ಹಾವೇರಿ: ಪಂಚಮಸಾಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿಯ ಮನೆಗೆ ಮುತ್ತಿಗೆ ಹಾಕಲು ಹೊರಟವರು ಕೊನೆ ಕ್ಷಣದಲ್ಲಿ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರ ಸರ್ಪಗಾವಲನ್ನು ಭೇದಿಸಿ ಹೆದ್ದಾರಿಗೆ ನುಗ್ಗಿದ ಪ್ರತಿಭಟಕಾರರು ಸಿಎಂ ಪ್ರತಿಕೃತಿಯನ್ನು ಸುಟ್ಟುಹಾಕಿದರು. ರಾಜ್ಯ ಸರಕಾರದ ವಿರುದ್ಧ ಸಿಡಿದೆದ್ದಿರುವ ಪಂಚಮಸಾಲಿ ಮೀಸಲು ಹೋರಾಟಗಾರರು ಪ್ರತಿಭಟನೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದು, ಶನಿವಾರದಿಂದ ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದರು.
ಪಂಚಮಸಾಲಿಗಳಿಗೆ ೨ಎ ಪ್ರವರ್ಗದಡಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ವರ್ಷದಿಂದಲೇ ಹೋರಾಟ ನಡೆಯುತ್ತಿದೆ. ಒಂದು ಹಂತದಲ್ಲಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪ್ರತಿಭಟನೆ ನಡೆದು ಸರ್ಕಾರ ನೀಡಿದ ಭರವಸೆಯನ್ನು ನಂಬಿ ಮರಳಿ ಹೋಗಿದ್ದರು. ಆದರೆ, ಮೀಸಲಾತಿ ಘೋಷಣೆಯಾಗದ ಹಿನ್ನೆಲೆಯಲ್ಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಹೋರಾಟ ಆರಂಭಗೊಂಡಿತ್ತು. ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನರ್ ಅವರು ಸಾಥ್ ನೀಡುತ್ತಿದ್ದಾರೆ.
ಕಳೆದ ಡಿಸೆಂಬರ್ ೨೯ರಂದು ಈ ಹೋರಾಟ ಒಂದು ನಿರ್ಣಾಯಕ ತಿರುವನ್ನು ಪಡೆಯುವ ಹಂತ ತಲುಪಿತ್ತು. ಅಂದು ಮೀಸಲಾತಿ ಘೋಷಿಸದೆ ಇದ್ದರೆ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೋರಾಟಗಾರರು ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಅದೇನೆಂದರೆ, ಪಂಚಮಸಾಲಿಗಳನ್ನು ಪ್ರವರ್ಗ ೨ಡಿ ಎಂದು, ಒಕ್ಕಲಿಗರನ್ನು ಪ್ರವರ್ಗ ೨ಸಿ ಎಂದು ಗುರುತಿಸಿ ಅವರಿಗೆ ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೆಂದು ನಿಗದಿಪಡಿಸಿದ್ದ ಇಡಬ್ಲ್ಯುಎಸ್ ಮೀಸಲಾತಿಯಲ್ಲಿ ಪಾಲು ನೀಡಲು ಮುಂದಾಗಿತ್ತು. ಆದರೆ, ಪಂಚಮಸಾಲಿಗಳ ರಾಜ್ಯ ಕಾರ್ಯಕಾರಿಣಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
ತಮಗೆ ೨ಡಿ ಮೀಸಲಾತಿ ಬೇಡ, ಇಡಬ್ಲ್ಯುಎಸ್‌ನಲ್ಲಿ ಪಾಲೂ ಬೇಡ, ನಮಗೆ ೨ಎ ಪ್ರವರ್ಗದಡಿಯಲ್ಲೇ ಮೀಸಲಾತಿ ಕೊಡಿ ಎಂಬ ಬೇಡಿಕೆಯನ್ನು ಮಂಡಿಸಿದೆ. ಮೀಸಲಾತಿ ಸಂಬಂಧಿಸಿದ ಗೆಜೆಟ್ ನೋಟಿಫಿಕೇಶನನ್ನು ಜನವರಿ ೧೨ರೊಳಗೆ ಬಿಡುಗಡೆ ಮಾಡಬೇಕು. ಇಲ್ಲವಾದರೆ ಜನವರಿ ೧೩ರಂದು ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಲಾಗಿತ್ತು.
