Site icon Vistara News

Palestine Flag: ಕುಣಿಗಲ್‌ನಲ್ಲಿ ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನ!

ತುಮಕೂರು: ಸ್ವಾತಂತ್ರ್ಯ ದಿನಾಚರಣೆ (Independence Day 2024) ಹಿನ್ನೆಲೆಯಲ್ಲಿ ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಕುಣಿಗಲ್‌ನಲ್ಲಿ ಕೆಲ ಯುವಕರು ಪ್ಯಾಲಿಸ್ತೀನ್ ಬಾವುಟ (Palestine Flag) ಹಾರಿಸಲು ಯತ್ನಿಸಿರುವುದು ಕಂಡುಬಂದಿದೆ. ಇದಕ್ಕೆ ಸ್ಥಳೀಯ ಯುವಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಣಿಗಲ್ ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮತ್ತೊಂದು ಕಡೆ ಕೆಲ ಯುವಕರ ಗುಂಪು ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನಿಸಿದೆ. ಅದಕ್ಕೆ ಮತ್ತೊಂದು ಯುವಕರ ತಂಡ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಇವತ್ತು ಪ್ಯಾಲೇಸ್ತೀನ್‌ ಧ್ವಜ ಹಾರಿಸುತ್ತಾರೆ, ನಾಳೆ ಪಾಕಿಸ್ತಾನ ಧ್ವಜ ಹಾರಿಸುತ್ತಾರೆ. ಹಾರಿಸುವುದರೆ ಭಾರತ ಧ್ವಜ ಹಾರಿಸಿ, ಇಲ್ಲದಿದ್ದರೆ ವಿವಾದವಾಗಲಿದೆ ಎಂದು ಯುವಕರಿಗೆ ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ | Independence Day 2024: ಹೊಸ ದಾಖಲೆ ಸೃಷ್ಟಿಸಿದೆ ಕೆಂಪುಕೋಟೆಯಲ್ಲಿನ ಮೋದಿ ಭಾಷಣದ ಅವಧಿ!

ಮಸ್ಕಿ ಶಾಲೆಯಲ್ಲಿ ಎಡವಟ್ಟು; ಧ್ವಜ ಉಲ್ಟಾ ಹಾರಿಸಿ ಅಪಮಾನ

independence day 2024

ರಾಯಚೂರು: ತಲೆಕೆಳಗಾಗಿ ಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಮಸ್ಕಿ ಪಟ್ಟಣದ ದನಗರವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಾಡಿದ್ದಕ್ಕೆ ಶಾಲಾ ಮುಖ್ಯಶಿಕ್ಷಕಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿವಾಸಿಗಳು ಪ್ರಶ್ನಿಸುತ್ತಿದ್ದಂತೆಯೇ ಸರಿಪಡಿಸಿ ಮತ್ತೊಮ್ಮೆ ಧ್ವಜಾರೋಹಣ ಮಾಡಲಾಗಿದೆ.

ಚಿಕ್ಕಬಳ್ಳಾಪುರ, ರಾಯಚೂರಿನಲ್ಲಿ ಧ್ವಜಾರೋಹಣ ವೇಳೆ ಕುಸಿದು ಬಿದ್ದ ಮಕ್ಕಳು, ಪೊಲೀಸರು

independence day 2024

ಚಿಕ್ಕಬಳ್ಳಾಪುರ/ರಾಯಚೂರು: 78ರ ಸ್ವಾತಂತ್ರ್ಯೋತ್ಸವ (Independence Day 2024) ದಿನದ ಧ್ವಜಾರೋಹಣದ ವೇಳೆ ವಿಪರೀತ ಬಿಸಿಲಿನ ತಾಪಕ್ಕೆ ಮಕ್ಕಳು, ಪೊಲೀಸರು ನಿತ್ರಾಣವಾಗಿ ಕುಸಿದು ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಸರ್‌. ಎಂ. ವಿ ಕ್ರೀಡಾಂಗಣದಲ್ಲಿ ಸಚಿವ ಡಾ ಎಂ ಸಿ ಸುಧಾಕರ್ ಭಾಷಣದ ವೇಳೆ ಪೊಲೀಸರು ಮತ್ತು ಮಕ್ಕಳು (Independence Day 2024) ಕುಸಿದು ಬಿದ್ದಿದ್ದಾರೆ.

ಸಚಿವ ಡಾ ಎಂ ಸಿ ಸುಧಾಕರ್ ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡುತ್ತಿದ್ದರು. ಈ ವೇಳೆ ತುಂಬ ಹೊತ್ತು ಬಿಸಿಲಿನಲ್ಲೇ ನಿಂತಿದ್ದ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಮಕ್ಕಳನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದ ಪಿಎಸ್ಐ ನಾಗಮ್ಮ ಅವರು ವಿಪರೀತ ಬಿಸಿಲಿನ ತಾಪಕ್ಕೆ ನಿತ್ರಾಣವಾಗಿ ಬಿದ್ದರು. ಸ್ಟೇಡಿಯಂನಲ್ಲಿ ನಿಂತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಓಡಿಹೋಗಿ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಯಚೂರಿನಲ್ಲೂ ಕುಸಿದು ಬಿದ್ದ ಮಕ್ಕಳು

ರಾಯಚೂರಿನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಕಾರ್ಯಕ್ರಮದ ವೇಳೆ ಬಿಸಿಲಿನ ತಾಪಕ್ಕೆ ಮಕ್ಕಳಿಬ್ಬರು ಕುಸಿದು ಬಿದ್ದಿದ್ದರು. ಕೂಡಲೇ ಇಬ್ಬರು ಮಕ್ಕಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು. ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ ನಡೆದಿದೆ.

ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಸಮ್ಮುಖದಲ್ಲಿ ಶಾಲಾ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವಾಗ ಬಿಸಿಲಿನ ತಾಪಕ್ಕೆ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: Bike Wheeling: ಸ್ವಾತಂತ್ರ್ಯ ದಿನಾಚರಣೆ ಹೆಸರಲ್ಲಿ ಹೈವೇಯಲ್ಲಿ ಡೆಡ್ಲಿ ವ್ಹೀಲಿಂಗ್‌!

ವಿಜಯಪುರದಲ್ಲಿ ಧ್ವಜಾರೋಹಣ ವೇಳೆ ಹೊಡೆದಾಟ

ಧ್ವಜಾರೋಹಣ ವೇಳೆ ಹುಡುಗರ ನಡುವೆ ಗಲಾಟೆ ನಡೆದಿದೆ. ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಂ ಬಿ ಪಾಟೀಲ್ ಭಾಷಣ ವೇಳೆ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಧ್ವಜಾರೋಹಣ ನೋಡಲು ಬಂದಿದ್ದ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಹೊಡೆದಾಡಿಕೊಳ್ಳುತ್ತಿದ್ದ, ಓರ್ವನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version