ಚಾಮರಾಜನಗರ: ಮಹದೇಶ್ವರಬೆಟ್ಟ ಗಡಿ ಭಾಗದಲ್ಲಿನ ಪಾಲಾರ್ ಬಳಿ 1993ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ (Bomb Blast) ಪ್ರಕರಣದ ಪ್ರಮುಖ ಆರೋಪಿ ಹಾಗೂ ನರಹಂತಕ ವೀರಪ್ಪನ್ ಸಹಚರನೊಬ್ಬ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ ಮಾನವೀಯತೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಜ್ಞಾನಪ್ರಕಾಶ್ (೬೮) ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈತ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಏನಿದು ಪ್ರಕರಣ?
ಪಾಲಾರ್ ಬಳಿಯ ಸೋರೆಕಾಯಿ ಮಡುವು ಎಂಬಲ್ಲಿ ನರಹಂತಕ ವೀರಪ್ಪನ್ ಮತ್ತು ಸಹಚರರು ಬಾಂಬ್ ಸ್ಫೋಟಿಸಿದ್ದರು. ಈ ವೇಳೆ ಬಾತ್ಮೀದಾರರು ಸೇರಿದಂತೆ 22 ಮಂದಿ ಪೊಲೀಸರು ಹತರಾಗಿದ್ದರು. ಬಳಿಕ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ವೀರಪ್ಪನ್ ಸಹಚರರಾದ ಬಿಲವೇಂದ್ರನ್, ಸೈಮನ್, ಜ್ಞಾನಪ್ರಕಾಶ್, ಮೀಸೆಕಾರ ಮಾದಯ್ಯ ಎಂಬುವವರನ್ನು ಬಂಧಿಸಿದ್ದರು. ಬಳಿಕ ಚಾರ್ಜ್‌ಶೀಟ್ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೈಸೂರಿನ ಟಾಡಾ ಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆದು ೧೯೯೭ರಲ್ಲಿ ತೀರ್ಪು ಪ್ರಕಟಿಸಲಾಗಿತ್ತು. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅಪರಾಧಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಗಲ್ಲುಶಿಕ್ಷೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು.
ಒಬ್ಬ ಅಪರಾಧಿ ಸಾವು
ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಸೈಮನ್ ೨೦೧೮ರ ಏಪ್ರಿಲ್‌ನಲ್ಲಿ ಕಾರಾಗೃಹದಲ್ಲಿ ಮೃತಪಟ್ಟಿದ್ದ. ಈತನನ್ನು ಮೈಸೂರಿನ ಜೈಲಿನಲ್ಲಿ ಬಂಧಿಯಾಗಿಡಲಾಗಿತ್ತು. ಆದರೆ, ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಈತನನ್ನು ಕರೆತರಲಾಗಿತ್ತು. ಆಗಲೂ ಅನಾರೋಗ್ಯ ಉಲ್ಬಣಿಸಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ಈತನನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಈತ ೨೩ ವರ್ಷಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದ. ಕೊನೆಗೆ ಜೈಲಿನಲ್ಲಿಯೇ ಅಸುನೀಗುವಂತಾಗಿತ್ತು.
ವೀರಪ್ಪನ್ ಪತ್ನಿ ಆರೋಪ ಮುಕ್ತ
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿದ್ದ ವೀರಪ್ಪನ್ ಪತ್ನಿ ಸೇರಿ ಮತ್ತೆ ಏಳು ಮಂದಿಯನ್ನು ೨೦೧೧ರಲ್ಲಿ ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿತ್ತು. ಸವರಿಯಪ್ಪನ್, ಪಾಪತ್ತಿ, ಬೋಂಡ ಬಸವ, ವೀರಣ್ಣ, ಕೊಳತ್ತೂರು ಮಣಿ ಮತ್ತು ಸುಬ್ರಮಣಿ ಎಂಬುವವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಸಭಾಪತಿಯಾಗಲು ಬಸವರಾಜ ಹೊರಟ್ಟಿ ನಾಮಪತ್ರ: ಯಡಿಯೂರಪ್ಪಗೆ ಮಾತು ಉಳಿಸಿಕೊಂಡ ಗರಿ