ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ (Panchamasali Reservation) ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯ ಇಬ್ಬರು ನಾಯಕರಾದ ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಮಾತಿನ ಸಮರ ಹದ್ದು ಮೀರಿದೆ. ಅದರ ಜತೆಗೆ ತೊಡೆ ತಟ್ಟುವಿಕೆ, ಆಣೆ ಪ್ರಮಾಣ, ಅಪ್ಪನಿಗೆ ಹುಟ್ಟಿದ ಮಾತುಗಳೆಲ್ಲ ಸರಾಗವಾಗಿಯೇ ಹರಿದಿವೆ.
ಪಂಚಮಸಾಲಿ ಸಮುದಾಯಕ್ಕೆ ೨ಎ ಪ್ರವರ್ಗದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಗಿದ್ದರೂ ಕೇಂದ್ರ ಸರಕಾರ ಮೇಲ್ವರ್ಗದ ಬಡವರಿಗೆ ನಿಗದಿಪಡಿಸಿದ ಶೇ. ೧೦ ಮೀಸಲಾತಿಯಲ್ಲಿ ೨ಡಿ ಎಂಬ ಹೊಸ ಪ್ರವರ್ಗ ಸೃಷ್ಟಿಸಿ ಪಂಚಮಸಾಲಿಗಳಿಗೆ ಪಾಲು ನೀಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಇದರ ವಿರುದ್ಧ ಕೂಡಲ ಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಶ್ರೀಗಳು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜನವರಿ ೧೨ರೊಳಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸದಿದ್ದರೆ ೧೩ರಿಂದ ಶಿಗ್ಗಾಂವಿಯಲ್ಲಿರುವ ಸಿಎಂ ನಿವಾಸದೆದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಲಾಗಿತ್ತು. ಇದರ ನಡುವೆ, ಯತ್ನಾಳ್ ಅವರಂತೂ ಮುರುಗೇಶ್ ನಿರಾಣಿ ಮತ್ತು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರ ವಿರುದ್ಧ ಭಾರಿ ವಾಗ್ದಾಳಿಯನ್ನೇ ನಡೆಸಿದ್ದರು.
ಯತ್ನಾಳ್ ವಿರುದ್ಧ ಸಿಡಿದುಬಿದ್ದ ನಿರಾಣಿ
ಶನಿವಾರ ಬೆಳಗೇರಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಅವರು ಯತ್ನಾಳ್ ಅವರನ್ನು ಟಾರ್ಗೆಟ್ ಮಾಡಿಯೇ ಮಾತನಾಡಿದರು. ಈ ಹಿಂದೊಮ್ಮೆ ಬಸನ ಗೌಡ ಪಾಟೀಲ್ ಅವರ ಸಿಡಿಯೊಂದರ ಬಗ್ಗೆ ಚರ್ಚೆ ನಡೆದಿತ್ತು. ಇದನ್ನು ಪ್ರಸ್ತಾಪ ಮಾಡಿದ ನಿರಾಣಿ, ಸಿಡಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸ್ಟೇ ತಂದವರಿಗೆ ಹೆಚ್ಚಿನ ಮಾಹಿತಿಯಿರುತ್ತದೆ ಎಂದು ಪರೋಕ್ಷವಾಗಿ ಯತ್ನಾಳ ವಿರುದ್ಧ ಹರಿಹಾಯ್ದರು.
ಯತ್ನಾಳ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರೆಯೇ ಎನ್ನುವ ಪ್ರಶ್ನೆಗೆ ಟಿಕೆಟ್ ಸಿಕ್ಕಮೇಲೆ ಆ ಪ್ರಶ್ನೆ ಉದ್ಭವಿಸುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಯತ್ನಾಳ ಅವರಿಗೆ ಟಿಕೆಟ್ ತಪ್ಪಲಿದೆ ಎಂಬ ಮುನ್ಸೂಚನೆ ನೀಡಿದರು.
ʻʻಇಷ್ಟು ದಿನ ಅವರ ಎಲ್ಲಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದಿರುವುದು ನಿರಾಣಿಯವರ ವೀಕ್ನೆಸ್ ಎಂದು ಭಾವಿಸಬಾರದು. ನಾನು ಸಹ ತಯಾರಾಗಿದ್ದೇನೆ. ನಾನೂ ಸಹ ಇದೇ ಅಖಂಡ ಜಿಲ್ಲೆಯವನಾಗಿದ್ದು, ಕೃಷ್ಣೆಯ ನೀರು, ಇಲ್ಲಿನ ಗಾಳಿ ಸೇವಿಸಿ ಬೆಳೆದಿದ್ದೇನೆ. ಅವರಿಗಿಂತ ಕೆಟ್ಟ ಪದ ಬಳಕೆಯೂ ನನಗೆ ಗೊತ್ತು. ಆದರೆ ಅದ ನನ್ನ ಸಂಸ್ಕೃತಿಯಲ್ಲʼʼ ಎಂದರು.
