Site icon Vistara News

Panchamasali Reservation : ಪಂಚಮಸಾಲಿ ಹೋರಾಟ ಅಂತ್ಯ? ಚರ್ಚಿಸಿ ನಾಳೆ ಹೇಳುತ್ತೇವೆ ಎಂದ ಬಸವ ಜಯಮೃತ್ಯುಂಜಯ ಶ್ರೀ

Campaign against BJP if reservation is not announced says Basava Jayamrityunjaya Swamiji Panchamasali Reservation updates Panchamasali Reservation

ಬೆಂಗಳೂರು: ರಾಜ್ಯ ಸರಕಾರವು ಪಂಚಮಸಾಲಿ ಮೀಸಲಾತಿಯನ್ನು ಐದರಿಂದ ಏಳು ಶೇಕಡಾಕ್ಕೆ ಸೇರಿಸಿದೆ. ಈ ಹಿಂದೆ ತೀರ್ಮಾನ ಮಾಡಿದಂತೆ ಪಂಚಮಸಾಲಿಗಳನ್ನು ಮೇಲ್ವರ್ಗದ ಬಡವರ ಇಡಬ್ಲ್ಯುಎಸ್‌ ಮೀಸಲಾತಿ ವಿಭಾಗಕ್ಕೆ ಸೇರಿಸದೆ ಮೂಲ ಪ್ರವರ್ಗದಲ್ಲೇ ಉಳಿಸಿ ಎರಡು ಶೇಕಡಾ ಮೀಸಲಾತಿ ಹೆಚ್ಚಿಸಿದೆ. ಇದರಿಂದ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಪಂಚಮಸಾಲಿ ಹೋರಾಟಕ್ಕೆ ತೆರೆ ಬೀಳಲಿದೆಯಾ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸ ಮೀಸಲಾತಿಯನ್ನು ಘೋಷಿಸುತ್ತಿದ್ದಂತೆಯೇ ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿದ್ದ ಜಯಮೃತ್ಯುಂಜಯ ಸ್ವಾಮೀಜಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇದರಲ್ಲಿ ಮೀಸಲಾತಿ ಪ್ರಮಾಣ ಏರಿಕೆ, ಅದರ ಸಾಧಕ ಬಾಧಕಗಳ ಅಧ್ಯಯನ ನಡೆಸಿ ಮಾರ್ಚ್‌ 25ರಂದು ಬೆಳಗ್ಗೆ 9 ಗಂಟೆಗೆ ತಿಳಿಸುವುದಾಗಿ ಪ್ರಕಟಿಸಿದರು.

ಫ್ರೀಡಂ ಪಾರ್ಕ್‌ನಲ್ಲಿ ಕಳೆದ 70 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸ್ವಾಮೀಜಿಯವರು ಅಲ್ಲಿಂದಲೇ ಮಾತನಾಡಿದರು.
ʻʻಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತ ಐತಿಹಾಸಿಕ ಹೋರಾಟ ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆ ಕಾಣಿಸುತ್ತಿದೆ. ನಾವು 2ಎ ಪ್ರವರ್ಗದಲ್ಲಿ ಶೇ. 15 ಮೀಸಲಾತಿ ಕೇಳಿದ್ದೆವು. ಆದರೆ, ಸಿಎಂ ಅವರು 2ಡಿಯಲ್ಲಿ ಶೇ. 7 ಮೀಸಲಾತಿ ನೀಡಿದ್ದಾರೆ.

ಸರ್ಕಾರ ಮೀಸಲಾತಿ ನೀಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಆದರೆ, ಸಿಎಂ ನಿರ್ಧಾರವನ್ನು ನಾವು ಯಾವ ರೀತಿ ಸ್ವೀಕರಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇವೆ. ಶನಿವಾರ ಬೆಳಗ್ಗೆ 9 ಗಂಟೆಗೆ ಪತ್ರಿಕಾಗೋಷ್ಠಿ ಮಾಡಿ ನಮ್ಮ ನಿಲುವು ತಿಳಿಸುತ್ತೇವೆ ಎಂದು ಹೇಳಿದರು.

ಶನಿವಾರ ಬೆಳಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್ ಮತ್ತು ವಿಜಯಾನಂದ ಕಾಶಪ್ಪನವರ್‌ ಅವರ ಜತೆ ಚರ್ಚಿಸಿ, ನಮ್ಮ ಕಾನೂನು ಸಮಿತಿಯ ಜತೆ ಸಮಾಲೋಚನೆ ನಡೆಸಿ ಮೀಸಲಾತಿ ಹೋರಾಟ ಮುಂದುವರೆಸಬೇಕಾ ಬೇಡ್ವಾ ಎಂದು ತೀರ್ಮಾನಿಸಿ ಪ್ರಕಟಿಸುತ್ತೇವೆ ಎಂದರು. ಶನಿವಾರ ಬೆಳಗ್ಗೆ ಇದೇ ಜಾಗದಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸರ್ಕಾರದಿಂದ ಆಡಳಿತಾತ್ಮಕ ಆದೇಶ ನಮಗೆ ಕೈ ಸೇರಿಲ್ಲ. ಸಮುದಾಯದವರು ಸಂಭ್ರಮಿಸುವ ಕೆಲಸ ಮಾಡಬಾರದು. ಶನಿವಾರ ಇಡೀ ಸಮುದಾಯದ ಮುಂದಿನ ನಿಲುವನ್ನು ತಿಳಿಸಲಾಗುವುದು. 25 ವರ್ಷದಿಂದ ಕಾದಿದ್ದೇವೆ. ಇನ್ನು 10 ಗಂಟೆ ಕಾಯೋಣ. ಏನಾಗಿದೆ, ಏನು ಮಾಡಬೇಕು ಎಂದು ಸ್ಪಷ್ಟತೆ ಪಡೆದು ಸಮುದಾಯಕ್ಕೆ ಸಂದೇಶ ನೀಡುತ್ತೇವೆ ಎಂದು ಹೇಳಿದರು.

ಪ್ರಧಾನಿಗಳ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ನಮಗೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಇವತ್ತು ಸ್ವತಃ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ಶ್ರೀಗಳು ಹೇಳಿದರು.

ಇದನ್ನೂ ಓದಿ Reservation : ಒಕ್ಕಲಿಗ, ವೀರಶೈವ ಪಂಚಮಸಾಲಿ ಮೀಸಲಾತಿ ತಲಾ 2% ಹೆಚ್ಚಳ; ಧಾರ್ಮಿಕ ಅಲ್ಪಸಂಖ್ಯಾತರ ಮೀಸಲು ರದ್ದು

Exit mobile version