Site icon Vistara News

ಕಸ್ತೂರಿ ರಂಗನ್‌ ವರದಿ ವಿರುದ್ಧ ಮೂರು ದಿನ ಮಲೆನಾಡು ಬಂದ್‌ಗೆ ಕರೆ

central govt considers separate final notifications for states

kasturi rangan

ಬೆಂಗಳೂರು: ಪಶ್ಚಿಮ ಘಟ್ಟ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಇಸ್ರೊ ಮಾಜಿ ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್‌ ಸಮಿತಿ ನೀಡಿರುವ ವರದಿಯನ್ನು ವಿರೋಧಿಸಿ ಮಲೆನಾಡು ಬಂದ್‌ಗೆ ಪಕ್ಷಾತೀತವಾಗಿ ಕರೆ ನೀಡಲಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಮೂರು ಹಂತದಲ್ಲಿ ಬಂದ್‌ ಆಚರಿಸುವ ಮೂಲಕ, ಸಮಿತಿ ವರದಿಯನ್ನು ಜಾರಿ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ.

ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಇದಕ್ಕೆ ರಾಜ್ಯ ಸರ್ಕಾರ, ಶಾಸಕರು ಹಾಗೂ ಮಲೆನಾಡಿನ ಜನರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಿದರೆ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ವರದಿಯನ್ನು ತಿರಸ್ಕರಿಸುವುದಾಗಿ ನಿರ್ಧಾರ ಕೈಗೊಂಡಿದೆ. ಇದೀಗ ನವದೆಹಲಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಈ ವಿಚಾರವನ್ನು ಮುಂದಿಡಲಿದ್ದಾರೆ.

ಇಷ್ಟರ ನಂತರವೂ, ಸುಪ್ರೀಂಕೋರ್ಟ್‌ ಆದೇಶ ಅಥವಾ ಕಾನೂನಿಗೆ ಕಟ್ಟುಬಿದ್ದು ವರದಿಯನ್ನು ಜಾರಿ ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಉಂಟಾಗಬಹುದು ಎಂಬ ಅನುಮಾನ ಈ ಭಾಗದ ಜನರಿಗಿದೆ. ಇದೇ ಕಾರಣಕ್ಕೆ ಮಲೆನಾಡು ಬಂದ್‌ಗೆ ಪಕ್ಷಾತೀತವಾಗಿ ಕರೆ ನೀಡಲಾಗಿದೆ.

ಮಲೆನಾಡು ಪ್ರದೇಶವಾದ ಸಕಲೇಶಪುರದಲ್ಲಿ ಜುಲೈ 27ರಂದು, ಚಿಕ್ಕಮಗಳೂರಿನಲ್ಲಿ ಜುಲೈ 28ರಂದು, ಕೊಡಗುವಿನಲ್ಲಿ ಜುಲೈ 29ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

ಇದನ್ನೂ ಓದಿ | Kasturirangan Report | ಪಶ್ಚಿಮಘಟ್ಟ ತಪ್ಪಲಿನ ಜನರ ನಿದ್ರೆಗೆಡಿಸಿದ ಈ ವರದಿ ಬಂದಿದ್ದಾದರೂ ಏಕೆ?

ಬಂದ್‌ ಕುರಿತು ಪ್ರತಿಕ್ರಿಯೆ ನೀಡಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ನಮ್ಮ ಸರ್ಕಾರ ಕಸ್ತೂರಿ ರಂಗನ್ ಕೊಟ್ಟಿರುವ ವರದಿಗೆ ವಿರುದ್ದವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವರು ಇದೇ ವಿಚಾರವಾಗಿ ದೆಹಲಿಗೆ ಹೋಗಿದ್ದು, ಅಲ್ಲಿ ಸಂಬಂಧಪಟ್ಟವರ ಜತೆ ಚರ್ಚೆ ಮಾಡಲಿದ್ದಾರೆ.‌ ಈ ವರದಿಯಿಂದ ರಾಜ್ಯದ ಹಲವಾರು ಜಿಲ್ಲೆಗಳ ಹಳ್ಳಿಗಳಿಗೆ ತೊಂದರೆಯಾಗಲಿದೆ. ನಮ್ಮ ಸರ್ಕಾರ ಅದನ್ನು ತಿರಸ್ಕಾರ ಮಾಡಿ, ಕೇಂದ್ರ‌‌‌ ಸರ್ಕಾರಕ್ಕೆ ವರದಿ ಕಳುಹಿಸಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದೆ ಎಂದು ಹೇಳಿದ್ದಾರೆ.

