಪಘಾತದಲ್ಲಿ ಧನ್ಯಕುಮಾರ್‌ನ ದೇಹದ ಇತರೆ ಭಾಗಗಳು ಸುರಕ್ಷಿತವಾಗಿದ್ದ ಕಾರಣ ಅಂಗಾಂಗ ದಾನ ಮಾಡುವಂತೆ ಕುಟುಂಬಸ್ಥರಿಗೆ ವೈದ್ಯರು ಸಲಹೆ ನೀಡಿದರು. ಹೀಗಾಗಿ ನೋವಿನಲ್ಲೂ ಮಗನ ಅಂಗಾಂಗ ದಾನಕ್ಕೆ ಧನ್ಯಕುಮಾರ್ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆದಿದೆ.
ಧನ್ಯಕುಮಾರ್ ದೇಹದಿಂದ ಹೃದಯ, ಕಿಡ್ನಿ, ಲಿವರ್, ಕಣ್ಣು ಸೇರಿದಂತೆ ಪ್ರಮುಖ ಭಾಗಗಳ ಅಂಗಾಂಗ ಪಡೆಯಲಾಗುತ್ತಿದೆ. ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಧನ್ಯಕುಮಾರ್, 4 ವರ್ಷದ ಮಗಳು, ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ.
ಇದನ್ನೂ ಓದಿ | Nursing college | 10 ಸಾವಿರ ಕೊಟ್ಟವರಿಗೆ ನರ್ಸಿಂಗ್ ಕಾಲೇಜಲ್ಲಿ ಸಾಮೂಹಿಕ ನಕಲು: ಕ್ಯಾಮೆರಾ ಕಂಡಾಗ ಏನೂ ಆಗಿಲ್ಲವೆಂದರು