ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮ ಗೌಡ ಮತ್ತು ತುಳಸಿ ಗೌಡರಿಗೆ ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಮಂದಿರ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Ram Mandir) ಆಹ್ವಾನ ನೀಡಲಾಗಿದೆ.
ಜಾನಪದ ಕೋಗಿಲೆ ಖ್ಯಾತಿಯ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಅವರಿಗೆ ಅಂಕೋಲಾದ ಬಡಗೇರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ಕಾಮತ್ ಅವರು ರಾಮಮಂದಿರದ ಪ್ರಾಣಪ್ರತಿಷ್ಠಾಕ ಕಾರ್ಯಕ್ರಮದ ಆಮಂತ್ರಣ ನೀಡಿದ್ದಾರೆ.
ರಾಮಜನ್ಮಭೂಮಿಗೆ ತೆರಳಲು ಆಮಂತ್ರಣ ತಲುಪಿದ್ದಕ್ಕೆ ಸುಕ್ರಿ ಬೊಮ್ಮ ಗೌಡ ಮತ್ತು ತುಳಸಿ ಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಾಲಕ್ಕಿ ಸಮುದಾಯದ ಸುಕ್ರಿ ಬೊಮ್ಮಗೌಡ ಅವರು ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಸುಮಾರು 5000ಕ್ಕೂ ಹೆಚ್ಚು ಹಾಲಕ್ಕಿ ಹಾಡುಗಳನ್ನು ಹಾಡಿದ್ದಾರೆ. ಸುಕ್ರಜ್ಜಿ ಅವರ ಹಾಡುಗಳು ಪುಸ್ತಕ ರೂಪ ಪಡೆದಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಈ ಕಾರ್ಯದಲ್ಲಿ ಕೈಜೋಡಿಸಿತ್ತು. ಹಾಡು ಹೇಳುವುದು ಮಾತ್ರವಲ್ಲ, ಕುಡಿತದ ವಿರುದ್ಧ ಆಂದೋಲನ ಕೈಗೊಂಡ ಖ್ಯಾತಿಯ ಇವರದ್ದು. ಪರಿಸರ ಕಾಳಜಿಯೂ ಇರುವ ಇವರು ಪರಿಸರ ಉಳಿಸಲು ಕಾರ್ಯದಲ್ಲೂ ತೊಡಗಿದ್ದಾರೆ. ಇವರು 2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಇದನ್ನೂ ಓದಿ | Ram Mandir : ಮುಕ್ಕಾಲು ಇಂಚಿನ ಚಾಕ್‌ಪೀಸ್‌ನಲ್ಲಿ ಅರಳಿದ ಅಯೋಧ್ಯಾ ಬಾಲರಾಮ
ಇನ್ನು ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತರಾಗಿದ್ದಾರೆ. ಹಾಲಕ್ಕಿ ಸಮುದಾಯದ ಇವರು, ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಪರಿಸರವಾದಿ ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ. ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ 2020ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.