Site icon Vistara News

Panchamasali Reservation | ಪದೇಪದೆ ಗಡುವು ನೀಡುವ ಸ್ವಾಮೀಜಿ, ಯತ್ನಾಳ್‌ ವಿರುದ್ಧ ಸಿ.ಸಿ ಪಾಟೀಲ್‌, ನಿರಾಣಿ ಆಕ್ರೋಶ

CC Patil, Murugesh Nirani

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ೨ಎ ಪ್ರವರ್ಗದಡಿಯೇ ಮೀಸಲಾತಿ (Panchamasali Reservation) ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಪಂಚಮಸಾಲಿ ಸಮುದಾಯದ ಇಬ್ಬರು ಪ್ರಭಾವಿ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ತಕ್ಷಣವೇ ಈಡೇರಿಸಬೇಕು ಆಗ್ರಹಿಸಿ ಗಜೆಟ್‌ ನೋಟಿಫಿಕೇಶನ್‌ಗೆ ಜನವರಿ ೧೨ರ ಗಡುವು ನೀಡಿದ್ದ ಸ್ವಾಮೀಜಿ, ಜನವರಿ ೧೩ರಂದು ಶಿಗ್ಗಾಂವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದರು. ಇದೀಗ ಜನವರಿ ೧೪ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಗೊಂಡಿದೆ. ಇದಕ್ಕೆ ಸಂಬಂಧಿಸಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಮತ್ತು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರು ಸಿಡಿದೆದ್ದಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರಾದ ಸಿ.ಸಿ. ಪಾಟೀಲ್‌ ಮತ್ತು ನಿರಾಣಿ ಅವರು ಈ ಪ್ರತಿಭಟನೆ, ಗಡುವು ನೀಡುವುದು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕೃತಿ ಸುಟ್ಟಿರುವುದಕ್ಕೆ ಸಿ.ಸಿ. ಪಾಟೀಲ್‌ ಖಂಡನೆ
ʻʻ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವುದರಲ್ಲಿ ವಿಫಲರಾಗಿದ್ದಾರೆ ಎಂದು ಸಿಎಂ ಶಿಗ್ಗಾಂವಿ ಮನೆ ಬಳಿ ಪ್ರತಿಭಟನೆ ಮಾಡಿ ಸಿಎಂ ಪ್ರತಿಮೆ ಸುಟ್ಟು ಹಾಕಿರುವುದನ್ನು ಖಂಡಿಸುತ್ತೇವೆʼʼ ಎಂದು ಸಿ.ಸಿ. ಪಾಟೀಲ್‌ ಹೇಳಿದರು.

ಕಾಂಗ್ರೆಸ್‌ ನಾಯಕರಾದ ವಿನಯ ಕುಲಕರ್ಣಿ, ವಿಜಯಾನಂದ ಕಾಶೆಪ್ಪನವರ್ ಅವರದೇ ಸರಕಾರ ಈ ಹಿಂದೆ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಬಾರದು ಎಂದು ಹೇಳಿದ್ದನ್ನು ಮರೆಯಬಾರದು. ಅಂಥವರ ಜತೆ ಸೇರಿಕೊಂಡು ನಮ್ಮದೇ ಪಕ್ಷದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹೇಳಿಕೆ ನೀಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಸಿ.ಟಿ. ಪಾಟೀಲ್‌ ಹೇಳಿದರು.

ʻʻಸ್ವಾಮೀಜಿ ಅವರು ಪದೇಪದೆ ಸರ್ಕಾರಕ್ಕೆ ಗಡುವು ಕೊಡುವುದು ಸರಿಯಲ್ಲ. ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದೆ. ನಾವು ಕೂಡಾ ಅದಕ್ಕೆ ಒತ್ತಡ ಹಾಕುತ್ತಿದ್ದೇವೆ. ಸಿಎಂ ಅವರಿಗೆ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಯೋಚಿಸುವ ಕಾಳಜಿ ಇದೆʼʼ ಎಂದು ಹೇಳಿರುವ ಸಿ.ಸಿ. ಪಾಟೀಲ್‌, ಸಮುದಾಯಕ್ಕೆ ಮೀಸಲಾತಿ ಸಿಗುವ ಕಾಲ ಹತ್ತಿರ ಬಂದಿರುವಾಗ, ಹೋರಾಟ ಕೊನೆ ಹಂತಕ್ಕೆ ಫಲಶ್ರುತಿ ಬಂದಾಗ ಈ ರೀತಿ ಸಿಎಂ ಮನೆ ಮುತ್ತಿಗೆ ಹಾಕುವುದರಿಂದ ತಪ್ಪು ಸಂದೇಶ ಹೋಗುತ್ತದೆʼʼ ಎಂದರು.

