Site icon Vistara News

Panchamasali Reservation : ಪಂಚಮಸಾಲಿ ಹೋರಾಟ ಮತ್ತೆ ತೀವ್ರ; ಅಧಿವೇಶನ ಮುಗಿಯುವ ಮುನ್ನ ಮೀಸಲು ಘೋಷಣೆಗೆ ಆಗ್ರಹ

Panchamasali

#image_title

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಮೂವತ್ತೊಂದು ದಿನಗಳಿಂದ ನಡೆಯುತ್ತಿರುವ 2ನೇ ಹಂತದ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಚುರುಕುಗೊಂಡಿದೆ. ವಿಧಾನಮಂಡಲದ ಅಧಿವೇಶನ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮೀಸಲಾತಿ ಹೋರಾಟವನ್ನು ಮತ್ತೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಜತೆಗೆ ಅಧಿವೇಶನ ಮುಗಿಯುವ ಮೊದಲು ಮೀಸಲು ಘೋಷಣೆ ಮಾಡಬೇಕು ಎಂದು ಗಡುವು ನೀಡಲಾಗಿದೆ.

ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮುಂದಿನ ಹೋರಾಟದ ರೂಪುರೇಷೆಗಳನ್ನು ತೆರೆದಿಟ್ಟರು.

ಕಳೆದ ಒಂದು ವರ್ಷದಿಂದಲೇ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಲಕ್ಷಾಂತರ ಜನರು ಭಾಗವಹಿಸಿದ್ದಾರೆ. ನಮ್ಮ ಸಮುದಾಯಕ್ಕೆ ೨ಎ ಮೀಸಲಾತಿ ನೀಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದೇವೆ. ಇಂಥ ಹೋರಾಟ ಕಳೆದ ವರ್ಷದ ಡಿಸೆಂಬರ್‌ ೨೯ರಂದು ಒಂದು ನಿರ್ಧಾರಕ ಹಂತಕ್ಕೆ ಬಂದಿತ್ತು. ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಹೋರಾಟ ತೀವ್ರ ಘಟ್ಟಕ್ಕೆ ತಲುಪಿದಾಗ ಮುಖ್ಯಮಂತ್ರಿಗಳು ಚಾಣಾಕ್ಷತೆಯ ನಡೆ ಮೂಲಕ ಉತ್ತರ ನೀಡಿದರು ಎಂದು ನೆನಪಿಸಿದರು.

ಹಿಂದುಳಿದ ವರ್ಗಗಳ ಆಯೋಗದ ವರದಿಯ ಆಧಾರದಲ್ಲಿ ೨ಸಿ ಎಂಬ ಹೊಸ ಪ್ರವರ್ಗವನ್ನು ಸೃಷ್ಟಿ ಮಾಡಿ ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೆಂದು ನಿಗದಿ ಮಾಡಿರುವ ಶೇ. ೧೦ ಮೀಸಲಾತಿಯಲ್ಲಿ ಪಾಲು ನೀಡಲಾಗುವುದು ಎಂದು ಘೋಷಿಸಿದರು.ನಾವು ಕೂಡಾ ಕಾನೂನು ಮೂಲಕವೇ ಬರಲಿ ಎಂದು ಕಾದಿದ್ದೆವು. ಆದರೆ, ಈ ರೀತಿಯ ಮೀಸಲಾತಿಯಿಂದ ಸಮುದಾಯಕ್ಕೆ ಯಾವುದೇ ಲಾಭವಾಗುವುದಿಲ್ಲ ಎನ್ನುವುದು ನಮಗೆ ಗೊತ್ತಾಗಿದೆ. ಹಾಗಾಗಿ, ೨ಎ ಪ್ರವರ್ಗದಡಿಯೇ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ.

ಮುಖ್ಯಮಂತ್ರಿಯವರು ಅಧಿವೇಶನದ ಸಮಯದಲ್ಲಿ ಯಾರೂ ಮಾಡದ ಪ್ರಮಾಣ ಮಾಡಿದ್ದರು, ನಮ್ಮ ಸಮುದಾಯದವರಿಗೆ ಭಾವನಾತ್ಮಕ ಪ್ರಮಾಣ ಮಾಡಿದರು. ದೇವ್ರ ಮೇಲೆ ಆಣೆ ಮಾಡಿದ್ರು, ಕೊನೆಗೆ ತಮ್ಮ ತಾಯಿ ಮೇಲೆಯೂ ಆಣೆ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಡಿ ಅಂದಿದ್ದರು. ಅವರ ಮಾತು ಕೇಳಿ ನಾವು ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆವು. ಆದರೆ, ಅವರು ಸಚಿವ ಸಂಪುಟದಲ್ಲೂ ೨ಎ ಮೀಸಲಾತಿ ಬಗ್ಗೆ ಮಾತನಾಡಲಿಲ್ಲ. ಯಾವುದೇ ಚಕಾರವನ್ನು ಎತ್ತಿಲ್ಲ ಎಂದು ನೆನಪಿಸಿದರು.

