ಬೆಂಗಳೂರು: ಆಗಸ್ಟ್ ಅಂತ್ಯ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದ ತತ್ತರಿಸಿದ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಪ್ರದೇಶದ ಸಮಸ್ಯೆ ಪರಿಹಾರಕೆ ಐಟಿ ಬಿಟಿ ಮತ್ತು ವಾಣಿಜ್ಯ ಕಂಪನಿಗಳ ಒಕ್ಕೂಟ ಒರ್ಕಾ ಕೆಲವು ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ.
ಭಾರಿ ಮಳೆಯ ಸಂದರ್ಭದಲ್ಲಿ ಇಲ್ಲಿನ ಬಹುತೇಕ ಐಟಿ ಪಾರ್ಕ್‌ಗಳು ನೀರಿನಲ್ಲಿ ಮುಳುಗಿದ್ದವು. ಪಾರ್ಕ್‌ಗಳು ಮಾತ್ರವಲ್ಲ ಅಲ್ಲಿಗೆ ಹೋಗುವ ರಸ್ತೆಗಳು ಕೂಡಾ ಜಲಾವೃತವಾಗಿದ್ದವು. ಹೀಗಾಗಿ ಕಂಪನಿಗಳು ಭಾರಿ ದೊಡ್ಡ ನಷ್ಟವನ್ನು ಅನುಭವಿಸಿದ್ದವು. ಇಲ್ಲಿನ ಸಮಸ್ಯೆಗೆ ಎಲ್ಲ ಸರಕಾರಗಳ ನಿರ್ಲಕ್ಷ್ಯ, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸದಿರುವುದು, ಅವೈಜ್ಞಾನಿಕ ನಡೆಗಳು, ರಾಜಕಾಲುವೆ ಒತ್ತುವರಿ ಕಾರಣ ಎಂದು ಹೇಳಲಾಗಿತ್ತು.
ಐಟಿ ಮತ್ತು ವಾಣಿಜ್ಯ ಕಂಪನಿಗಳಿಗೆ ಉದ್ಯೋಗಿಗಳೇ ಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಮತ್ತೆ ವರ್ಕ್ ಫ್ರಂ ಹೋಮ್‌ಗೆ ಮೊರೆಹೋಗಿವೆ. ಇದೇ ಸಂದರ್ಭದಲ್ಲಿ ಇಲ್ಲಿ ಐಟಿ ಮತ್ತು ಬಿಟಿ ಹಾಗೂ ವಾಣಿಜ್ಯ ಕಂಪನಿಗಳ ಮುಖ್ಯಸ್ಥರು ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು. ಈ ವೇಳೆ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿತ್ತು.
ಪ್ರಮುಖ ಬೇಡಿಕೆಗಳು
೧. ಹೊರವರ್ತುಲ ರಸ್ತೆಯ 17 ಕಿಲೋಮೀಟರ್ ಮಾರ್ಗವನ್ನು ಪ್ರತ್ಯೇಕ ಮುನಿಸಿಪಾಲ್ ವಲಯ ಎಂದು ಘೋಷಿಸಬೇಕು.
2. ಎಕೋ ಸ್ಪೇಸ್ ಹಾಗೂ ಸಮಸ್ಯೆಗೆ ಒಳಗಾಗಿರುವ ರಾಜಕಾಲುವೆಗಳನ್ನು ಕೂಡಲೇ ಸರಿಪಡಿಸಬೇಕು.
೩. ಹೊರವರ್ತುಲ ರಸ್ತೆಯ ಮೆಟ್ರೋ ರೈಲು ಕಾಮಗಾರಿ ಕುರಿತ ಸಂಕ್ಷಿಪ್ತವಾದ ಟೈಂ ಲೈನ್ ತಿಳಿಸಬೇಕು.
೪. ಮೆಟ್ರೋ ರೈಲಿನ ವಿಚಾರವಾಗಿ ಎಸಿಎಸ್ ನೇತೃತ್ವದಲ್ಲಿ ಸೇರುವ ಸಭೆಯಲ್ಲಿ ORRCA ಅನ್ನೂ ಸೇರಿಸಿಕೊಳ್ಳಬೇಕು.
೫. 2019ರಲ್ಲಿ ಅನುಮೋದನೆ ಪಡೆದಿದ್ದ 19 ಆರ್ಟೀರಿಯಲ್ ರಸ್ತೆಗಳನ್ನು ಕೂಡಲೇ ಲೋಕಾರ್ಪಣೆ ಮಾಡಬೇಕು.
೬. ಹೊರ ವರ್ತುಲ ರಸ್ತೆ ಮೆಟ್ರೋ ನಿರ್ಮಾಣದ ಸಂದರ್ಭದಲ್ಲಿ ಟ್ರಾಫಿಕ್ ಹೆಚ್ಚಾಗದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು.
೭. ಪ್ರತ್ಯೇಕ ಮುನಿಸಿಪಾಲಿಟಿ ಘೋಷಣೆಯಾದ ಬಳಿಕ 2027ರೊಳಗೆ ಪ್ರದೇಶ ಅಭಿವೃದ್ಧಿಯಾಗಲು ತಜ್ಞರ ತಂಡ ರಚಿಸಬೇಕು.
೮. ಮುನಿಸಿಪಾಲಿಟಿ ಘೋಷಣೆಯಾದ ನಂತರ ಪಿಪಿಪಿ ಮಾಡೆಲ್ ಅಡಿ ಕೆಲಸಗಳನ್ನು ನಿರ್ವಹಿಸಬೇಕು.
೯. ಹೈ ಡೆನ್ಸಿಟಿ ಕಾರಿಡಾರ್ ಅನುಮೋದನೆ ನೀಡಬೇಕು. ಹೊಸೂರು ರಸ್ತೆ, ಸರ್ಜಾಪುರ ರಸ್ತೆ, ಓಲ್ಡ್ ಏರ್‌ಪೋರ್ಟ್ ರಸ್ತೆ, ಐಟಿಪಿಎಲ್, ಸಿಲ್ಕ್ ಬೋರ್ಡ್ ಹಾಗು ಕೆಆರ್ ಪುರದಲ್ಲಿ ಆರ್ಟೀರಿಯಲ್ ರಸ್ತೆಗಳ ನಿರ್ಮಿಸಬೇಕು.
೧೦. ಕೆರೆಗಳು ಹಾಗು ರಾಜಕಾಲುವೆ ನಿರ್ವಹಣೆಗಾಗಿ ಸಮಗ್ರ ಯೋಜನೆ ರೂಪಿಸಬೇಕು.
೧೧. ಒತ್ತುವರಿ ವಿಚಾರವಾಗಿ ಜೀರೋ ಟಾಲರೆನ್ಸ್ ಪಾಲಿಸಿ ಪಾಲಿಸಬೇಕು.
ಇದನ್ನೂ ಓದಿ | ಮಹದೇವಪುರದಲ್ಲಿ ಇಂದೂ ಮುಂದುವರಿಯಲಿದೆ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ಒತ್ತುವರಿ?