ʻʻಸರ್ಕಾರ ಮತ್ತು ಸಿಎಂ ಸಮುದಾಯಕ್ಕೆ ಮೀಸಲಾತಿ ಕೊಡುವ ಬದ್ಧತೆ ಹೊಂದಿದ್ದಾರೆ ಎಂದು ಸಮುದಾಯದ ಜನತೆಗೆ ತಿಳಿಸಲು ಇಚ್ಛಿಸುತ್ತೇನೆ. ಶುಕ್ರವಾರ ನಡೆದ ನಡೆಯಿದ ಘಟನೆ ತೀವ್ರ ನೋವಾಗಿದೆʼʼ ಎಂದರು ಸಿ.ಸಿ. ಪಾಟೀಲ್‌. ಮುಖ್ಯಮಂತ್ರಿಗಳು ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸಿಯೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಸಚಿವ ಮುರುಗೇಶ್ ನಿರಾಣಿ ಹೇಳಿದ್ದೇನು?
ʻʻವೀರಶೈವ, ಲಿಂಗಾಯತ ಸಮುದಾಯಕ್ಕೆ 2ಎ ಪ್ರವರ್ಗದಡಿ ಮೀಸಲಾತಿ ಕೊಡಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಈ ಹೋರಾಟದ ಹಿನ್ನೆಲೆಯಲ್ಲೇ ಬಿಎಸ್‌ವೈ ಸಿಎಂ ಆಗಿದ್ದಾಗ ಸಂಪುಟ ಉಪಸಮಿತಿ ಮಾಡಿದರುʼʼ ಎಂದು ಮುರುಗೇಶ್‌ ನಿರಾಣಿ ನೆನಪಿಸಿದರು.

ʻʻ2016ರಲ್ಲಿ ಕಾಂತರಾಜು ಸಮಿತಿ ವರದಿ ಕೊಟ್ಟಾಗ ಅದರಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಪ್ರವರ್ಗದಡಿ ಮೀಸಲಾತಿ ಕೊಡಲು ಬರುವುದಿಲ್ಲ ಎಂದು ಹೇಳಲಾಗಿತ್ತು. ಇಂದು ಹೋರಾಟ ಮಾಡುವವರು ಅಂದು ಎಲ್ಲಿ ಮಲಗಿದ್ದರುʼʼ ಎಂದು ನಿರಾಣಿ ಪ್ರಶ್ನಿಸಿದರು.

ಸಿಎಂಗೆ ಬದ್ಧತೆ ಇದೆ, ಮೀಸಲಾತಿ ಕೊಟ್ಟೇ ಕೊಡ್ತಾರೆ
ಪ್ರವರ್ಗ ೨ಸಿ ಮತ್ತು ೨ಡಿ ಸ್ಥಾಪನೆಯ ಮೂಲಕ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಮೇಲ್ವರ್ಗದ ಬಡವರ ಮೀಸಲಾತಿ ಶೇಕಡಾ ೧೦ ಇದ್ದರೂ ಅದರಲ್ಲಿ ೪ರಿಂದ ೫% ಮಾತ್ರ ಅವಶ್ಯಕತೆ ಇದೆ. ಉಳಿದುದನ್ನು ಬೇರೆ ಸಮುದಾಯಕ್ಕೆ ನೀಡುವುದು ಎಂದು ತೀರ್ಮಾನಿಸಲಾಗಿದೆ. ಈ ರೀತಿ ಹಂಚುವುದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲʼʼ ಎಂದು ನಿರಾಣಿ ಹೇಳಿದರು.

ʻʻಇಷ್ಟೆಲ್ಲಾ ಪ್ರಯತ್ನ ಮಾಡಿದರೂ ಕೂಡ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡ್ತಿದ್ದಾರೆ. ಇದು ಪಕ್ಕಾ ರಾಜಕಾರಣ ಅಂತ ಗೊತ್ತಾಗಿದೆ. ಚುನಾವಣೆ ಬಂದ ಸಂದರ್ಭದಲ್ಲಿ ಮಾತ್ರ ಇರು ಯಾಕೆ ನೆನಪಾಗ್ತಿದೆ? ಎಸ್ಸಿ, ಎಸ್ಟಿ, ಒಕ್ಕಲಿಗ ಸಮುದಾಯದವರು ಶಾಂತಿಯುತ ಮನವಿ ಮಾಡಿದ್ದಾರೆ. ಲಿಂಗಾಯತ ವೀರಶೈವ ಸಮುದಾಯವನ್ನು ಮಾತ್ರ ಒಡೆದು ಆಳುವ ಕೆಲಸವಾಗುತ್ತಿದೆʼʼ ಎಂದು ಬೇಸರ ವ್ಯಕ್ತಪಡಿಸಿದರು ನಿರಾಣಿ.

ಇದನ್ನೂ ಓದಿ | Pachamasali Reservation | ಉಗ್ರ ಸ್ವರೂಪ ಪಡೆದ ಪಂಚಮಸಾಲಿ ಮೀಸಲು ಹೋರಾಟ: ನಾಳೆಯಿಂದ ಬೆಂಗಳೂರಿಗೆ ಶಿಫ್ಟ್‌

Exit mobile version