ಇದೆಲ್ಲವನ್ನೂ ಗಮನಿಸಿ ನಾವು ಮತ್ತೆ ಚಳವಳಿ ಶುರು ಮಾಡಿದ್ದೇವೆ. ಕಳೆದ ಮೂವತ್ತೊಂದು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, ಸರ್ಕಾರವಾಗಲೀ, ಸಚಿವರಾಗಲೀ, ಮುಖ್ಯಮಂತ್ರಿಗಳಾಗಲೀ ತುಟಿ ಬಿಚ್ಚುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಜಯಮೃತ್ಯುಂಜಯ ಸ್ವಾಮೀಜಿ.

ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ

ʻʻನೀವು ಪದೇಪದೆ ಸಮುದಾಯವನ್ನು ದಾರಿ ತಪ್ಪಿಸುವುದು ಒಳ್ಳೆಯದಲ್ಲಿ. ಹಿಂಗೇ ಮಾಡಿದ್ರೆ ಮುಂದೆ ಎಲೆಕ್ಷನ್ ನಲ್ಲಿ ನಿಮಗೆ ಹೊಡೆತ ಬೀಳುತ್ತದೆ. ನಮಗೆ ಅನ್ಯಾಯ ಮಾಡಿದ್ರೆ ಗಂಡಾಂತರ ತಪ್ಪಿದ್ದಲ್ಲʼʼ ಎಂದು ಎಚ್ಚರಿಕೆ ನೀಡಿದ ಅವರು, ʻʻಎರಡು ವರ್ಷದಿಂದ ನಂಬಿದ್ದೀವಿ.. ತಾಯಿ ಮೇಲೆ ಆಣೆ ಮಾಡಿದ್ರೂ ಮೋಸ ಮಾಡಿದ್ರಿ.. 224 ಕ್ಷೇತ್ರದಲ್ಲೂ ನಮ್ಮ ಸಮುದಾಯದವರು ಇದ್ದಾರೆ. ಕರ್ನಾಟಕದಲ್ಲಿ 15% ಮತದಾರರಿದ್ದೇವೆ. ನಮಗೆ ಮೀಸಲಾತಿ ಕೊಡದಿದ್ರೆ ನಿಮಗೆ ವೋಟಿನ ಮೂಲಕ ಉತ್ತರ ಕೊಡ್ತೀವಿʼʼ ಎಂದು ಹೇಳಿದರು.

ʻʻಕಳೆದ ಬಾರಿ ನಮ್ಮ ಸಮುದಾಯ ನಿಮಗೆ (ಬಿಜೆಪಿ) ಸಪೋರ್ಟ್ ಮಾಡಿದ್ದೆವು. ಆದರೆ ಈ ಬಾರಿ ನಮ್ಮ ಕೈ ಬಿಟ್ರೆ ನಾವೂ ನಿಮ್ಮ ಕೈ ಬಿಡ್ತೀವಿʼʼ ಎಂದು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ಕೊಟ್ಟರು ಜಯ ಮೃತ್ಯುಂಜಯ ಸ್ವಾಮೀಜಿ.

ʻʻನಾವು ಪ್ರಧಾನ ಮಂತ್ರಿಗೆ ಮನವಿ ಮಾಡುತ್ತಿದ್ದೇವೆ. ಅಮಿತ್ ಶಾ ಅವರಿಗೂ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದೇವೆ. ಮೋದಿಯರನ್ನು ನೋಡಿ ನಾವು ಪಕ್ಷಕ್ಕೆ ವೋಟ್ ಹಾಕಿದ್ದೇವೆ. ಹಾಗಾಗಿ ಅವರು ನಮ್ಮ ಸಮಸ್ಯೆಯನ್ನು ಗಮನಿಸಬೇಕುʼʼ ಎಂದು ಆಗ್ರಹಿಸಿದರು ಸ್ವಾಮೀಜಿ.

ಈಗ ನಡೆಯುತ್ತಿರುವ ಬಜೆಟ್‌ ಅಧಿವೇಶನ ಮುಕ್ತಾಯ ಆಗುವುದರೊಳಗೆ ನಮ್ಮ ಹೋರಾಟಕ್ಕೆ ಪ್ರತಿಫಲ ಸಿಗಬೇಕು. ನಮಗೆ ಮೀಸಲಾತಿ ಕೊಡಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಶುರು‌ ಮಾಡುತ್ತೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ಇದನ್ನೂ ಓದಿ : Panchamasali Reservation : ಮೀಸಲಾತಿ ನೀಡದಿದ್ದರೆ 224 ಕ್ಷೇತ್ರದಲ್ಲೂ ಪ್ರವಾಸ : ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

Exit mobile version