Site icon Vistara News

Panchamasali reservation | 24 ಗಂಟೆ ಗಡುವು ಸರಿಯಲ್ಲ, 24 ಗಂಟೆಯಲ್ಲಿ ಏನೂ ಆಗಲ್ಲ: ಯತ್ನಾಳ್‌, ಸ್ವಾಮೀಜಿಗೆ ಸಿ.ಸಿ. ಪಾಟೀಲ್‌ ತಿರುಗೇಟು

CC patil- Jaya mruthyunjaya swameeji

ಬೆಂಗಳೂರು: ಪಂಚಮಸಾಲಿ ಮೀಸಲಾತಿ (Panchamasali reservation) ನಿರ್ಧಾರಕ್ಕೆ ೨೪ ಗಂಟೆಗಳ ಗಡುವು ನೀಡಿದ್ದು ಸರಿಯಲ್ಲ. ಕೇವಲ ೨೪ ಗಂಟೆಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಗಡುವನ್ನು ಹಿಂದಕ್ಕೆ ಪಡೆಯಬೇಕು ಎಂದು ಲೋಕೋಪಯೋಗಿ ಖಾತೆ ಸಚಿವ ಸಿ.ಸಿ. ಪಾಟೀಲ್‌ ಹೇಳಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಮೇಲ್ವರ್ಗದ ಬಡವರಿಗೆ ಮೀಸಲಾದ ಶೇಕಡಾ ೧೦ ಮೀಸಲಾತಿಯಲ್ಲಿ ಒಂದು ಪಾಲು ನೀಡುವುದು ಮತ್ತು ಪ್ರವರ್ಗ ಡಿ ಎಂಬ ಹೊಸ ಪ್ರವರ್ಗ ರೂಪಿಸುವ ರಾಜ್ಯ ಸರ್ಕಾರದ ಪ್ರಸ್ತಾವವನ್ನು ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ತಿರಸ್ಕರಿಸಿತ್ತು. ಈ ವಿಚಾರದಲ್ಲಿ ಕಾನೂನಿನ ಗೊಂದಲಗಳಿವೆ ಎಂದು ಅಭಿಪ್ರಾಯಪಟ್ಟ ಕಾರ್ಯಕಾರಿಣಿ ಸರ್ಕಾರದ ನಿರ್ಧಾರವನ್ನು ಒಪ್ಪದಿರಲು ನಿರ್ಧರಿಸಿತು.

ಇದಕ್ಕೆ ಪ್ರತಿಯಾಗಿ ಪ್ರವರ್ಗ ೨ಎ ಅಡಿಯಲ್ಲೇ ಮೀಸಲಾತಿ ನೀಡಬೇಕು, ಇದು ಸಾಧ್ಯವೇ ಇಲ್ಲವೇ ಎನ್ನುವುದನ್ನು ೨೪ ಗಂಟೆಯಲ್ಲಿ ಸ್ಪಷ್ಟಪಡಿಸಬೇಕು ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದರು. ಮೀಸಲಾತಿಗೆ ಸಂಬಂಧಿಸಿ ಜನವರಿ ೧೨ರೊಳಗೆ ಗಜೆಟ್‌ ನೋಟಿಫಿಕೇಶನ್‌ ಪ್ರಕಟಿಸಬೇಕು. ಪ್ರಕಟಿಸದೆ ಹೋದರೆ ಜನವರಿ ೧೩ರಂದು ಮುಖ್ಯಮಂತ್ರಿಗಳ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ೩೦೦೦೦ ಜನರನ್ನು ಸೇರಿಸಿ ದೊಡ್ಡ ಮಟ್ಟದ ಹೋರಾಟವನ್ನು ಮರು ಆರಂಭಿಸಲಾಗುವುದು ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದರು.

ಸಿ.ಸಿ. ಪಾಟೀಲ್‌ ಹೇಳುವುದೇನು?
ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಟಿ. ಪಾಟೀಲ್‌ ಅವರು ಸರ್ಕಾರ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಧನಾತ್ಮಕ ಅಭಿಪ್ರಾಯವನ್ನು ಹೊಂದಿದೆ. ಆದರೆ, ಈಗ ೨೪ ಗಂಟೆಗಳ ಗಡುವನ್ನೆಲ್ಲ ನೀಡಬಾರದು ಎಂದು ಅವರು ನಾಯಕರಿಗೆ ಮನವಿ ಮಾಡಿದರು.

