Site icon Vistara News

ಸರ್ಕಾರಿ ಶಾಲೆಗೆ ಬೀಗ ಹಾಕಿ ದನ ಕಟ್ಟಿದ ಮೂಲ ಮಾಲೀಕರು; ಈಗ ಬೀದಿಯಲ್ಲೇ ಮಕ್ಕಳಿಗೆ ಪಾಠ!

Mundaragi government school

ಗದಗ: ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ (Government School) ಜಾಗದ ಸಮಸ್ಯೆಯೊಂದು (Land Issue) ಕೇಳಿ ಬಂದಿದೆ. ಈ ಹಿಂದೆ ತಮಗೆ ಸರ್ಕಾರ ಕೊಟ್ಟಿದ್ದ ಜಾಗದ ಬಗ್ಗೆ ನೈಜ ಮಾಲೀಕ ತಗಾದೆ ತೆಗೆದಿದ್ದರಿಂದ ತಮ್ಮ ಜಾಗದಲ್ಲಿ ಕಟ್ಟಲಾಗಿದ್ದ ಸರ್ಕಾರಿ ಶಾಲೆಗೆ ಕುಟುಂಬವೊಂದು ಬೀಗ ಜಡಿದಿದೆ. ಅಲ್ಲದೆ, ಶಾಲೆಯ ಆವರಣದಲ್ಲಿ ದನ-ಕರುಗಳನ್ನು ಕಟ್ಟಿದೆ. ಹೀಗಾಗಿ ಈಗ ಶಾಲೆಯ ಮಕ್ಕಳು ಬೀದಿಗೆ ಬಂದಿದ್ದಾರೆ. ಮರದ ಕೆಳಗೆ ಪಾಠ ಮಾಡಲಾಗುತ್ತಿದೆ.

ಈಗ ಜಾಗದ ಮೂಲ ಮಾಲೀಕರು ಶಾಲೆಯ ಗೇಟ್‌ಗೆ ಬೀಗ ಹಾಕಿ, ದಾರಿಗೆ ಮುಳ್ಳಿನ‌ ಬೇಲಿಯನ್ನು ಹಾಕಿದ್ದಾರೆ. ಲಕ್ಷ್ಮವ್ವ ತಳವಾರ ಎಂಬುವವರ ಕುಟುಂಬದಿಂದ ಶಾಲಾ‌ ಜಾಗದ ಬಗ್ಗೆ ತಗಾದೆ ತಗೆಯಲಾಗಿದೆ. ಸರ್ಕಾರಿ ಶಾಲೆಗೆಂದು ಹದಿನಾಲ್ಕು ಗುಂಟೆ ಜಾಗವನ್ನು ಈ ಕುಟುಂಬದವರು ನೀಡಿದ್ದರು. ಆದರೆ, ತಮಗೆ ಕೊಟ್ಟಿದ್ದ ಪರ್ಯಾಯ ಜಾಗ ಈಗ ತಮ್ಮ ಕೈತಪ್ಪಿ ಹೋಗುತ್ತಿರುವುದರಿಂದ ಶಾಲೆಯ ಜಾಗಕ್ಕೆ ಪಟ್ಟು ಹಿಡಿದಿದ್ದಾರೆ. ತಮಗೆ ಈ ಜಾಗವನ್ನು ಬಿಟ್ಟು ಕೊಡಿ ಇಲ್ಲವೇ ಪರ್ಯಾಯ ಜಾಗವನ್ನು ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

ಶಾಲೆ ಗೇಟ್‌ಗೆ ಬೀಗ ಹಾಕಲಾಗಿರುವುದು. ಜತೆಗೆ ಮುಳ್ಳಿನ ಗಿಡವನ್ನು ಅಡ್ಡಲಾಗಿ ಹಾಕಿರುವುದು

ಸಾರ್ವಜನಿಕ ಸಮಸ್ಯೆಯಾಗಿ ಬದಲಾಯ್ತು!

