ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಬೇಡಿಕೆ (Panchamasali reservation) ವಿಚಾರಕ್ಕೆ ಸಂಬಂಧಿಸಿ ಗುರುವಾರ (ಡಿಸೆಂಬರ್ ೨೨) ನಿರ್ಣಾಯಕ ದಿನವಾಗಲಿದೆ. ಸುವರ್ಣ ಸೌಧದ ಸಮೀಪ ಬೃಹತ್ ಪಂಚಮಸಾಲಿ ಸಮಾವೇಶ ಆಯೋಜನೆ ನಡೆಸಿರುವ ಹೋರಾಟಗಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದೇ ಮೀಸಲಾತಿ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ, ಬಿಜೆಪಿ ಶಾಸಕರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ʻʻಬಸವರಾಜ ಬೊಮ್ಮಾಯಿ ಏನೇನ್ ಆಟ ಆಡ್ತಾರೆ ನೋಡೋಣ. ಬೊಮ್ಮಾಯಿ ಏನರಾ ಆಟ ಆಡಿದ್ರೆ ಗಂಭೀರ ಪರಿಣಾಮ ಎದುರಿಸುತ್ತಾರೆ. ಸಿಹಿ ಸುದ್ದಿ ಕೊಡ್ತಾರೋ ಮತ್ತೆ ನಾಟಕ ಆಡ್ತಾರೋ ನೋಡೋಣʼʼ ಎಂದು ಹೇಳಿದರು.
ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಮಧ್ಯಾಹ್ನ ಸಂಪುಟ ಸಭೆ ಇದೆ. ಮುಂದೂಡಿಕೆ ರಾಜಕಾರಣವನ್ನೇ ಮಾಡಿಕೊಂಡು ಹೋಗುವ ಹುಚ್ಚು ಸಾಹಸಕ್ಕೆ ಬೊಮ್ಮಾಯಿ ಬೀಳಬಾರದು ಎಂದು ಹೇಳಿದರು ಯತ್ನಾಳ್.
ಹಿಂದುಳಿದ ವರ್ಗಗಳ ಆಯೋಗ ಪೂರ್ಣ ವರದಿ ನೀಡಿಲ್ಲ. ಮಧ್ಯಂತರ ವರದಿ ನೀಡಿದೆ ಎಂಬ ಬಗ್ಗೆ ಕೇಳಿದಾಗ, ʻʻಬೊಮ್ಮಾಯಿಯವರಿಗೆ ಈ ಎಲ್ಲ ವಿಚಾರಗಳನ್ನು ಹೇಳಿ ಎರಡು ವರ್ಷ ಆಯ್ತು. ಎರಡು ವರ್ಷದಿಂದ ವರದಿ ಬರುತ್ತೆ ಬರುತ್ತೆ ಅಂತ ಹೇಳುತ್ತಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರಿಎ ಸಾವಿರ ಸಾರಿ ಹೇಳಿದ್ದೀವಿ, ಬೇಗ ವರದಿ ಕೊಡಿ ಅಂತ. ಈಗ ಉದ್ದೇಶಪೂರ್ವಕವಾಗಿ ಮಧ್ಯಂತರ ವರದಿ ಅಂತಾ ಕಥೆ ಹೇಳೋದಲ್ಲ. ಕಥೆ ಹೇಳಬಾರದು ಬೊಮ್ಮಾಯಿಯವರು. ಇಷ್ಟು ದಿವಸ ಅವರು ಹೇಳಿದ ಹಾಗೇ ನಡೆದುಕೊಂಡಿದ್ದೇವೆ. ಬೊಮ್ಮಾಯಿ ಮೇಲೆ ಭರವಸೆ ಇಟ್ಟಂತಹ ಕೊನೆಯ ದಿವಸ ಇದುʼʼ ಎಂದು ತೀಕ್ಷ್ಣವಾಗಿ ಹೇಳಿದರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಜತೆಗೆ ಈಗಲೂ ಬೊಮ್ಮಾಯಿ ಅವರು ನಿರ್ಧಾರ ತೆಗೆದುಕೊಳ್ಳದಿದ್ದರೆ ಚುನಾವಣೆ ಇದೆ, ಜನ ತೀರ್ಮಾನ ಮಾಡ್ತಾರೆ ಎಂದೂ ಎಚ್ಚರಿಸಿದರು.
ಯಡಿಯೂರಪ್ಪ ವಿರುದ್ಧವೂ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ʻʻಬೊಮ್ಮಾಯಿ ಹಿಂದೆ ದೊಡ್ಡ ಸಾಕು ತಂದೆ, ಅವರ ತಂದೆ ಸಮಾನ ಇದ್ದವರು ಆಟ ಆಡುತ್ತಿದ್ದಾರೆ. ಬೊಮ್ಮಾಯಿ ಇಂತವರ ಮಾತು ಕೇಳಿದ್ರೆ ಇವರು ಅವರ ಸ್ಥಾನಕ್ಕೆ ಹೋಗ್ತಾರೆʼʼ ಎಂದರು.
ʻʻಎರಡು ವರ್ಷ ಬಸವರಾಜ ಬೊಮ್ಮಾಯಿ ಏನ್ ಮಾಡಿದ್ರು? ಈಗ ಆಟ ಆಡುತ್ತಿದ್ದಾರೆ. ಡಿ. 19ರೊಳಗೆ ಎಲ್ಲಾ ಪ್ರಕ್ರಿಯೆ ಮಾಡ್ತೀವಿ ಬೊಮ್ಮಾಯಿ ಹೇಳಿದ್ರು. ಬೊಮ್ಮಾಯಿ ಹೇಳಿಲ್ಲ ಅಂದ್ರೆ ಮಧ್ಯಾಹ್ನ ಕೇಳ್ತೀನಿ ಅವರಿಗೆʼʼ ಎಂದ ಯತ್ನಾಳ್, ನಮ್ಮ ಮುಂದಿನ ನಡೆ ಮಧ್ಯಾಹ್ನದ ವೇಳೆಗೆ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.
ʻʻಸಮುದಾಯ ಜೊತೆ ಇರ್ತೀರೋ ಸರ್ಕಾರ ಜೊತೆ ಇರ್ತೀರೋʼʼ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ʻʻನಾನು ನ್ಯಾಯ ಸತ್ಯದ ಜೊತೆಗೆ ಇರುತ್ತೇನೆʼʼ ಎಂದರು.
ಯಡಿಯೂರಪ್ಪ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ನಿಮಗೆ ಅನಿಸೋದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻತಮ್ಮ ಭವಿಷ್ಯ ಮುಗಿದೆ, ತಮ್ಮದಂತೂ ಜಾತ್ರೆ ಮುಗಿದಿದೆ. ತಮ್ಮ ಮಗನ ಭವಿಷ್ಯಕ್ಕೆ ಹೀಗೆ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಸಾಕು ತಂದೆಯ ವಚನ ಪಾಲಿಸಬೇಕಾಗಿದೆ. ಹೀಗಾಗಿ ಗೊಂದಲದಲ್ಲಿದ್ದಾರೆʼʼ ಎಂದು ಗೇಲಿ ಮಾಡಿದರು.
ಇದನ್ನೂ ಓದಿ | Panchamasali Reservation | ಬೆಳಗಾವಿಯಲ್ಲಿ ಇಂದು ಬೃಹತ್ ಪಂಚಶಕ್ತಿ ಸಮಾವೇಶ, ಮೀಸಲಾತಿಗೆ ಆಗ್ರಹ