Site icon Vistara News

Panchamasali reservation | ಸಿಎಂ ಬೊಮ್ಮಾಯಿ ಸಿಕ್ಕಾಪಟ್ಟೆ ಸುಳ್ಳು ಹೇಳ್ತಾರೆ, ಇದು ಅಂತಿಮ ಹೋರಾಟ ಎಂದ ಸ್ವಾಮೀಜಿ

jaya mrutyunjaya swamiji coutions govt over panchamasali-reservation

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು (Panchamasali reservation) ೨ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಈಗ ಬೆಂಗಳೂರಿಗೆ ಶಿಫ್ಟ್‌ ಆಗಿದೆ. ಶುಕ್ರವಾರ ಶಿಗ್ಗಾಂವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ ಪಂಚಮಸಾಲಿ ಹೋರಾಟಗಾರರು ಶನಿವಾರದಿಂದ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದರು. ಅದರಂತೆ ಶನಿವಾರದಿಂದಲೇ ಕೂಡಲ ಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭಗೊಂಡಿದೆ. ಈ ವೇಳೆ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸ್ವಾಮೀಜಿ ಹೇಳಿದ್ದೇನು?
-ಕಳೆದ ಎರಡು ವರ್ಷಗಳಿಂದ ನಾವು‌ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿದ್ದೇವೆ. ೨ ಲಕ್ಷ ಜನ ಸೇರಿ ಶಕ್ತಿ ಪ್ರದರ್ಶನ ಮಾಡಿದ್ದೇವೆ, ಪಾದಯಾತ್ರೆ ನಡೆಸಿದ್ದೇವೆ. ಇಷ್ಟಾದರೂ ಸರ್ಕಾರ ನಮ್ಮ ‌ಬೇಡಿಕೆ ಈಡೇರಿಸಿಲ್ಲ.

-ಹಿಂದುಳಿದ ವರ್ಗದಿಂದ ಸರ್ಕಾರ ಅಂತಿಮ ವರದಿ ಪಡೆಯಬೇಕು ಎಂದು ಒತ್ತಾಯಿಸಿದೆವು. ಆದರೆ ಸಿಎಂ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಇದು ನಮ್ಮ ಅಂತಿಮ ಹೋರಾಟ.
– ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ೮೦ ದಿನಗಳು ಬಾಕಿ ಇವೆ. ಈಗಲೂ ಒತ್ತಾಯ ಮಾಡದಿದ್ದರೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ.
-ನಾನು ಏಕಾಂಗಿ ಹೋರಾಟ ಮಾಡಲು ನಿರ್ಧರಿಸಿದ್ದೆ. ನೈತಿಕ ಶಕ್ತಿ ಪ್ರದರ್ಶನ ಮಾಡುವ ನಿರ್ಧರಿಸಿದ್ದೆ. ಆದರೆ ಜನ ನಾವು ಬಂದು ಸೇರುತ್ತೇವೆ ಎಂದು ಪ್ರಾರ್ಥಿಸಿದರು. ಹೀಗಾಗಿ ಎಲ್ಲರನ್ನೂ ಸೇರಿಸಿಕೊಂಡು ಹೋರಾಟ ಮುಂದುವರಿಸುತ್ತಿದ್ದೇವೆ.
– ಜನವರಿ ೧೬ರಿಂದ ಪ್ರತಿ ದಿನ ಎರಡು ತಾಲೂಕುಗಳಿಂದ ಜನ ಬರಲಿದ್ದಾರೆ. ಧರಣಿ ಸತ್ಯಾಗ್ರಹದಲ್ಲಿ ಜನ ಭಾಗವಹಿಸಲಿದ್ದಾರೆ. ಇಂದಿನಿಂದ ನಮ್ಮ ಅಂತಿಮ ಧರಣಿ‌ ಸತ್ಯಾಗ್ರಹ ಆರಂಭವಾಗಿದೆ.

ಸಿಎಂ ಕೇವಲ ಸುಳ್ಳೇ ಹೇಳಿದರು
ʻʻಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ. ಆವತ್ತು ನಾವು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದರೆ ಅಲ್ಲೋಲಕಲ್ಲೋಲ ಆಗುತ್ತಿತ್ತು. ಆವತ್ತು ಸಿಎಂ ಅವರು ತಾಯಿ ಮೇಲೆ ಆಣೆ ಮಾಡಿ ಮೀಸಲಾತಿ ಕೊಡುತ್ತೇವೆ ಎಂದು ಹೇಳಿದರು. ಆದರೆ, ಈಗ ಸಿಎಂ ಮಾತು ತಪ್ಪಿದ್ದಾರೆ. ಹೀಗಾಗಿ ನಮ್ಮ ಶಕ್ತಿ ಏನೆಂದು ಸರ್ಕಾರಕ್ಕೆ ತೋರಿಸುತ್ತೇವೆʼʼ ಎಂದು ಸವಾಲು ಹಾಕಿದರು ಜಯ ಮೃತ್ಯುಂಜಯ ಸ್ವಾಮೀಜಿ.

ಸರ್ಕಾರದ ತೀರ್ಮಾನ ತಿರಸ್ಕರಿಸಿದ್ದೇವೆ
ಪ್ರವರ್ಗ ೨ಡಿ ರಚಿಸಿ ಮೇಲ್ವರ್ಗದ ಮೀಸಲಾತಿ (ಇಡಬ್ಲ್ಯೂಎಸ್‌)ಯಲ್ಲಿ ಪಾಲು ನೀಡುವ ಸರ್ಕಾರದ ಪ್ರಸ್ತಾಪವನ್ನು ನಾವು ತಿರಸ್ಕರಿಸಿದ್ದೇವೆ. ರಾಜ್ಯ ಹೈಕೋರ್ಟ್‌ ಕೂಡಾ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ನಾವು ಇದಕ್ಕಿಂತ ಮುಂಚಿತವಾಗಿ ಸರ್ಕಾರದ ಮೀಸಲಾತಿಯನ್ನು ತಿರಸ್ಕರಿಸಿದ್ದೇವೆ. ಹೀಗಾಗಿ ಅಂತಿಮ ವರದಿ ಬರುವ ತನಕ ನಮ್ಮ‌ ಹೋರಾಟ ಮುಂದುವರೆಯಲಿದೆ ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ | Panchamasali Reservation | ಪದೇಪದೆ ಗಡುವು ನೀಡುವ ಸ್ವಾಮೀಜಿ, ಯತ್ನಾಳ್‌ ವಿರುದ್ಧ ಸಿ.ಸಿ ಪಾಟೀಲ್‌, ನಿರಾಣಿ ಆಕ್ರೋಶ

Exit mobile version