24 ವರ್ಷದ ಹಿಂದೆ ಸರ್ಕಾರಿ ಶಾಲೆ ಕಟ್ಟಿಕೊಂಡು ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಲಿ ಎಂಬ ಸದುದ್ದೇಶದಿಂದ ತನ್ನ ಹೆಸರಿನಲ್ಲಿದ್ದ 14 ಗುಂಟೆ ಜಮೀನನ್ನು ಮಾಲೀಕರೊಬ್ಬರು ಬಿಟ್ಟುಕೊಟ್ಟಿದ್ದರು. ಇದರ ಬದಲಾಗಿ ಅವರಿಗೆ ಅರ್ಧ ಗುಂಟೆ ಜಾಗವನ್ನು ಕೊಡಲಾಗಿತ್ತು. ಆದರೆ, ಈಗ ಆ ಜಾಗದ ಸಮಸ್ಯೆಯು ಸಾರ್ವಜನಿಕರ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಶಾಲಾ ಮೈದಾನದಲ್ಲಿಯೇ ದನಕರುಗಳನ್ನು ಕಟ್ಟಿಹಾಕಲಾಗಿದೆ.

ಶಾಲೆಗೆ ಜಾಗವನ್ನು ನೀಡಿದ್ದ ಕುಟುಂಬಸ್ಥರಿಗೆ ಪರ್ಯಾಯವಾಗಿ ವಾಸಿಸಲು ಶಾಲೆ ಹಿಂಭಾಗದಲ್ಲಿ ಅರ್ಧ ಗುಂಟೆ ಜಾಗದ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಆದರೆ, ಅದು ಖಾಸಗಿ‌ ಮಾಲೀಕರ ಜಾಗವಾಗಿದೆ ಎಂಬುದು ಈಗ ಗೊತ್ತಾಗಿದೆ. ಆ ಜಾಗದ ಮಾಲೀಕರು ಈಗ “ಇದು ತಮ್ಮ ಜಾಗ, ನೀವು ಇಲ್ಲಿಂದ ಖಾಲಿ ಮಾಡಿ” ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇದರಿಂದ ಲಕ್ಷ್ಮವ್ವ ತಳವಾರ ಕುಟುಂಬಸ್ಥರಿಗೆ ದಿಕ್ಕು ತೋಚದಂತೆ ಆಗಿದೆ.

ಶಾಲೆಯ ಆವರಣದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು

ಸಾರ್ವಜನಿಕ ಉಪಯೋಗಕ್ಕಾಗಿ ತಮ್ಮ ಜಾಗವನ್ನು ತಾವು ಬಿಟ್ಟುಕೊಟ್ಟಿದ್ದೇವೆ. ಆದರೆ, ನಮಗೆ ಕೊಟ್ಟ ಜಾಗವನ್ನು ನಮಗೆ ಖಾತೆಯನ್ನಾಗಿ ಮಾಡಿಕೊಡಲೂ ಇಲ್ಲ. ಈಗ ಆ ಜಾಗದ ಮಾಲೀಕರು ತಮ್ಮ ಜಾಗವನ್ನು ಬಿಟ್ಟು ಕೊಡಿ ಎಂದು ನಮ್ಮ ಬೆನ್ನು ಬಿದ್ದಿದ್ದಾರೆ. ನಾವೀಗ ಎಲ್ಲಿಗೆ ಹೋಗಬೇಕು? ನಾವು ಬಡವರು, ಕಷ್ಟಪಟ್ಟು ದುಡಿದು ಜೀವನ ಸಾಗಿಸುವವರು. ನಮಗೆ ಈಗ ನೆಲೆಯೇ ಇಲ್ಲವಾದರೆ ಹೇಗೆ? ಎಂದು ಸಂಕಷ್ಟದಲ್ಲಿರುವ ಲಕ್ಷ್ಮವ್ವ ತಳವಾರ ಕುಟುಂಬದವರು ಪ್ರಶ್ನೆ ಮಾಡುತ್ತಿದ್ದಾರೆ.

