Site icon Vistara News

ನೂಪುರ್, ಚಕ್ರತೀರ್ಥ, ಕಾಶ್ಮೀರ ಹಿಂದೂಗಳಿಗೆ ನಮ್ಮ ಬೆಂಬಲ: ಪ್ರಮೋದ್‌ ಮುತಾಲಿಕ್

ಪ್ರಮೋದ್‌ ಮುತಾಲಿಕ್

ಬೆಳಗಾವಿ: ಬಿಜೆಪಿ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ಸತ್ಯವನ್ನೇ ಹೇಳಿದ್ದಾರೆ. ಹೇಳಿಕೆ ಸತ್ಯವಾದರೂ ಸಮರ್ಥನೆ ಮಾಡಿಕೊಳ್ಳದೆ ಯಾರದೋ ಒತ್ತಡಕ್ಕೆ ಮಣಿದು ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ʼʼನೂಪುರ್‌ ಶರ್ಮಾ ಪ್ರಖರ ವಾಗ್ಮಿಯಾಗಿದ್ದು, ವಿರೋಧಿಗಳ ಟೀಕೆಗಳಿಗೆ ಸಮರ್ಪಕವಾಗಿ ಉತ್ತರ ಕೊಡುತ್ತಿದ್ದರು. ಬಿಜೆಪಿ ರಾಷ್ಟ್ರೀಯ ವಕ್ತಾರೆ ಹುದ್ದೆಯಿಂದ ಅವರನ್ನು ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಅಧರ್ಮ, ಅನ್ಯಾಯ, ಅಸತ್ಯವನ್ನು ಬಿಜೆಪಿಯವರು ಮೇಲೆತ್ತುತ್ತಿದ್ದಾರೆʼʼ ಎಂದು ಮುತಾಲಿಕ್ ಕಿಡಿಕಾರಿದರು.

‌ʼʼನೂಪುರ್ ಹೇಳಿಕೆಗೆ ಖತಾರ್, ಇರಾಕ್ ಮತ್ತಿತರ ಮುಸ್ಲಿಂ ರಾಷ್ಟ್ರಗಳು ವಿರೋಧ ಮಾಡಿವೆ. ಇಷ್ಟಕ್ಕೂ ಮುಸ್ಲಿಂ ರಾಷ್ಟ್ರಗಳಿಗೆ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಿಮ್ಮ ಧರ್ಮವನ್ನು ಅವಹೇಳನ ಮಾಡಿದರೆಂದು ಮಾತನಾಡುವುದಾದರೆ; ನಮ್ಮ ಧರ್ಮ, ಗ್ರಂಥ, ದೇವತೆಗಳ ಬಗ್ಗೆ ಅಸಭ್ಯವಾಗಿ ಬೈದವರನ್ನು ನಾವೇನು ಮಾಡಬೇಕುʼʼ ಎಂದ ಅವರು ʼʼಪಾಕ್, ಬಾಂಗ್ಲಾದೇಶದಲ್ಲಿ ಹಿಂದೂಗಳ ಕತೆ ಏನಾಗುತ್ತಿದೆ, ಅದನ್ನೇಕೆ ಮುಸ್ಲಿಂ ರಾಷ್ಟ್ರಗಳು ಪ್ರಶ್ನಿಸುವುದಿಲ್ಲʼʼ ಎಂದು ಆಕ್ರೋಶ ಹೊರಹಾಕಿದರು.

ʼʼಮುಸ್ಲಿಮರ ಭಯಕ್ಕೆ ಕೇಂದ್ರ ಸರ್ಕಾರ ಮಣಿಯಬಾರದು. ನೂಪುರ್ ಶರ್ಮಾ ವಜಾ ಹಿಂಪಡೆಯಬೇಕು. ಈ ಬೆಳವಣಿಗೆ ಬಿಜೆಪಿ ನಾಯಕರ ಮನಸ್ಥಿತಿ ಕುಗ್ಗಿಸುತ್ತದೆ. ನೂಪರ್ ಶರ್ಮಾಗೆ ಕೋಟ್ಯಂತರ ಹಿಂದೂಗಳ ಬೆಂಬಲ ಇದೆ. ಅವರಿಗೆ ಯಾವುದೇ ಬೆದರಿಕೆ ಹಾಕಿದರೆ ಈ ದೇಶ ಸುಮ್ಮನೆ ಇರಲ್ಲ ಅಂತ ನಾನು ಎಚ್ಚರಿಕೆ ಕೊಡುತ್ತೇನೆ. ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದಾರೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿ ತಪ್ಪಿತಸ್ಥರನ್ನು ಹಿಡಿಯಲು ಸಾಧ್ಯವಿಲ್ಲವೇʼʼ ಎಂದು ಕಿಡಿ ಕಾರಿದರು.