ʻʻಪಂಚಮಸಾಲಿ ಮೀಸಲಾತಿ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಕೇಳಲಾಗಿತ್ತು. ಆಯೋಗವು ಪೂರಕ ಅಧ್ಯಯನ ನಡೆಸಿ ಮಧ್ಯಂತರ ವರದಿ ಕೊಟ್ಟಿದೆ. ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಮಧ್ಯಂತರ ವರದಿ ಕೊಡಲಾಗಿದೆ. ಎಲ್ಲ ಜಿಲ್ಲೆಗಳಿಗೂ ಭೇಟಿ ಕೊಟ್ಟು ಅಧ್ಯಯನ ಮಾಡಬೇಕಿದ್ದರಿಂದ ಆಯೋಗ ಮಧ್ಯಂತರ ವರದಿ ಕೊಡೋದು ವಿಳಂಬ ಆಯಿತು. ಡಿಸೆಂಬರ್‌ 29ರಂದು ಮಧ್ಯಂತರ ವರದಿ ಆಧರಿಸಿ ಸಂಪುಟ ಸಭೆಯಲ್ಲಿ ಹೊಸ ಪ್ರವರ್ಗ ೨ಡಿ ಸೃಷ್ಟಿಗೆ ನಿರ್ಧಾರ ಕೈಗೊಳ್ಳಲಾಗಿತ್ತುʼʼ ಎಂದು ಘಟನಾವಳಿಗಳನ್ನು ವಿವರಿಸಿದರು ಸಿ.ಸಿ. ಪಾಟೀಲ್‌.

ʻʻಮೀಸಲಾತಿ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಭಾವನಾತ್ಮಕವಾಗಿ ಮಾತಾಡಿದರು. ನಂತರ ಹೋರಾಟಗಾರರನ್ನು ಭೇಟಿ ಮಾಡಿ ಸಂಪುಟದ ನಿರ್ಧಾರ ತಿಳಿಸಲಾಯಿತು. ಸಮುದಾಯಕ್ಕೆ ಕಾನೂನಾತ್ಮಕ ಮೀಸಲಾತಿ ಕೊಡೋದು ಸಿಎಂ ಅವರ ಉದ್ದೇಶ. ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬಾರದು ಅನ್ನುವ ಉದ್ದೇಶ ಇರಲಿಲ್ಲʼʼ ಎಂದು ಸ್ಪಷ್ಟಪಡಿಸಿದರು.

ಸ್ವಾಮೀಜಿಗಳಿಗೆ ಮಾತುಕತೆಗೆ ಆಹ್ವಾನ
ʻʻಸ್ವಾಮೀಜಿಗಳು 24 ಗಂಟೆ ಗಡುವು ಕೊಟ್ಟಿದ್ದು ಸರಿಯಲ್ಲ. ೨೪ ಗಂಟೆಯೊಳಗೆ ಯಾವುದೇ ತೀರ್ಮಾನ ಕೈಗೊಳ್ಳಲು ಆಗಲ್ಲ. ಸ್ವಾಮೀಜಿಗಳು, ಹೋರಾಟಗಾರರು ಸರ್ಕಾರದ ಜತೆ ಚರ್ಚೆ ನಡೆಸಲಿ. ಬನ್ನಿ ಚರ್ಚೆ ಮಾಡೋಣ, ಸಿಎಂ ಜತೆ ಸಮಯ ನಿಗದಿ ಮಾಡ್ತೇವೆʼʼ ಎಂದು ಸಿ.ಸಿ. ಪಾಟೀಲ್‌ ಅವರು ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಮಾತುಕತೆಗೆ ಆಹ್ವಾನಿಸಿದರು.

ಗಡುವು ವಾಪಸ್ ಪಡೆಯಲು ಮನವಿ
ʻʻಮೀಸಲಾತಿ ವಿಚಾರದಲ್ಲಿ ಸರ್ಕಾರ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ. ನಾವು ಸಮುದಾಯಕ್ಕೆ ಸರಿಯಾಗಿಯೇ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಂಪುಟ ನಿರ್ಧಾರದ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಿದ್ದೇವೆ. ಇದರಲ್ಲಿ ನಾವು ವಿಫಲವಾಗಿಲ್ಲ. ಇದನ್ನು ಅರ್ಥ ಮಾಡಿಕೊಂಡು ಸ್ವಾಮೀಜಿಗಳು 24 ಗಂಟೆ ಗಡುವು ವಾಪಸ್ ಪಡೆಯಲಿ. ವಾಪಸ್ ಪಡೆದು ನಮ್ಮ ಜತೆಗೆ ಮಾತುಕತೆ ಬರಲಿʼʼ ಎಂದು ಮನವಿ ಮಾಡಿದರು.

ಇದನ್ನೂ ಓದಿ | Panchamasali Reservation | 2ಡಿ ಮೀಸಲು ಬೇಡ, 2ಎನಲ್ಲೇ ಕೊಡ್ಬೇಕು: ಜ.12ರೊಳಗೆ ಘೋಷಿಸದಿದ್ದರೆ ಮತ್ತೆ ಹೋರಾಟ

Exit mobile version