Site icon Vistara News

Panchamasali reservation | ಯತ್ನಾಳ್‌ರನ್ನು ಬಿಜೆಪಿಯಿಂದ ಉಚ್ಚಾಟಿಸಿದರೆ ಪಂಚಮಸಾಲಿ ಸಮುದಾಯ ಜತೆಗಿರುತ್ತದೆ ಎಂದ ಸ್ವಾಮೀಜಿ

panchamasali protest 2

ಬೆಂಗಳೂರು: ಒಂದು ವೇಳೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದರೆ ಇಡೀ ಪಂಚಮಸಾಲಿ ಸಮುದಾಯ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಕೂಡಲ ಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ್ತೆ ಆರಂಭಗೊಂಡಿರುವ ಪಂಚಮಸಾಲಿ ಸಮುದಾಯದ ಪ್ರತಿಭಟನೆಯ ವೇಳೆ ಅವರು ಮಾತನಾಡಿದರು. ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಅವರು ಬೇಕಿದ್ದರೆ ಬಿಜೆಪಿ ಪಕ್ಷ ಬಿಟ್ಟು ಹೋಗಲಿ ಎಂಬ ಸಚಿವ ಮುರುಗೇಶ್‌ ನಿರಾಣಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು ಒಂದೊಮ್ಮೆ ಇದೇ ರೀತಿ ಮುಂದುವರಿದು ಯತ್ನಾಳ್‌ ಅವರನ್ನು ಪಕ್ಷದಿಂದ ಹೊರಹಾಕಿದರೆ ಪಂಚಮಸಾಲಿ ಸಮುದಾಯ ಅವರ ಬೆನ್ನಿಗೆ ನಿಲ್ಲುತ್ತದೆ ಎಂದರು.

ಸಚಿವರಾದ ಮುರುಗೇಶ್‌ ನಿರಾಣಿ ಮತ್ತು ಸಿ.ಸಿ. ಪಾಟೀಲ್‌ ಅವರು ಶನಿವಾರ ಬೆಳಗ್ಗೆ ಪತ್ರಿಕಾಗೋಷ್ಠಿ ಮಾಡಿ ಸ್ವಾಮೀಜಿಗಳು ಪದೇಪದೆ ಗಡುವು ನೀಡುವುದು ಸರಿಯಲ್ಲ. ಸಿಎಂ ಅವರು ಸಮಾಜಕ್ಕೆ ಮೀಸಲಾತಿ ನೀಡುವ ಮಾತಿಗೆ ಬದ್ಧರಾಗಿದ್ದಾರೆ ಎಂದು ಹೇಳಿದ್ದರು. ಜತೆಗೆ ಯತ್ನಾಳ್‌ ವಿರುದ್ಧ ದಾಳಿ ನಡೆಸಿದ್ದರು.

ʻʻಯತ್ನಾಳ್ ಅವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಹೋರಾಡುತ್ತಿರುವ ನಾಯಕ. ಅವರನ್ನೇನಾದರೂ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದರೆ ಇಡೀ ಪಂಚಮಸಾಲಿ ಸಮುದಾಯ ಅವರ ಜೊತೆ ಇರುತ್ತದೆʼʼ ಎಂದ ಅವರು ಯತ್ನಾಳ್‌ ಅವರು ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಹೇಳಿದರು.

ʻʻಮುರುಗೇಶ್‌ ನಿರಾಣಿ ಅವರು ಪೂರ್ವಗ್ರಹಪೀಡಿತರಾಗಿ ಮಾತಾಡುತ್ತಾರೆ. ನಿರಾಣಿ ಮತ್ತು ಸಿಸಿ ಪಾಟೀಲ್ ಅವರು ಒಂದೇ ಥರ ಮಾತನಾಡುತ್ತಾರೆ. ನಾವು ಯಾರ ಮಾತೂ ಕೇಳುವುದಿಲ್ಲ. ನಮ್ಮ ಹೋರಾಟ ನಾವು ಮುಂದುವರೆಸುತ್ತೇವೆʼʼ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ʻʻನಾಳೆ ಅಥವಾ ನಾಡಿದ್ದು ನಾವು ರಾಜ್ಯ ಕಾರ್ಯಕಾರಣಿ ಸಭೆ ನಡೆಸುತ್ತೇವೆ. ಈ ಸಭೆಯಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ನಾನು ಯಾರ ಸಲಹೆಯನ್ನೂ ಪಡೆಯುತ್ತಿಲ್ಲ. ನಾನು ಜನರ ಸಲಹೆ ಪಡೆಯುತ್ತೇನೆʼʼ ಎಂದು ಹೇಳಿದ ಜಯಮೃತ್ಯುಂಜಯ ಸ್ವಾಮೀಜಿ, ʻʻಸಿಎಂ ಮೇಲೆ ನಮಗೆ ವೈಯಕ್ತಿಕ ಸಿಟ್ಟಿಲ್ಲ. ಎರಡು ವರ್ಷಗಳ ಹೋರಾಟದ ಸಮಯದಲ್ಲಿ ಸಿಎಂ ಮೌನ ವಹಿಸಿದ್ದೇಕೆʼʼ ಎಂದು ಪ್ರಶ್ನಿಸಿದರು.

ಯತ್ನಾಳ್‌ ಅವರ ಮೇಲೆ ನಿರಾಣಿ ವಾಗ್ದಾಳಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ʻʻಯತ್ನಾಳ್‌ ಒಬ್ಬ ಹುಲಿ ಇದ್ದ ಹಾಗೆ. ನಿರಾಣಿ ಅವರ ಜತೆ ಮಾತನಾಡಲಿ. ಯತ್ನಾಳ್ ಪಕ್ಷದ ಒಳಗೆ ಇದ್ದುಕೊಂಡೇ ಹೋರಾಟ ಮಾಡಿದ್ದಾರೆ. ಅವರ ಹೋರಾಟ ನಿಸ್ವಾರ್ಥದ್ದು. ಯಾವ ಅಧಿಕಾರ, ಸಚಿವ ಸ್ಥಾನದ ಅಪೇಕ್ಷೆ ಇಟ್ಟುಕೊಳ್ಳದೆ ಅವರು ಹೋರಾಟದಲ್ಲಿದ್ದಾರೆ. ಒಂದು ಹಂತದಲ್ಲಿ ಅವರ ಹೆಸರು ಸಿಎಂ‌ ಸ್ಥಾನಕ್ಕೆ ಕೇಳಿಬಂದಿದ್ದರೂ ಹೋರಾಟ ಮಾಡುತ್ತಿರುವ ಯತ್ನಾಳ್‌ ಅವರು ಜನರ ಹೃದಯಲ್ಲಿ ನೆಲೆಸಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯದೇ ಇರುವ ಮನಸ್ಸು ಅವರದ್ದುʼʼ ಎಂದರು.

ʻʻವೈಯಕ್ತಿಕ ನಿಂದನೆ ಸರಿಯಲ್ಲ, ಎಲ್ಲರೂ ಒಂದೇ ತಾಯಿಯ ‌ಮಕ್ಕಳುʼʼ ಎಂದು ಅವರು ಹೇಳಿದರು.

ಇದನ್ನೂ ಓದಿ | Panchamasali reservation | ಸಿಎಂ ಬೊಮ್ಮಾಯಿ ಸಿಕ್ಕಾಪಟ್ಟೆ ಸುಳ್ಳು ಹೇಳ್ತಾರೆ, ಇದು ಅಂತಿಮ ಹೋರಾಟ ಎಂದ ಸ್ವಾಮೀಜಿ

Exit mobile version