ಬೆಳಗಾವಿ: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮುದಾಯದ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ. ಇಂದು ಸಂಜೆ ಸುವರ್ಣ ಸೌಧದ ಬಳಿ ಇರುವ ರಾಘವೇಂದ್ರ ಲೇಔಟ್‌ನಲ್ಲಿ ಬೃಹತ್ ಪಂಚಲಕ್ಷ ವಿರಾಟ ಸಮಾವೇಶ (Panchamasali reservation) ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಹಿರೇಬಾಗೇವಾಡಿಯಿಂದ ಬೃಹತ್ ಪಾದಯಾತ್ರೆಗೆ ಕೂಡಲ ಸಂಗಮ ಮಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು.
ಶ್ರೀಗಳು ಡಿಸೆಂಬರ್ 19ರಿಂದ ಸವದತ್ತಿಯಿಂದ ಪಾದಯಾತ್ರೆ ಆರಂಭ ಮಾಡಿದ್ದು, ಡಿ. ೨೧ರಂದು (ಬುಧವಾರ) ಅದುಹಿರೇಬಾಗೇವಾಡಿ ತಲುಪಿತ್ತು. ಗುರುವಾರ ಮುಂಜಾನೆ ಅಲ್ಲಿಂದ ಪಾದಯಾತ್ರೆ ಆರಂಭವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ರಾಘವೇಂದ್ರ ಲೇಔಟ್ ತಲುಪಲಿದೆ.
ಹಿರೇಬಾಗೇವಾಡಿಯ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅರವಿಂದ ಬೆಲ್ಲದ, ಬಸವನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ವಿನಯ ಕುಲಕರ್ಣಿ ಅವರು ಬೃಹತ್ ಪಾದಯಾತ್ರೆಯಲ್ಲಿ ಶ್ರೀಗಳಿಗೆ ಸಾಥ್ ನೀಡಿದ್ದಾರೆ. ಮೆರವಣಿಗೆ ಸಾಗುವ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಭದ್ರತೆ, ಪೊಲೀಸರಿಗೆ ಮಾಸ್ಕ್
ಪಾದಯಾತ್ರೆಯಲ್ಲಿ ಮತ್ತು ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರಬಹುದು ಎಂಬ ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಸುಮಾರು 1500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಜತೆಗೆ ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಬಂದೋಬಸ್ತ್ ಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ.
ಐದು ಜನ ಎಸ್‌ಪಿ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಸಮಾವೇಶದ ಬಂದೋಬಸ್ತ್ ನಡೆಯಲಿದೆ. ಸಮಾವೇಶಕ್ಕೆ 1500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ, ಧಾರವಾಡ ಸೇರಿದಂತೆ ಹೊರಗಡೆ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿ ಕರೆಯಿಸಿಕೊಂಡಿದ್ದೇವೆ. ಪಾರ್ಕಿಂಗ್ ವ್ಯವಸ್ಥೆ, ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲ ಕಡೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ, ಸುವರ್ಣ ಸೌಧ ಮುತ್ತಿಗೆ ಕುರಿತು ಆಯೋಜಕರ ಜತೆಗೆ ಮಾತನಾಡಿದ್ದೇವೆ. ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತಾ ವಹಿಸಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Panchamasali reservation | ಸಿಎಂ ಬೊಮ್ಮಾಯಿ ಅವರು ಇವತ್ತೇನಾದ್ರೂ ಆಟ ಆಡಿದ್ರೆ ಪರಿಣಾಮ ಗಂಭೀರ: ಯತ್ನಾಳ್ ಎಚ್ಚರಿಕೆ