Site icon Vistara News

Organ Donation | ಬೈಕ್‌ ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ಮಂಗಳೂರು/ಉಳ್ಳಾಲ: ಶನಿವಾರ ತಡರಾತ್ರಿ ಕುತ್ತಾರು ದೇವಸ್ಥಾನ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ (೨೦) ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರು ಅಂಗಾಂಗ ದಾನ (Organ Donation) ಮಾಡಲು ಮುಂದಾಗಿದ್ದಾರೆ.

ಅಪಘಾತ ನಂತರ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಗಾಯಾಳು ಮೆದುಳು ನಿಷ್ಕ್ರಿಯಗೊಂಡಿರುವುದನ್ನು ತಿಳಿಸಿದ್ದಾರೆ. ಹೀಗಾಗಿ ಭಾನುವಾರ ಸಂಜೆ 4 ಗಂಟೆ ಬಳಿಕ ನಡೆದ ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ನಡೆಸುವ ಕುರಿತು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು.

ಮೃತ ಭೂಷಣ್ ತಂದೆ ಮಾರಪ್ಪ ರೈ ವರ್ಷದ ಹಿಂದಷ್ಟೇ ಮೃತಪಟ್ಟಿದ್ದರು. ಸಹೋದರಿಯ ವಿವಾಹ ಎರಡು ವಾರಗಳ ಹಿಂದಷ್ಟೇ ನೆರವೇರಿತ್ತು. ಈಗ ಮಗನನ್ನೂ ಕಳೆದುಕೊಂಡು ತಾಯಿ ಒಬ್ಬಂಟಿ ಆಗಿದ್ದಾರೆ.

ಡಿವೈಡರ್ ಬೈಕ್‌ ಡಿಕ್ಕಿ
ಶನಿವಾರ (ಜ.7) ರಾತ್ರಿ ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಬರುತ್ತಿದ್ದ ಭೂಷಣ್ ರೈ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಸಮೀಪ ಡಿವೈಡರ್‌ಗೆ ಗುದ್ದಿತ್ತು. ಪರಿಣಾಮ ಭೂಷಣ್ ಬೈಕ್‌ನಿಂದ ಹಾರಿ ಬಿದ್ದಿದ್ದರು. ತಲೆಗೆ ಗಂಭೀರ ಗಾಯವಾಗಿತ್ತು. ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕೇರಳದ ಆಲ್ಟೋ ಕಾರಿನಲ್ಲಿದ್ದ ಐವರ ತಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕಲ್ಲಾಪು ಬುರ್ದುಗೋಳಿ ಕೋಲದಲ್ಲಿ ಭಾಗವಹಿಸಿ ಬೈಕಿನಲ್ಲಿ ಕುತ್ತಾರಿನತ್ತ ಬರುವ ವೇಳೆ ಅಪಘಾತ ಸಂಭವಿಸಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ | Bangalore Chitra Santhe | ಚಿತ್ರಸಂತೆಯಲ್ಲಿ ರಂಗೇರಿದ ದೇಶಿ-ವಿದೇಶಿ ಕಲಾಕೃತಿಗಳುOrgan Donation

Exit mobile version