ʻʻಮುಂದಿನ ಚುನಾವಣೆಯಲ್ಲಿ ಯಾರು ಯಾರನ್ನ ಸೋಲಿಸುತ್ತಾರೆ ಎಂಬುದು ಗೊತ್ತಾಗಲಿದೆ. ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಹರಿಹರ ಪೀಠ ಹಾಗೂ ನಿರಾಣಿ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಲಿʼʼ ಎಂದು ಖಡಕ್ ಎಚ್ಚರಿಕೆ ನೀಡಿದರು. ʻʻʻವಿಜಯಪುರದ ಜನ ಪ್ರಜ್ಞಾವಂತರು. ಮುಂದಿನ ಚುನಾವಣೆಯಲ್ಲಿ ಲೂಸ್ ಟಾಕ್ ಮಾಡುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವ ಮೂಲಕ ಯತ್ನಾಳ ಸೋಲು ಗ್ಯಾರಂಟಿ ಎನ್ನುವುದನ್ನ ಸೂಚ್ಯವಾಗಿ ನೀಡಿದರು. ಮೂರೂ ಪಂಚಮಸಾಲಿ ಪೀಠದ ಸ್ಥಾಪನೆಯಲ್ಲೂ ನನ್ನ ಕೊಡುಗೆಯಿದೆ. ಸ್ಥಾಪನೆ ಉದ್ದೇಶ ಪಂಚಮಸಾಲಿ ಸಮಾಜಕ್ಕೆ ಅನುಕೂಲ ಆಗಲಿ, ಜಗದ್ಗುರುಗಳು ಅತೀ ದೊಡ್ಡದಾದ ನಮ್ಮ ಸಮಾಜದವರ ಕೈಗೆ ಸಿಗಲಿ ಎಂಬ ಕಾರಣದಿಂದ ಮೂರು ಪೀಠಗಳನ್ನ ಸ್ಥಾಪಿಸಲಾಗಿದೆʼʼ ಎಂದು ಸಮರ್ಥಿಸಿಕೊಂಡರು.
ಆ ಕಡೆಯಿಂದ ಎದ್ದು ನಿಂತರು ಯತ್ನಾಳ್
ಇತ್ತ ನಿರಾಣಿ ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆಯೇ ಅತ್ತ ಯತ್ನಾಳ್ ಅವರು ಸಿದ್ಧರಾಗಿ ಕುಳಿತಿದ್ದಂತೆ ವಾಗ್ದಾಳಿಗೆ ಇಳಿದರು. ʻʻಸಚಿವ ನಿರಾಣಿ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ಸಿಡಿ ಬಿಡುಗಡೆ ಮಾಡಲಿʼʼ ಎಂದು ಯತ್ನಾಳ ಸವಾಲು ಹಾಕಿದ್ದಾರೆ. ಯತ್ನಾಳಗೆ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗಲ್ಲಾ ಎಂಬ ನಿರಾಣಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ʻʻಟಿಕೆಟ್ ಕೊಡುವವಾ ಇಂವಾ ಯಾರು? ಇಂವಾ ಕೊಡ್ತಾನಾʼʼ ಎಂದು ಕಿಡಿ ಕಾರಿದರು.
ಕಳೆದ ಮಹಾಮಗರ ಪಾಲಿಕೆ ಚುನಾವಣೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಲು ನಿರಾಣಿ ಹಾಗೂ ವಿಜಯೇಂದ್ರ ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದರು. ಅಷ್ಟಾದರೂ ವಿಜಯಪುರದ ಜನ ಬಿಜೆಪಿಯನ್ನು ಗೆಲ್ಲಿಸಿದರು ಎಂದು ಹೇಳಿದ ಯತ್ನಾಳ್ ಅವರು, ಇದಕ್ಕೆಲ್ಲಾ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದರು. ಮಾತ್ರವಲ್ಲ, ಪಕ್ಷೇತರರಿಗೆ ಫಂಡ್ ಮಾಡಲಿಲ್ಲ ಎಂದು ಧರ್ಮಸ್ಥಳದಲ್ಲಿ ಬಂದು ಆಣೆ ಮಾಡಲಿ ಎಂದೂ ಸವಾಲು ಹಾಕಿದರು.
