Site icon Vistara News

Panchamasali Reservation | ಸವದತ್ತಿಯಲ್ಲಿ ಬೃಹತ್‌ ಪಂಚಮಸಾಲಿ ಪಾದಯಾತ್ರೆಗೆ ಚಾಲನೆ; ಸುವರ್ಣಸೌಧ ಮುತ್ತಿಗೆಗೆ ನಿರ್ಧಾರ

Panchamasali Reservation

ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿಗಾಗಿ ಒತ್ತಾಯಿಸಿ (Panchamasali Reservation) ಸುವರ್ಣಸೌಧದವರೆಗೆ ಹಮ್ಮಿಕೊಂಡಿರುವ ಬೃಹತ್‌ ಪಾದಯಾತ್ರೆಗೆ ಜಿಲ್ಲೆಯ ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಸೋಮವಾರ ಚಾಲನೆ ನೀಡಿದರು.

ಪಂಚಮಸಾಲಿ ಸಮಾಜದ ಮುಖಂಡರು, 2ಎ ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಡಿ.೧೯ರವರೆಗೆ ಗಡುವು ನೀಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸವದತ್ತಿಯ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್‌ ಪಂಚಮಸಾಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ದಿ. ಆನಂದ ಮಾಮನಿ ಪತ್ನಿ ರತ್ನಕ್ಕ ಮಾಮನಿ, ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಪಂಚಮಸಾಲಿ ಸಮಾಜದ ಸಾವಿರಾರು ಮಂದಿ ಭಾಗವಹಿಸಿದ್ದರು.

ಪಂಚಮಸಾಲಿ ನಡೆ ಸುವರ್ಣಸೌಧದ ಕಡೆ
ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಳೆದ 2 ವರ್ಷಗಳಿಂದ 2ಎ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದೇವೆ. ವಿಧಾನಸೌಧ ಮುತ್ತಿಗೆ ಹಾಕುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದ ಸಿಎಂ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ, ಈಗ ನಾನೇನು ಮೀಸಲಾತಿ ನೀಡಲು ಗಡುವು ಕೊಟ್ಟಿಲ್ಲ ಎಂದು ಸಿಎಂ ಹೇಳಿರುವುದು ಗಾಯದ ಮೇಲೆ ಬರೆ ಎಳೆದ ಹಾಗೆ ಆಗಿದೆ. ಹೀಗಾಗಿ ಸುವರ್ಣಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಮ್ಮ ಸಮಾಜದವರಿಗೆ ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಬೇಸರವಿದೆ. ಆದರೆ ಬೊಮ್ಮಾಯಿ ಅವರೇ ನಮಗೆ ಸಮಯ ನೀಡಿದ್ದರು. ನನಗೆ ಮಜ್ಜಿಗೆ ಸಾರು ಅನ್ನ ಕೊಟ್ಟವರು ಪಂಚಮಸಾಲಿಯವರು ಎಂದು ಸಿಎಂ ಹೇಳಿದ್ದರು. ಆದರೆ ಈಗ ಸಮುದಾಯದ ಬಗ್ಗೆ ಅಭಿಮಾನ ಇದೆಯೋ ಇಲ್ಲವೋ ತಿಳಿಯುತ್ತಿಲ್ಲ ಎಂದು ಮೀಸಲಾತಿ ಘೋಷಣೆ ಮಾಡದ್ದಕ್ಕೆ ಅಸಮಾಧಾನ ಹೊರಹಾಕಿದರು.

