ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಪ್ರವರ್ಗದಡಿಯೇ ಮೀಸಲಾತಿ (Panchamasali reservation) ನೀಡಬೇಕು, ಅದರಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಸಿಗಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಕೂಡಲ ಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದ ಹೋರಾಟ ಗುರುವಾರಕ್ಕೆ (ಮಾರ್ಚ್ 23) 69 ದಿನ ತಲುಪಿದೆ. ಈ ನಡುವೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮಾರ್ಚ್ 24ರ ಸಂಪುಟ ಸಭೆಯ ಬಳಿಕ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಮೀಸಲಾತಿ ಹೋರಾಟ ನಾಳೆ ಒಂದು ತಾರ್ಕಿಕ ಅಂತ್ಯ ಕಾಣಲಿದೆ ಎಂಬ ವಿಶ್ವಾಸ ಇದೆ. ರಾಜ್ಯ ಸರ್ಕಾರ 2ಎ ಪ್ರವರ್ಗದಡಿ ಸಿಗುವ ಎಲ್ಲ ಸವಲತ್ತುಗಳನ್ನು 2ಡಿಗೂ ನೀಡಿ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ʻʻನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡುವುದಕ್ಕೆ ಇದ್ದ ಹೈಕೋರ್ಟ್ ತಡೆಯಜ್ಞೆ ತೆರವಾಗಿದೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಅವರ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ನಾಳೆ (ಮಾ. 24) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ಇದೆ” ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ 2ಸಿ ಮತ್ತು 2ಡಿ ಮೀಸಲಾತಿ ನೀಡುವ ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅದನ್ನೀಗ ತೆರವು ಮಾಡಿರುವುದರಿಂದ ಸರ್ಕಾರ ಕೂಡಲೇ ಸೂಕ್ತ ನಿರ್ಣಯ ಮಾಡಬೇಕು ಎಂದು ಹೇಳಿದ ಅವರು, ʻʻ2ಎ ಪ್ರವರ್ಗದಡಿಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು 2ಡಿ ಪ್ರವರ್ಗದಲ್ಲೂ ನೀಡುವ ಭರವಸೆಯನ್ನು ನೀಡಲಾಗಿದೆʼʼ ಎಂದು ತಿಳಿಸಿದರು.
ʻʻಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರಮವನ್ನು ನಾನು ನೆನಪಿಸಿಕೊಳ್ಳುತ್ತೇನೆʼʼ ಎಂದು ಶ್ರೀಗಳು ಹೇಳಿದ್ದರು.
ಕಳೆದ ವರ್ಷದ ಡಿಸೆಂಬರ್ 29ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗಾಗಿ ನಿಗದಿಪಡಿಸಿದ್ದ ಶೇ. 10 ಮೀಸಲಾತಿಯಲ್ಲಿ ಒಕ್ಕಲಿಗರು ಮತ್ತು ಪಂಚಮಸಾಲಿಗಳಿಗೆ 2ಸಿ ಮತ್ತು 2ಡಿ ಎಂಬ ಹೊಸ ಪ್ರವರ್ಗದಡಿ ಮೀಸಲು ನೀಡಲು ನಿರ್ಧರಿಸಲಾಗಿತ್ತು. ಆದರೆ, ಇದರಲ್ಲಿ ಕೇವಲ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ದೊರೆಯುವುದು, ತಮಗೆ 2ಎ ಅಡಿ ಸಿಗುವ ಎಲ್ಲ ಸವಲತ್ತುಗಳ ಮೀಸಲಾತಿಯೇ ಬೇಕು ಎಂದು ಪಟ್ಟು ಹಿಡಿದು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸುದೀರ್ಘ ಪ್ರತಿಭಟನೆ ನಡೆಸಿದ್ದರು. ಇದೀಗ 2ಎ ಅಡಿ ಸಿಗುವ ಎಲ್ಲ ಸವಲತ್ತುಗಳನ್ನು 2ಡಿಯಡಿಯಲ್ಲೂ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಸಂಪುಟ ಸಭೆ ಮಾರ್ಚ್ 24ರ ಸಂಜೆ ನಡೆಯಲಿದ್ದು, ಇದರಲ್ಲಿ ಯಾವ ತೀರ್ಮಾನ ಹೊರಬೀಳಲಿದೆ ಎಂಬ ಕಾತರ ಉಂಟಾಗಿದೆ.
ಇದನ್ನೂ ಓದಿ : Panchamasali reservation : ನಾಳೆ ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕೊಡುಗೆ; ವಚನಾನಂದ ಸ್ವಾಮೀಜಿ ವಿಶ್ವಾಸ