ಮೀಸಲಾತಿ ನೀಡಲು ಅಧ್ಯಯನ ಅವಶ್ಯವೇ ಇಲ್ಲ
ʻʻಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ವಿಚಾರದಲ್ಲಿ ಎಲ್ಲರೂ ನಾಟಕ ಮಾಡುತ್ತಿದ್ದಾರೆʼʼ ಎಂದು ಹೇಳಿದ ಅವರು, ʻʻ೨ಎ ಮೀಸಲಾತಿ ನೀಡಲು ಕುಲಶಾಸ್ತ್ರೀಯ ಅಧ್ಯಯನ ಅವಶ್ಯಕತೆ ಇಲ್ಲ.
ಎಸ್ಟಿಎಸ್ಟಿ ಸಮುದಾಯಕ್ಕೆ ಯಾವುದಾದರೂ ಸಮಾಜವನ್ನು ಸೇರಿಸಬೇಕಾದರೆ ಮಾತ್ರ ಕುಲಶಾಸ್ತ್ರೀಯ ಅಧ್ಯಯನವಾಗಬೇಕು. ಇದನ್ನು ಸಚಿವ ಮಾಧುಸ್ವಾಮಿಯವರೇ ಹೇಳಿದ್ದಾರೆʼʼ ಎಂದರು ಯತ್ನಾಳ್.
ಬಡವರ ಮೀಸಲಾತಿ ನಮಗೆ ದಕ್ಕದು
ʻʻಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಬಡವರಾಗಿರುವವರಿಗೆ ಎಂದು ಶೇ. ೧೦ ಮೀಸಲಾತಿ ನೀಡಿದ್ದು. ಯಾವುದೇ ಮೀಸಲಾತಿ ಇಲ್ಲದ ಸಮಾಜಕ್ಕೆ ಇದು ಮೀಸಲು. ಅದರಲ್ಲಿ ಲಿಂಗಾಯತರು ಸೇರಲು ಬರಲ್ಲ. ರಿಸರ್ವೇಷನ್ ಪಡೆಯುತ್ತಿರುವವರಿಗೆ ಇದರಲ್ಲಿ ಅವಕಾಶವಿಲ್ಲ. ಸರಕಾರ ಈಗ ಹೇಳುತ್ತಿರುವ ಮೀಸಲಾತಿ ಪಡೆಯಲು ಸಾಧ್ಯವೇ ಇಲ್ಲʼʼ ಎಂದು ವಿವರಿಸಿದರು.
ಸಿ.ಡಿ. ಇಟ್ಟುಕೊಂಡು ಮಂತ್ರಿಯಾದ ನಿರಾಣಿ!
ನನ್ನ ಬಗ್ಗೆ, ಹರಿಹರ ಸ್ವಾಮೀಜಿ ಬಗ್ಗೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಿದರೆ ಸರಿಯಿರಲ್ಲ ಎಂದು ನಿರಾಣಿ ಅವರು ಎಚ್ಚರಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಇವರೆಲ್ಲ ಸಿಡಿ ಇಟ್ಟುಕೊಂಡು ಮಂತ್ರಿಯಾದವರು ಎಂದರು.
ʻʻನಾನು ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಎರಡು ಸಿಡಿ ಫ್ಯಾಕ್ಟರಿ ಇವೆ ಎಂದು ಹೇಳಿದ್ದೇನೆ. ನನ್ನ ಸಿಡಿ ನಿರಾಣಿ ಬಳಿ ಇದ್ದರೆ, ಅವರು ಅವರ ಅಪ್ಪನಿಗೆ ಹುಟ್ಟಿದ್ದರೆ ತೆಗೆಯಲಿ ಎಂದು ಸವಾಲು ಹಾಕಿದರು. ಇವರೆಲ್ಲಾ ಯಾರ ಯಾರದ್ದೋ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸಿಡಿ ಇಟ್ಟುಕೊಂಡೇ ಇವರು ಮಂತ್ರಿಯಾಗುತ್ತಾರೆ, ನಾ ಅಂಥ ಹಲ್ಕಾ ಕೆಲಸ ಮಾಡಲ್ಲ ಎಂದರು.