ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೇಲ್ವರ್ಗದ ಬಡವರ ಮೀಸಲನ್ನು ಬಳಸಿಕೊಂಡು, ಹೊಸ ಪ್ರವರ್ಗ ೨ಡಿ ಅಡಿಯಲ್ಲಿ ಮೀಸಲು ಕಲ್ಪಿಸುವ ರಾಜ್ಯ ಸರಕಾರದ ಪ್ರಸ್ತಾವನೆಯನ್ನು (Panchamasali Reservation) ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿ ತಿರಸ್ಕರಿಸಿದೆ. ಸಮುದಾಯ ಬೇಡಿಕೆ ಇಟ್ಟಂತೆ ಪ್ರವರ್ಗ ೨ಎ ಅಡಿಯಲ್ಲೇ ಮೀಸಲು ನೀಡಬೇಕು ಮತ್ತು ಅದನ್ನು ಜನವರಿ ೧೨ರೊಳಗೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ, ಜನವರಿ ೧೩ರಿಂದಲೇ ಮತ್ತೊಂದು ಉಗ್ರ ಹೋರಾಟ ನಡೆಸಲಾಗುವುದು- ಇದು ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ಕೂಡಲ ಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೊಮ್ಮಾಯಿ ಸರಕಾರ ಎಚ್ಚರಿಕೆ ಸಂದೇಶ ರವಾನಿಸಿದರು.
ʻʻಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ನೀಡಿದ ಮೀಸಲಾತಿ ನ್ಯಾಯವಾಗಿದೆಯಾ ವಿಮರ್ಶೆ ನಡೆದಿದೆ. ಎಲ್ಲವನ್ನೂ ಗಮನಿಸಿದ ಬಳಿಕ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯ ಕಾರ್ಯಕಾರಿಣಿ ಸಭೆ ತಿರಸ್ಕಾರ ಮಾಡಿದೆʼʼ ಎಂದು ಹೇಳಿದರು.
ʻʻನಾವು ಕೇಳಿದ್ದು 2ಎ ಅಡಿ ಮೀಸಲಾತಿ ಬೇಕು ಅಂತ. ನೀವು ಹೊಸ ಪ್ರವರ್ಗ ಮಾಡಿ ಮೀಸಲಾತಿ ಕೊಡುತ್ತೇವೆ ಅಂತಿದ್ದೀರಿ. ಇದು ನಮಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ೨ಎಗೆ ಸರಿ ಸಮಾನವಾದ ಮೀಸಲಾತಿ ನೀಡುತ್ತದೆಯೇ ಎನ್ನುವ ಬಗ್ಗೆ ಗೊಂದಲ ಇರೋ ಕಾರಣ ಸಂಪುಟ ಸಭೆ ನಿರ್ಣಯ ವನ್ನು ತಿರಸ್ಕಾರ ಮಾಡುತ್ತಿದ್ದೇವೆʼʼ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ʻʻಮುಖ್ಯಮಂತ್ರಿಗಳು ಮಾತು ತಪ್ಪಿದ್ದಾರೆ ಎಂದು ಇಡೀ ಸಮಾಜದಲ್ಲಿ ಆಕ್ರೋಶ ಕಾಡುತ್ತಿದೆ. ಸಿಎಂ ಬೊಮ್ಮಾಯಿ ಮಾತಿಗೆ ಗೌರವ ಕೊಟ್ಟು ಹೋರಾಟ ತಾತ್ಕಾಲಿಕ ಸ್ಥಗಿತ ಮಾಡಿದ್ದೆವು. ಆದರೆ, ಈಗ ನಮಗೆ ಮೋಸವಾಗುತ್ತಿದೆ ಎಂಬ ಭಾವನೆ ಕಾಡುತ್ತಿದೆ. ಹೀಗಾಗಿ ಸರಕಾರಕ್ಕೆ ಸ್ಪಷ್ಟ ಸಂದೇಶ ನೀಡುತ್ತಿದ್ದೇವೆ. 24 ಗಂಟೆಯಲ್ಲಿ ಮೀಸಲಾತಿ ನೀಡುತ್ತೀರೋ ಇಲ್ಲವೋ ಎಂದು ಹೇಳಬೇಕು. ಜನವರಿ 12ರೊಳಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಇಲ್ಲವಾದ್ರೆ ಜ.13ರಂದು ಸಿಎಂ ಕ್ಷೇತ್ರ ಶಿಗ್ಗಾಂವಿಯಲ್ಲೇ ಉಗ್ರ ಹೋರಾಟ ಆರಂಭಿಸಲಾಗುತ್ತದೆʼʼ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ʻʻʻಮೀಸಲು ವಿಷಯದಲ್ಲಿ ನಮ್ಮ ಸಮುದಾಯದ ಜನ, ಆಡಳಿತ ಪಕ್ಷದ ಯಾವುದೇ ಶಾಸಕರು ಸಮಾಧಾನಗೊಂಡಿಲ್ಲʼʼ ಎಂದು ಹೇಳಿದ ಅವರು, ಜನಶಕ್ತಿ ವ್ಯರ್ಥ ಮಾಡಲು ಬಿಡಲು ಸಾಧ್ಯವಿಲ್ಲ. ಈ ಜನ ಶಕ್ತಿಯೇ 2023ರ ಚುನಾವಣೆಯಲ್ಲಿ ಗಂಭೀರವಾದ ಪರಿಣಾಮ ಉಂಟು ಮಾಡಲಿದೆ. ಪಂಚಮಸಾಲಿ ಸಂಘಟನೆ ಶಕ್ತಿ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆʼʼಎಂದು ಸ್ವಾಮೀಜಿ ಎಚ್ಚರಿಸಿದರು.