ಇದನ್ನೂ ಓದಿ | ಪಠ್ಯಪುಸ್ತಕ ನೆಪದಲ್ಲಿ ಅಶಾಂತಿ: ಸಿಎಂ ರಾಜೀನಾಮೆಗೆ ಡಿ. ಕೆ. ಶಿವಕುಮಾರ್ ಆಗ್ರಹ

ʼʼರೋಹಿತ್‌ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಬಗ್ಗೆ ವಿರೋಧ ವ್ಯಕ್ತಪಡಿಸಿದವರ ಟಾರ್ಗೆಟ್‌ ಹೆಡ್ಗೇವಾರ್, ಬ್ರಾಹ್ಮಣರು ಹಾಗೂ ಆರ್‌ಎಸ್‌ಎಸ್‌ ಆಗಿದೆ. ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳು ವಿವಾದದ ಬಗ್ಗೆ ಚರ್ಚಿಸಲು ಆಹ್ವಾನಿಸಿದರೂ ಯಾರೂ ಹೋಗಲಿಲ್ಲ. ಬಸವಣ್ಣ, ಕುವೆಂಪು ಅವರಿಗೆ ಯಾವುದೇ ಅಪಮಾನವಾಗಿಲ್ಲ. ಬರಗೂರು ರಾಮಚಂದ್ರಪ್ಪ ಸಮಿತಿ ಸಾಕಷ್ಟು ತಪ್ಪು ಮಾಡಿದ್ದರೂ ಕಮ್ಯುನಿಸ್ಟರು, ಕಾಂಗ್ರೆಸ್‌ನವರು ಬಾಯಿ ಬಿಟ್ಟಿಲ್ಲ. ಆದರೆ ಈಗ ವಿರೋಧ ಮಾಡುವುದು ಸರಿಯಲ್ಲ. ಹೀಗಾಗಿ ನೂಪುರ್, ಚಕ್ರತೀರ್ಥ, ಕಾಶ್ಮೀರ ಹಿಂದೂಗಳಿಗೆ ನಮ್ಮ ಬೆಂಬಲ ಇದೆʼʼ ಎಂದರು.

ಹಿಂದೂಗಳ ಟಾರ್ಗೆಟ್‌ ಯಾಕೆ?
ʼʼಕಾಶ್ಮೀರದಿಂದ 32 ವರ್ಷಗಳ ಹಿಂದೆ 7 ಲಕ್ಷ ಹಿಂದೂಗಳನ್ನು ಹೊರಹಾಕಿದರು. ಈಗ ಅದೇ ರಿಪೀಟ್‌ ಆಗುತ್ತಿದೆ. ಅಸುರಕ್ಷತೆ ಭಾವನೆಯಿಂದ ಕಾಶ್ಮೀರದಿಂದ ಸಾವಿರಾರು ಜನ ಹೊರಗೆ ಹೋಗುತ್ತಿದ್ದಾರೆ. 370ನೇ ವಿಧಿ ರದ್ದು ಮಾಡಿ ಮೂರು ವರ್ಷ ಆಯ್ತು, ಒಂದೇ ವಾರದಲ್ಲಿ 9 ಹಿಂದೂಗಳ ಕೊಲೆಯಾಯಿತು, ಇನ್ನೂ ಏಕೆ ಹಿಂದೂಗಳ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿದ್ದಾರೆ? ಮುಸ್ಲಿಂ ಶಿಕ್ಷಕಿಯನ್ನು ಬಿಟ್ಟು ಹಿಂದೂ ಶಿಕ್ಷಕಿಯನ್ನು ಟಾರ್ಗೆಟ್ ಮಾಡಿ ಹೊಡೆದರು. ಬ್ಯಾಂಕ್ ಮ್ಯಾನೇಜರ್ ಹಿಂದೂ ಅಂತಾನೇ ಟಾರ್ಗೆಟ್ ಮಾಡಿದರು. ವ್ಯವಸ್ಥಿತವಾಗಿ ಅಲ್ಲಿ ಹಿಂದೂಗಳು ಬೆಳೆಯಬಾರದು ಎಂಬ ಸಂದೇಶ ನೀಡುವ ಕಾಶ್ಮೀರಿ ಉಗ್ರರನ್ನು ಕೇಂದ್ರ ಸರ್ಕಾರ ನಿರ್ದಾಕ್ಷಿಣ್ಯವಾಗಿ ಎನ್‌ಕೌಂಟರ್ ಮಾಡಬೇಕು. ಕಾಶ್ಮೀರದಲ್ಲಿ ಹಿಂದೂಗಳಿಗೆ ಗನ್ ಲೈಸೆನ್ಸ್ ಕೊಡಿ, ಪ್ರತಿಯೊಬ್ಬರಿಗೂ ರಕ್ಷಣೆ ಬಗ್ಗೆ ಯೋಚನೆ ಮಾಡಿʼʼ ಎಂದು ಒತ್ತಾಯಿಸಿದರು.

ಇದನ್ನೂ ಓದಿ | ಸಿದ್ದರಾಮಯ್ಯ ಸೀಳು ನಾಲಿಗೆ ಸರಿಪಡಿಸಿಕೊಳ್ಳಲಿ : ಸಚಿವ ಶ್ರೀರಾಮುಲು

Exit mobile version