Site icon Vistara News

Panchamasali Reservation | ಪಂಚಮಸಾಲಿ ಮೀಸಲಾತಿ ಪ್ರಮಾಣ ಪ್ರಕಟಿಸದಿದ್ದರೆ ಜ.13ಕ್ಕೆ ಸಿಎಂ ನಿವಾಸದ ಮುಂದೆ ಸತ್ಯಾಗ್ರಹ

jaya mrutyunjaya swamiji coutions govt over panchamasali-reservation

ಹುಬ್ಬಳ್ಳಿ: ಪಂಚಮಸಾಲಿ ಸಮುದಾಯಕ್ಕೆ ಒಬಿಸಿ 2ಡಿ ಮೀಸಲಾತಿ ನೀಡುವ (Panchamasali Reservation) ಸಚಿವ ಸಂಪುಟದ ತೀರ್ಮಾನ ಅಸ್ಪಷ್ಟವಾಗಿದೆ. ಹೀಗಾಗಿ ಜನವರಿ 12ರೊಳಗೆ ಮೀಸಲಾತಿ ಪ್ರಮಾಣ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಜನವರಿ 13ರಂದು ಶಿಗ್ಗಾಂವಿಯ ಸಿಎಂ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿ, ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದಲೇ ಹೋರಾಟ ಪ್ರಾರಂಭಿಸುತ್ತೇವೆ. ಚುನಾವಣೆ ಹತ್ತಿರವಿರುವ ಕಾರಣ ಸರ್ಕಾರ ಕೂಡಲೇ ಮೀಸಲಾತಿ ಪ್ರಕಟಿಸಬೇಕು. ಪಂಚಮಸಾಲಿ ಸಮಾಜಕ್ಕೆ ಏನು ಕೊಡುತ್ತಿದ್ದೀರಿ ಎಂಬುವುದನ್ನು ದಾಖಲೆ ಮೂಲಕ ಕೊಡಬೇಕು. ಇಲ್ಲದಿದ್ದರೆ ಸತ್ಯಾಗ್ರಹದ ಮೂಲಕ‌ ಸಂಕ್ರಾಂತಿ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಮಾತು ಕೇಳಿ ಸಿಕ್ಕಾಕಿಕೊಂಡ ಕಾಟನ್‌ಪೇಟೆ ಇನ್ಸ್‌ಪೆಕ್ಟರ್‌: ಅಮಾನತು ಸಾಧ್ಯತೆ

ಸಿಎಂಗೆ ಪರಮಾಧಿಕಾರವಿದೆ, ಹೀಗಾಗಿ ಅವರೇ ಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ಎಲ್ಲ ಹೋರಾಟಕ್ಕೂ ಸಿಎಂ ಬೆಂಬಲ ಕೊಟ್ಟಿದ್ದಾರೆ, ಹೀಗಾಗಿ ಅವರೇ ಮೀಸಲಾತಿ ಪ್ರಕಟಿಸಬೇಕು. ಮುರುಗೇಶ್ ನಿರಾಣಿ 2ಡಿ ಮೀಸಲಾತಿಯನ್ನು ಸ್ವಾಗತಿಸಿರುವುದು ಅವರ ವೈಯಕ್ತಿಕ ವಿಚಾರ. ಒಬ್ಬರು, ಇಬ್ಬರ ನಿಲುವು ಸಂಪೂರ್ಣ ಸಮಾಜದ ಅಭಿಪ್ರಾಯವಲ್ಲ. ಹೊಟ್ಟೆತುಂಬಿದವರು ಏನು ಬೇಕಾದರೂ ಹೇಳುತ್ತಾರೆ. ನೈಜ ಹೋರಾಟ ಮಾಡಿದವರ ಅಭಿಪ್ರಾಯ ಮುಖ್ಯವಾಗುತ್ತದೆ ಎಂದು ಹೇಳಿದರು.

ನಾವು ಒಬಿಸಿ ೨ಎ ಮೀಸಲಾತಿ ಕೇಳಿದ್ದೆವು. ಆದರೆ, ಸರ್ಕಾರ 2ಡಿ ಪ್ರವರ್ಗ ಸೃಷ್ಟಿಸಿದೆ. ಮೀಸಲಾತಿ ಪ್ರಮಾಣ ನಿಗದಿ ಮಾಡಿಲ್ಲ. ಹೀಗಾಗಿ ಜನವರಿ 13ರೊಳಗೆ ಸ್ಪಷ್ಟ ಅಧಿಸೂಚನೆ ಪ್ರಕಟಿಸದಿದ್ದರೆ, ಪಂಚಮಸಾಲಿ ಜನರಿಗೆ ಸರ್ಕಾರದ ನಡೆಯ ಕುರಿತು ತಿಳಿಹೇಳುತ್ತೇವೆ. ಸಿಎಂ ಕೈಯಲ್ಲಿ ಆಗದಿದ್ದರೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಿ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ | Siddaramaiah Vs BJP : ಕಾಂಗ್ರೆಸ್‌ನಿಂದ ಬಿಜೆಪಿ ಕಳ್ಳಮಾರ್ಗ ಪುಸ್ತಕ; ಸಿದ್ದು ವಿರೋಧಿ ಪುಸ್ತಕಕ್ಕೆ ಕೌಂಟರ್‌

Exit mobile version