ಲಿಂಗಾಯತ ಧರ್ಮಕ್ಕೆ ಅವಮಾನ
ʻʻನಾವು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೆವು. ಆಗ ಸಿಎಂ ಬೊಮ್ಮಾಯಿ ಬಹಳ ಭರವಸೆ ಮಾತು ಆಡಿದ್ರು. ತೀರ್ಮಾನ ಮಾಡ್ತೀವಿ ಅಂತಾ 2ಡಿ ಅಂತಾ ಅಡ್ಡ ಗೋಡೆ ಮೇಲೆ ದೀಪ ಇಟ್ರುʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು ವಿಜಯಾನಂದ ಕಾಶಪ್ಪನವರ್.
ʻʻಸಿಎಂ ಬೊಮ್ಮಾಯಿ ಅವರು ಪದೇಪದೆ ಮನೆಗೆ ಕರೆಸೋದು ಸುಳ್ಳು ಹೇಳೋದು ಮಾಡಿದ್ದರು. ತಾಯಿ ಮೇಲೆ ಆಣೆ ಮಾಡಿಯೂ ಸುಳ್ಳು ಹೇಳುವರು ಜಗತ್ತಿನಲ್ಲಿದ್ದಾರೆ. ಇದು ಲಿಂಗಾಯತ ಧರ್ಮಕ್ಕೆ ಅವಮಾನ. ಅದೂ ಬೊಮ್ಮಾಯಿ ಸಹ ಲಿಂಗಾಯತರು, ಬಸವಣ್ಣನವರ ಹೆಸರನ್ನೇ ಇಟ್ಟುಕೊಂಡಿದ್ದಾರೆʼʼ ಎಂದು ಕಾಶಪ್ಪನವರ್.
ʻʻಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯಲ್ಲ. ನಾನು ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೋರಾಟ ಮುಂದುವರಿಸುತ್ತೇವೆ. ಬೇರೆ ಬೇರೆ ಪಕ್ಷದಲ್ಲಿ ಇರಬಹುದು, ಸಮಾಜದ ವಿಷಯ ಬಂದಾಗ ಒಗ್ಗಟ್ಟಿನ ಹೋರಾಟ ಮಾಡುತ್ತೇವೆ. ನಮ್ಮ ಮಕ್ಕಳ ಕೈಗೆ ಮೀಸಲಾತಿ ಪ್ರಮಾಣ ಪತ್ರ ಸಿಗೋವರೆಗೂ ಹೋರಾಟ ಮಾಡುತ್ತೇವೆ. 2ಡಿ ಪ್ರವರ್ಗ ಮಾಡಿದರೂ 2ಎನಲ್ಲಿದ್ದ ಎಲ್ಲ ಅವಕಾಶಗಳು ಸಿಗಬೇಕುʼʼ ಎಂದು ಆಗ್ರಹಿಸಿದರು.
ʻʻಸಿಎಂ ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಂಡರೆ ಎಲ್ಲರಿಗೂ ಒಳ್ಳೆಯದು. ಇಲ್ಲದಿದ್ದರೆ ಅವರು ಸಮಾಜದ ಶಾಪಕ್ಕೆ ಈಡಾಗಲಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಹಿನ್ನಡೆ ಆಗೋದ್ರಲ್ಲಿ ಯಾವುದೇ ಸಂದೇಹ ಇಲ್ಲʼʼ ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ | Panchamasali Reservation | ಬೊಮ್ಮಾಯಿಗೆ 24 ಗಂಟೆ ಗಡುವು ನೀಡಿದ ಯತ್ನಾಳ್, ಆಗಲ್ಲಾಂದ್ರೆ ಕ್ಷಮೆನಾದ್ರೂ ಕೇಳಿ