ಶಾಲೆಗೆ ಜಾಗ ನೀಡಿದ್ದ ಕುಟುಂಬದವರು

ಖಾತೆ ಬದಲಾವಣೆಯೂ ಆಗಿಲ್ಲ

ಇಲ್ಲಿ ಇನ್ನೊಂದು ಪ್ರಮಾದದ ಸಂಗತಿ ಎಂದರೆ ಲಕ್ಷ್ಮವ್ವ ತಳವಾರ ಕುಟುಂಬದವರು ಈ ಜಾಗವನ್ನು ಬಿಟ್ಟು ಕೊಟ್ಟು ಸರ್ಕಾರ ಸೂಚಿಸಿದ ಜಾಗಕ್ಕೆ ಹೋದರು. ಅವರು ಬಿಟ್ಟುಕೊಟ್ಟ ಜಾಗದಲ್ಲಿ ಸರ್ಕಾರಿ ಶಾಲೆ ನಿರ್ಮಾಣವೂ ಆಯಿತು, ಪಾಠವೂ ಶುರುವಾಯಿತು. ಆ ಕುಟುಂಬದವರೂ ತಮಗೆ ಸೂಚಿಸಿದ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಈ ಮಧ್ಯೆ ಶಿಕ್ಷಣ ಇಲಾಖೆಯಿಂದ ಸಹ ಖಾತೆ ಬದಲಾವಣೆಗೆ ಮುಂದಾಗಿಲ್ಲ. ಆ ಕುಟುಂಬದವರಿಗೆ ನೀಡಿದ ಜಾಗದ ಖಾತೆ ಮಾಡಿಸುವುದನ್ನೂ ಮರೆತುಬಿಟ್ಟಿದ್ದರು. ಈಗ ಇವರು ಮನೆ ಕಟ್ಟಿಕೊಂಡಿರುವ ಜಾಗದ ಮಾಲೀಕ ತನ್ನ ಹಕ್ಕಿನ ಜಾಗವನ್ನು ಕೇಳಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ.

ಮರದ ನೆರಳಿನಲ್ಲಿ ಕುಳಿತಿರುವ ಮುಂಡರಗಿ ಸರ್ಕಾರಿ ಶಾಲೆ ಮಕ್ಕಳು

ನಮಗೆ ಶಾಲೆಯ ಜಾಗವನ್ನು ಬಿಟ್ಟುಕೊಡಿ

ತಮಗೆ ಜಾಗ ಇಲ್ಲದೇ ಹೇಗೆ ಜೀವನ ಸಾಗಿಸುವುದು? ಹೀಗಾಗಿ ಶಾಲೆಗೆ ನೀಡಿದ್ದ ಜಾಗವನ್ನು ಮರಳಿ ನಮಗೆ ಬಿಟ್ಟುಕೊಡಿ. ಇಲ್ಲವಾದಲ್ಲಿ ನಮಗೆ ಬೇರೆ ಕಡೆ ಜಾಗ ನೀಡಿ‌ ನಮ್ಮ ಹೆಸರಿಗೆ ಮಾಡಿ ಎಂದು ತಳವಾರ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ತಹಸೀಲ್ದಾರ್‌ವರೆಗೂ ಮನವಿಯನ್ನು ನೀಡಲಾಗಿತ್ತು. ತಹಸೀಲ್ದಾರ್‌ ಸಹ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಕರೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಐದು ದಿನಗಳೊಳಗೆ ಮಾಡುತ್ತೇವೆಂದವರು ಏನೂ ಕ್ರಮ ಕೈಗೊಳ್ಳದೇ ಇದ್ದ ಕಾರಣ, ಲಕ್ಷ್ಮವ್ವ ತಳವಾರ ಕುಟುಂಬದವರು ಶಾಲೆಗೆ ಬೀಗ ಹಾಕಿದ್ದಾರೆ. ಶಾಲಾ ಆವರಣದಲ್ಲಿ ದನ ಕರುಗಳನ್ನು ಕಟ್ಟಿದ್ದಾರೆ. ತಮಗೆ ಪರ್ಯಾಯ ಜಾಗವನ್ನು ಕಲ್ಪಿಸುವವರೆಗೂ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ದನದ ಕೊಟ್ಟಿಗೆಯಂತೆ ಆಗಿರುವ ಮುಂಡರಗಿ ಸರ್ಕಾರಿ ಶಾಲೆ

ಇದನ್ನೂ ಓದಿ: Tungabhadra Dam: ಬರಿದಾದಳೇ ತುಂಗಭದ್ರೆ? 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲೀಗ 5 ಟಿಎಂಸಿ ನೀರೂ ಇಲ್ಲ!

ಇನ್ನಾದರೂ ಅಧಿಕಾರಿಗಳು ತುರ್ತು ಕ್ರಮವನ್ನು ಕೈಗೊಳ್ಳುವ ಮೂಲಕ ಮಕ್ಕಳು ಬಿಸಿಲಿನಲ್ಲಿ ಪಾಠ ಕೇಳುವುದನ್ನು ತಪ್ಪಿಸುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

Exit mobile version