ಮಲೆನಾಡು ಜಿಲ್ಲೆಗಳಾದ ಪಶ್ಚಿಮಘಟ್ಟದ ವರದಿ ಅನುಷ್ಠಾನದಿಂದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಆದಿಬೈಲು ಎಂಬ ಹಳ್ಳಿ ತೊಂದರೆಗೆ ಸಿಲುಕಲಿದೆ. ಸಕಲೇಶಪುರ ತಾಲೂಕಿನ ಅಚನಹಳ್ಳಿ, ಮರಗುಂದ, ಅಗನಿ, ಕುಮಾರಹಳ್ಳಿ, ಹೊಡಚಹಳ್ಳಿ, ಕಾಡುಮನೆ ಎಸ್ಕೇಟ್, ಹೆಗ್ಗಡ್ಡೆ ಸೇರಿ 20ಕ್ಕೂ ಹೆಚ್ಚು ಹಳ್ಳಿಗಳು ಕಸ್ತೂರಿರಂಗನ್ ವರದಿಯೊಳಗೆ ಬರಲಿವೆ. ಮೂರು ಜಿಲ್ಲೆಯ ನೂರಾರು ಹಳ್ಳಿಗಳನ್ನು ಸೂಕ್ಷ್ಮ ವಲಯದೊಳಗೆ ಗುರುತಿಸಿದ್ದು, ಈ ವರದಿಯನ್ನು ಸರ್ಕಾರ ಅನುಮೋದಿಸಿದರೆ ಹಾಸನದ ಈ ಹಳ್ಳಿಗಳಿಗೂ ಅಪಾಯ ಉಂಟಾಗಲಿದೆ. ಇದೊಂದು ಉಪಗ್ರಹ ಆಧಾರಿತ ಯೋಜನೆಯಾಗಿದ್ದು, ಖುದ್ದಾಗಿ ಭೌತಿಕ ಸರ್ವೇ ಮೂಲಕ ಸೂಕ್ಷ್ಮ ಗುರುತಿಸಿಲ್ಲ, ಇದರಲ್ಲಿ ಕೃತಕ ಅರಣ್ಯವಾದ ಕಾಫಿ, ಅಡಿಕೆ, ತೆಂಗು ತೋಟಗಳು ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಅರಣ್ಯ ಪ್ರದೇಶವೆಂದು ಘೋಷಿಸಿದ್ದು, ಇದನ್ನು ಸರಿಪಡಿಸಲು ಖುದ್ದಾಗಿ ಸರ್ವೇ ಮಾಡಿಸಿ, ನೈಸರ್ಗಿಕ ಅರಣ್ಯ ಗಡಿ ಗುರುತಿಸಬೇಕು ಎಂದು ಮಲೆನಾಡಿನ ಜನರು ಹಾಗೂ ಶಾಸಕರುಗಳು ಒತ್ತಾಯಿಸಿದ್ದಾರೆ.‌

ಈ ಕುರಿತು ಪ್ರತಿಕ್ರಿಯಿಸಿರುವ ಬೇಲೂರು ಶಾಸಕ ಕೆ.ಎಸ್. ಲಿಂಗೇಶ್, ಕಸ್ತೂರಿರಂಗನ್‌ ವರದಿಯನ್ನು ಜಾರಿ ಮಾಡಬಾರದೆಂದು ನಾವೆಲ್ಲರೂ ಒತ್ತಾಯಿಸುತ್ತಿದ್ದೇವೆ. ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಬೇಡ. ನಮ್ಮಂತೆಯೇ ಕಾಡು ಪ್ರಾಣಿಗಳೂ, ಸಸ್ಯ ಸಂಕುಲವೂ ಬದುಕಬೇಕು. ಮಾನವ ಹಾಗೂ ಪರಿಸರದ ನಡುವೆ ಸಮತೋಲನ ಇರಬೇಕು. ಈ ನಿಟ್ಟಿನಲ್ಲಿ ವರದಿಯನ್ನು ಪರಿಷ್ಕರಣೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಈ ಕುರಿತು ಕರೆ ನೀಡಲಾಗಿರುವ ಬಂದ್‌ಗೆ ಜೆಡಿಎಸ್‌ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಬಂದ್‌ ಕರೆಗೆ ಈ ಪ್ರದೇಶಗಳ ವಿವಿಧ ರಾಜಕೀಯ ಪಕ್ಷಗಳು, ಬೆಳೆಗಾರರ ಸಂಘಗಳು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

ಇದನ್ನೂ ಓದಿ | ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ: ವರದಿ ಕೈಬಿಡುವಂತೆ ಕಾನೂನು ಹೋರಾಟ

Exit mobile version