Site icon Vistara News

Karnataka Politics: ಪ್ರಾದೇಶಿಕ ಪಕ್ಷ ಉಳಿಸುವುದೇ ನಮ್ಮ ಗುರಿ: ಎಚ್‌.ಡಿ.ದೇವೇಗೌಡ

EX Prime minister HD Devegowda

ಬೆಂಗಳೂರು: ನಮ್ಮ ಗುರಿ ಪ್ರಾದೇಶಿಕ ಪಕ್ಷ ಉಳಿಸುವುದಾಗಿದೆ. ನಮಗೆ ಯಾವ ಪಕ್ಷದ ಮೇಲೂ ದ್ವೇಷ ಇಲ್ಲ. ನಮ್ಮ ಪಕ್ಷವನ್ನು (Karnataka Politics) ಸಂಘಟನೆಗೊಳಿಸಿ ಉಳಿಸಲು ಕೆಲಸ ಮಾಡುವೆ. ಕಳೆದ ಬಾರಿ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಹಲವು ಕಾರ್ಯಕ್ರಮ ಕೊಟ್ಟಿದ್ದೆವು. ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಮಾಡಲಾಗಿದ್ದು, ಅವರು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಾರೆ. ಅದರಲ್ಲಿ ನಾವು ಹಸ್ತಕ್ಷೇಪ ಮಾಡಲು ಹೋಗಲ್ಲ. ಈ 90ನೇ ವಯಸ್ಸಿನಲ್ಲಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತೇನೆ. ಇಲ್ಲಿಂದ ಮುಂದಕ್ಕೆ ಪಕ್ಷದ ಶಕ್ತಿಯನ್ನು ಹೆಚ್ಚು ಮಾಡಲು ನನ್ನು ಅನುಭವವನ್ನು ಧಾರೆ ಎರೆಯುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ | HD Deve Gowda: ದೇವೇಗೌಡರ ಶ್ರಮಕ್ಕೆ ಸರಿಯಾದ ಫಲ ಸಿಕ್ಕಿಲ್ಲ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಕೋರ್ ಕಮಿಟಿ ಸದಸ್ಯರು ರಾಜ್ಯದ ವಿವಿಧೆಡೆ ಹೋಗುತ್ತಾರೆ. ಸ್ಥಳೀಯ ಸಂಸ್ಥೆಯ ಚುನಾವಣೆಗೆ ಕಾರ್ಯಕ್ರಮ ರೂಪಿಸುತ್ತಾರೆ ಎಂದ ಅವರು, ಎರಡು ರಾಷ್ಟ್ರೀಯ ಪಕ್ಷದ ಮಧ್ಯದಲ್ಲಿ ಕಿಂಚಿತ್ತು ಶಕ್ತಿ ಇರುವ ನಮ್ಮ ಪಕ್ಷವನ್ನು ಉಳಿಸಿ ಬೆಳೆಸುತ್ತೇನೆ. ಈ ಎರಡು ಪಕ್ಷದ ನಡುವೆ ನಮ್ಮ ಪಕ್ಷವನ್ನ ಉಳಿಸೇ ಉಳಿಸುವ ಸಂಕಲ್ಪ ತೊಟ್ಟಿದ್ದೇನೆ. ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ ಎಂದು ತಿಳಿಸಿದರು.

