Site icon Vistara News

Panchamasali reservation | ರಾಜ್ಯ ಸರ್ಕಾರದ ವಿರುದ್ಧ ಮೋದಿಗೆ ಪತ್ರ ಬರೆದ ಸ್ವಾಮೀಜಿ, ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ

ಪಂಚಮಸಾಲಿ ಮೀಸಲಾತಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ೨ಎ ಅಡಿಯೇ ಮೀಸಲಾತಿ (Panchamasali reservation) ನೀಡಬೇಕು ಎಂದು ಆಗ್ರಹಿಸಿ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡಿರುವ ಎರಡನೇ ಸುತ್ತಿನ ಪ್ರತಿಭಟನೆ ಗುರುವಾರ ಆರನೇ ದಿನಕ್ಕೆ ಕಾಲಿಟ್ಟಿದೆ.

ಈ ನಡುವೆ, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯ ಸರ್ಕಾರವು ತಮಗೆ ಮೀಸಲಾತಿ ಒದಗಿಸುವ ವಿಚಾರದಲ್ಲಿ ಮೀನ ಮೇಷ ಎಣಿಸುತ್ತಿದೆ ಮತ್ತು ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜನವರಿ ೧೬ರಂದು ಅವರು ಮೋದಿ ಅವರಲ್ಲದೆ, ಬಿಜೆಪಿಯ ಹಿರಿಯ ನಾಯಕರಾದ ಅಮಿತ್‌ ಶಾ ಮತ್ತು ಜೆ.ಡಿ. ನಡ್ಡಾ ಅವರಿಗೆ ಪತ್ರ ಬರೆದಿದೆ.

ಈ ವಿಚಾರವನ್ನು ಸ್ವತಃ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ರಾಜ್ಯ ಸರ್ಕಾರ ಸತತವಾಗಿ ನಮಗೆ ಮೋಸ ಮಾಡುತ್ತಿದೆ. ನಮಗೆ ನರೇಂದ್ರ ಮೋದಿಯವರ ಮೇಲೆ ನಂಬಿಕೆಯಿದೆ. ಹೀಗಾಗಿ ಪ್ರಧಾನಿಗಳಿಗೆ ಪತ್ರ ಬರೆದು ನಮ್ಮ ಬೇಡಿಕೆಯನ್ನು ತಿಳಿಸಿದ್ದೇವೆʼʼ ಎಂದು ಹೇಳಿದರು.

ಸ್ವಾಮೀಜಿಯವರು ಪತ್ರದಲ್ಲಿ ಉಲ್ಲೇಖಿಸಿರುವ ಹತ್ತು ವಿಚಾರಗಳು
೧. ಲಿಂಗಾಯತ ಪಂಚಮಸಾಲಿ ಸಮಾಜ ೨ಎ ಮೀಸಲಾತಿಗಾಗಿ ನಾವು ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಹಲವು ಬಾರಿ ನಮಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

೨. ನಮ್ಮ ಸಮುದಾಯ ಯಡಿಯೂರಪ್ಪನವರಿಗೆ ಬೆಂಬಲ ನೀಡಿತು. ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸಿದ್ದೇವೆ.

೩. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದೆ ಇದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

೪. ನಾವು ಕಳೆದ ಬಾರಿ ಬಿಜೆಪಿಗೆ ಬೆಂಬಲ ನೀಡಿದ್ದೆವು. ಆದರೆ ಈ ಬಾರಿಯ ಚುನಾವಣೆಯಲ್ಲಿ ನಾವು ಯಾರಿಗೆ ಬೆಂಬಲ‌ ನೀಡಬೇಕು ಎಂದು ಕಾಲ ಬಂದಾಗ ನಿರ್ಧಾರ ಮಾಡುತ್ತೇವೆ.

೫. ಪಂಚಮಸಾಲಿ ಸಮುದಾಯಕ್ಕೆ ನೀವು ಮೀಸಲಾತಿ ಕಲ್ಪಿಸಿಲ್ಲ ಅಂದರೆ ನಮ್ಮ ಹೋರಾಟ ತೀವ್ರಗೊಳ್ಳಲಿದೆ.

೬. ನಾವು ಇಷ್ಟೊಂದು ಹೋರಾಟ ಮಾಡಿದರೂ ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ಮೇಲೆ ನಮ್ಮ ಸಮುದಾಯ ವಿಶ್ವಾಸ ಕಳೆದುಕೊಂಡಿದೆ.

೭. ಇಷ್ಟೆಲ್ಲ ಘಟನೆಗಳ ಆಚೆಗೂ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆಯಿಟ್ಟಿದ್ದೇವೆ. ಅವರು ನ್ಯಾಯ ಕೊಡಿಸುವ ಭರವಸೆ ಇದೆ.

೮. ಈ ಪತ್ರದ ಮೂಲಕ ನಾವು‌ ನಮ್ಮ ಸಮುದಾಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನೀವು ಕೂಡಲೇ ಇದಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡುತ್ತೇವೆ.

೯. ಮೀಸಲಾತಿ ವಿಚಾರವಾಗಿ ತ್ವರಿತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ನೀವು ಸೂಚನೆ ನೀಡುವಂತೆ ಕೇಳಿಕೊಳ್ಳುತ್ತೇವೆ.

೧೦. ರಾಜ್ಯದ ಎಲ್ಲ ೨೨೪‌ ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ಯಾರಿಗೆ ಬೆಂಬಲ ಕೊಡಬೇಕು ಎಂದು ಚರ್ಚೆ ಮಾಡುತ್ತೇವೆ.

ಪತ್ರದ ಮೂಲಕ ಸ್ವಾಮೀಜಿ ನೀಡಿದ ಎಚ್ಚರಿಕೆ ಸಂದೇಶ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಸ್ವಾಮೀಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ʻʻನಮ್ಮ ಸಮುದಾಯವನ್ನು ಕಡೆಗಣಿಸಿದರೆ ನಾವು‌ ನಿಮ್ಮನ್ನು ಚುನಾವಣೆಯಲ್ಲಿ ಕಡೆಗಣಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಸಮುದಾಯ ನಿಮಗೆ ಉತ್ತರ ನೀಡುತ್ತದೆʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೂಡಲೇ ನಮ್ಮ ಬೇಡಿಕೆ ಈಡೇರಿಸಿ, ಇಲ್ಲ ನಮ್ಮ ದಾರಿ ನಾವು‌ ನೋಡಿಕೊಳ್ಳುತ್ತೇವೆ ಎಂದಿರುವ ಸ್ವಾಮೀಜಿ ಕೆಲವು ನಾಯಕರು ನಮ್ಮ ಸಮುದಾಯಕ್ಕೆ ಮೀಸಲಾತಿಯನ್ನು ತಪ್ಪಿಸುತ್ತಿದ್ದಾರೆ. ಅವರೆಲ್ಲರ ಹೆಸರುಗಳನ್ನು ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾಗಿ ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ | Panchamasali reservation | ಸ್ವಾಮೀಜಿಗಳು ವಿಷಮ ಪರಿಸ್ಥಿತಿ ನಿರ್ಮಿಸಬಾರದು ಎಂದ ಬೊಮ್ಮಾಯಿ; ಪಕ್ಷ ವಿರೋಧಿಗಳ ಬಗ್ಗೆಯೂ ಕ್ರಮ

Exit mobile version