ಬಿಜೆಪಿ ಸರ್ಕಾರ ರಚನೆ ಮಾಡುವ ಹಿಂದೆ ಸಮುದಾಯ ಬಹುದೊಡ್ಡ ಪಾತ್ರ ವಹಿಸಿದೆ. ಆದರೆ ಸಿಎಂ ಹೇಳಿರುವ ಮಾತಿನಿಂದ ನಮಗೆ ನೋವಾಗಿದೆ. ಮಾಜಿ ಸಿಎಂ ಯಡಿಯೂರಪ್ಪಗೆ ಒತ್ತಡ ಹಾಕುವ ಸಲುವಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದೆವು. ಇದೀಗ ನಾವು ಸವದತ್ತಿಯಿಂದ ಬೆಳಗಾವಿಗೆ ತೆರಳುತ್ತಿದ್ದೇವೆ. ಡಿ.22ರಂದು ಪಂಚಶಕ್ತಿ ವಿರಾಟ ಸಮಾವೇಶದಲ್ಲಿ 25 ಲಕ್ಷ ಜನರು ಭಾಗಿಯಾಗಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೀಸಲಾತಿ ಕೊಟ್ಟರೆ ಮುತ್ತಿನ ಹಾರ, ಇಲ್ಲದಿದ್ದರೆ ಹರಹರ ಮಹಾದೇವ ಎನ್ನುವ ಅನ್ನೋ ಮೂಲಕ ಮುತ್ತಿಗೆ ಹಾಕುತ್ತೇವೆ. ಮನೆಗೆ ಒಬ್ಬರಲ್ಲ, ಮನೆಯಲ್ಲಿ ಒಬ್ಬರನ್ನು ಬಿಟ್ಟು ಎಲ್ಲರೂ ಹೋರಾಟಕ್ಕೆ ಬರಬೇಕು. ಮಾಡು ಇಲ್ಲವೇ ಮಡಿ ಎನ್ನುವುದನ್ನು ನಾವು ತೋರಿಸೋಣ ಎಂದು ಸಮಾಜದ ಜನರಿಗೆ ಕರೆ ನೀಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಮಾಧ್ಯಮಗಳಲ್ಲಿ ಬಂದಿರುವ ವರದಿಯಿಂದ ಮನಸ್ಸಿಗೆ ಬೇಜಾರಾಗಿರಬಹುದು. ಅದೇ ನಾನು ಬಿಜೆಪಿಯವನಾಗಿ ಸಿಎಂ ಜತೆ ಮಾತನಾಡಿದ್ದೇನೆ. ಮೀಸಲಾತಿ ಸಿಗುವ ಬಗ್ಗೆ ನನಗೆ ನಂಬಿಕೆ ಇದೆ. ಪಾದಯಾತ್ರೆಯಲ್ಲಿ ಸ್ವಾಮೀಜಿ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಸುವರ್ಣಸೌಧ ಮುತ್ತಿಗೆ ಅವಶ್ಯಕತೆ ಇಲ್ಲ ಎಂದು ಎನ್ನಿಸುತ್ತಿದೆ. ಏಕೆಂದರೆ ಡಿ.22ಕ್ಕೆ ಹೋರಾಟ ಆಗಲ್ಲ, ಅದು ವಿಜಯೋತ್ಸವ ಆಗಲಿದೆ. ಸರ್ಕಾರ ಮೀಸಲಾತಿ ನೀಡುವ ನಂಬಿಕೆ ಇದೆ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಮೀಸಲಾತಿ ಹೋರಾಟದ ಕೊನೆಯ ಹಂತ ಇದಾಗಿದೆ. ಇದರಲ್ಲಿ ಮಾಡು ಇಲ್ಲವೇ ಮಡಿ ಎಂಬ ಸಂದೇಶವಿದೆ. ಆದರೆ ಮೀಸಲಾತಿ ಪಡೆದೇ ಮಡಿಯಬೇಕು. ಬೆಂಗಳೂರಿನವರೆಗೆ ನಾವು ಪಾದಯಾತ್ರೆ ಮಾಡಿದ್ದೆವು. ಆದರೆ ಇಷ್ಟೆಲ್ಲ ಮಾಡಿದರೂ ನಿಮಗೆ ಕನಿಕರ ಇಲ್ಲ. ಮೀಸಲಾತಿ ನೀಡುತ್ತೇವೆ ಎಂದು ಒಮ್ಮೆಯಲ್ಲ 4 ಬಾರಿ ಸಿಎಂ ಆಶ್ವಾಸನೆ ನೀಡಿದ್ದರು. ಆದರೂ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಮಾತನಾಡಿ, ಮೀಸಲಾತಿ ನೀಡುತ್ತೇವೆ ಎಂದು ಸಿಎಂ ನನಗೆ ಕಿವಿಯಲ್ಲಿ ಹೇಳಿದ್ದಾರೆ. ನನ್ನ ವಿರೋಧ ಕಟ್ಟಿಕೊಂಡರೆ ಏನಾಗುತ್ತದೆ ಅಂತ ಸಿಎಂಗೆ ಗೊತ್ತಿದೆ. ನಾನು ಮಂತ್ರಿಯಾಗಲು ಹೋರಾಟ ಮಾಡಿಲ್ಲ, ನಮ್ಮನ್ನು ಪಕ್ಷದಿಂದ ಹೊರಹಾಕಿದರೆ ಅಲ್ಲೋಲಕಲ್ಲೋಲ ಆಗುತ್ತದೆ. ಮೀಸಲಾತಿ ಕೊಡದಿದ್ದರೆ ಬೊಮ್ಮಾಯಿ ಅವರನ್ನು ವಿಧಾನಸೌಧದ ಹೊರಗೆ ಬಿಡುವುದೇ ಇಲ್ಲ ಎಂದು ಎಚ್ಚರಿಕೆ ನೀಡಿದರು.‌

ಇದನ್ನೂ ಓದಿ | Lehar Singh | ದೆಹಲಿ ಹಾಟ್‌ ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇಯಲ್ಲಿ ‘ಕರಕುಶಲ ಗ್ರಾಮ’ ಅಭಿವೃದ್ಧಿ ಆಗಲಿ

Exit mobile version