ಪ್ರಾದೇಶಿಕ ಪಕ್ಷವನ್ನು ತುಳಿಯುತ್ತಿದ್ದಾರೆ

ಲೋಕಸಭಾ ಕ್ಷೇತ್ರದ ಪುನರ್ ವಿಂಗಡಣೆ ಬಗ್ಗೆ ಚರ್ಚೆ ಆಗುತ್ತಿದೆ. ಜಿ.ಟಿ.ದೇವೆಗೌಡರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ತಯಾರಿ ಮಾಡಲಾಗುತ್ತಿದೆ. ಬಿಬಿಎಂಪಿ ಚುನಾವಣೆಯ ಬಗ್ಗೆಯೂ ತಯಾರಿ ಮಾಡುತ್ತಿದ್ದಾರೆ. ಬಹಳ ಜನ ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಸುದ್ದಿ ಇದೆ. ಆದರೆ, ಯಾರು ಹೋಗುತ್ತಾರೆ ಎಂದು ಹೇಳಿದರೆ ನಾನು ಸರಿ ಮಾಡಿಕೊಳ್ಳುತ್ತೇನೆ. ಈ ರೀತಿಯ ಊಹಾಪೋಹದ ಸುದ್ದಿ ಮಾಡಬೇಡಿ. ಈ ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ. ದೇಶದಲ್ಲಿ ಪ್ರಾದೇಶಿಕ ಪಕ್ಷವನ್ನು ತುಳಿಯುತ್ತಿದ್ದಾರೆ ಎಂದು ಹೇಳಿದರು.

ನಾನು ತುಂಬ ವಿಚಾರ ಮಾತನಾಡಬಲ್ಲೆ, ಆದರೆ, ಇಂದು ಪಕ್ಷದ ಸಂಘಟನೆಯಷ್ಟೇ ಮಾತನಾಡುವೆ. ದೇವೇಗೌಡರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ಎಂದು ತಿಳಿಯಬೇಡಿ. ಕುಮಾರಸ್ವಾಮಿಯವರು ಎಲ್ಲ ಕಡೆ ಓಡಾಡಬೇಕಾಗುತ್ತದೆ. ಕುಮಾರಸ್ವಾಮಿಯವರ ನಾಯಕತ್ವದಲ್ಲೆ ಪಕ್ಷ ಮುನ್ನಡೆಯಲಿದೆ. ಕೋರ್ ಕಮಿಟಿ ಸದಸ್ಯರ ವಿಶ್ವಾಸಕ್ಕೆ ಪಡೆದು ಒಂದು ತೀರ್ಮಾನ ಮಾಡುತ್ತೇವೆ. ಯಾವುದೇ ತೀರ್ಮಾನ ಆಗಲಿ ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಸೆ.10ರಂದು ಬೃಹತ್‌ ಸಮಾವೇಶ

ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆ ಬಹಳ ಚರ್ಚೆ ಮಾಡಿದ್ದೇನೆ, ಪ್ರತಿಯೊಂದು ವಿಚಾರ ತಿಳಿದಿದ್ದೇನೆ. ಒಬ್ಬನೇ ಒಬ್ಬ ಶಾಸಕ ಹೋಗುತ್ತಾರೆ ಎಂದರೆ ತಿಳಿಸಿ ಎಂದ ಅವರು, ಸೆ.10ರಂದು 20 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ನಾವು ದುಡ್ಡು ಕೊಟ್ಟು ಜನರನ್ನು ಕರೆಸಲ್ಲ. ದೇವೆಗೌಡರ ಪಕ್ಷವನ್ನು ಅವರ ಕೊನೆ ಗಳಿಗೆಯಲ್ಲಿ ಉಳಿಸಲೇಬೇಕೆಂದು ಜನ ಬರುತ್ತಾರೆ. ಈ ಹಿಂದೆ ಏನೇ ಸಮಸ್ಯೆ ಆಗಿದ್ದರೂ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ | Yathindra siddaramaiah : ಪುತ್ರನಿಗೆ ರಾಜಕೀಯ ಆಶ್ರಯ ನೀಡಿದ ಸಿದ್ದರಾಮಯ್ಯ; ಎರಡು ಹುದ್ದೆಗೆ ಯತೀಂದ್ರ ನೇಮಕ

ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ಮಾಜಿ ಪ್ರಧಾನಿ, ಚಂದ್ರಯಾನ 3 ಯಶಸ್ವಿಗೊಳಿಸಿ ಇಡೀ ವಿಶ್ವ ಭಾತರದ ಕಡೆ ನೋಡುವಂತೆ ವಿಜ್ಞಾನಿಗಳು ಮಾಡಿದ್ದಾರೆ. ಈ ಮೂಲಕ ದೇಶದ ಘನತೆ ಮತ್ತು ಗೌರವ ಹೆಚ್ಚಿಸಿದ್ದಾರೆ. ವಿಜ್ಞಾನಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Exit mobile version