ಸರ್ಕಾರ ಗೆಜೆಟ್ ನೋಟಿಫಿಕೇಶನ್ ಪ್ರಕಟಿಸದೆ ಇದ್ದುದರಿಂದ ಜನವರಿ ೧೩ರಂದು (ಶುಕ್ರವಾರ) ಸಿಎಂ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು. 2ಎ ಮೀಸಲಾತಿ ನೀಡಲೇಬೇಕೆಂದು ಪಟ್ಟು ಹಿಡಿದಿರುವ ಜಯಮೃತ್ಯುಂಜಯ ಶ್ರೀಗಳು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಈಗಾಗಲೇ ಸರ್ಕಾರ 2 ಡಿ ಮೀಸಲಾತಿ ನೀಡಲು ನಿರ್ಧಾರ ಮಾಡಿದೆ. ಆದರೆ ಈ ಮೀಸಲಾತಿ ಬೇಡ ಎಂದು ತಿರಸ್ಕಾರ ಮಾಡಲಾಗಿದೆ. ನಮಗೆ 2 ಎ ಮೀಸಲಾತಿ ನೀಡಬೇಕೆಂದು ಪಂಚಮಸಾಲಿ ಸಮಾಜ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಧರಣಿ ನಡೆಸಲು ಮುಂದಾಗಿತ್ತು. ಆದರೆ, ಧರಣಿ ಮಾಡದೆ ಹೆದ್ದಾರಿ ತಡೆ ನಡೆಸಲು ಕೊನೆ ಕ್ಷಣದಲ್ಲಿ ನಿರ್ಧಾರ ಮಾಡಿದರು. ಶಿಗ್ಗಾಂವಿಯ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಬಳಿಕ ಅದೇ ವೃತ್ತದಿಂದ ಹೆದ್ದಾರಿ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪಂಚಮ ಸಾಲಿ ಸಮಾಜದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಸಿಎಂ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಪ್ರತಿಕೃತಿ ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಸ್ವಾಮೀಜಿ ಹಾಗೂ ಶಾಸಕ ಯತ್ನಾಳ್ ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದ ವಾಹನಗಳನ್ನ ಲೆಕ್ಕಿಸದೆ ಬ್ಯಾರಿಕೇಡ್ ಕಿತ್ತೆಸೆದು ಸ್ವಾಮಿಜಿ ಹೆದ್ದಾರಿ ತಲುಪಿದರು. ಹೆದ್ದಾರಿ ಯಲ್ಲೆ ಅರ್ಧ ಗಂಟೆಗಳ ಕಾಲ ಕುಳಿತು ಧರಣಿ ಮಾಡಿದರು.
ನಾವು ಬೆಂಗಳೂರು ವರೆಗೂ ನಾವು ಪಾದಯಾತ್ರೆ ಕೈಗೊಂಡು ಪ್ರತಿಭಟನೆ ಮಾಡಿದ್ದೇವೆ. ಸರ್ಕಾರ 2ಎ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿ ಎಂದು ಇದೀಗ 2 ಡಿ ಮೀಸಲಾತಿ ನೀಡುವುದಾಗಿ ಹೇಳಿ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಪಂಚಮಸಾಲಿ ಸಾಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಹಿರಂಗ ಸಮಾವೇಶದಿಂದ ಹೆದ್ದಾರಿ ಬಂದ್ ಮಾಡಲು ಸಾವಿರಾರು ಜನರು ಜಮಾವಣೆಗೊಂಡು ಕೆಲಕಾಲ ರಸ್ತೆ ತಡೆದು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಮಂದಿ ಧರಣಿ ನಡೆಸಲು ಆಗಮಿಸಿದ್ದರು. ಸಮಾಜದ ಶಾಸಕರು ಮಾಜಿ ಶಾಸಕರು ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದು ಸರ್ಕಾರ ಕೂಡಲೇ 2 ಎ ಮೀಸಲಾತಿ ನೀಡಬೇಕು ಇಲ್ಲವಾದರೆ ಹೋರಾಟ ಮುಂದುವರೆಯುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪಂಚಮಸಾಲಿ ಹೋರಾಟ ಬೆಂಗಳೂರಿನ ಪ್ರೀಡಂ ಪಾರ್ಕ್‌ಗೆ ಸ್ಥಳಾಂತರ ಮಾಡಲಾಗಿದ್ದು ಶನಿವಾರದಿಂದ ಮತ್ತೆ ಪಂಚಮಸಾಲಿ ಹೋರಾಟ ಮುಂದುವರಿಯಲಿದೆ.
ಇದನ್ನೂ ಓದಿ | Panchamasali Reservation | ಪಂಚಮಸಾಲಿ ಮೀಸಲಾತಿಗೆ ಹೈಕೋರ್ಟ್ ಬ್ರೇಕ್: ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