ಬೆಂಗಳೂರು: ʻʻನಾವು ಪ್ರಾಣ ಬೇಕಾದರೂ ಬಿಡಲು ಸಿದ್ಧ. ಆದರೆ, ಮೀಸಲಾತಿ ಬಿಡುವುದಿಲ್ಲ. ನಾವು ವ್ಯಗ್ರರಾಗಬಾರದು ಎಂದಾದರೆ ಪಂಚಮಸಾಲಿ ಸಮುದಾಯಕ್ಕೆ ಶೀಘ್ರವೇ ಮೀಸಲಾತಿ (Panchamasali Reservation) ಒದಗಿಸಬೇಕುʼʼ- ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮಿ ಅವರು ಎಚ್ಚರಿಕೆ ರೂಪದಲ್ಲಿ ಮನವಿ ಮಾಡಿದರು.
ಮಂಗಳವಾರ ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಪಂಚಮಸಾಲಿ ಮುಖಂಡರೊಂದಿಗೆ ಭೇಟಿ ನೀಡಿದ ಅವರು ಬಳಿಕ ಮುಖ್ಯಮಂತ್ರಿಗಳನ್ನು ಕೂರಿಸಿಕೊಂಡೇ ಮಾಧ್ಯಮ ಗೋಷ್ಠಿ ನಡೆಸಿ, ನಯವಾಗಿ ಎಚ್ಚರಿಕೆ ನೀಡಿದರು. ರಾಜ್ಯ ಸಂಘದ ಅಧ್ಯಕ್ಷರು, ಪೀಠದ ಧರ್ಮದರ್ಶಿಗಳು, ಸಚಿವರು, ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಮಾಜದ ಪ್ರಮುಖ ಹಿರಿಯರು ಹಾಗೂ ಭಕ್ತರು ಅವರ ಜತೆಗಿದ್ದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಹಾಗೂ ಕೇಂದ್ರದಲ್ಲಿ ಸಮಸ್ತ ವೀರಶೈವ ಲಿಂಗಾಯತರಿಗೆ ಓಬಿಸಿ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಡಿಸೆಂಬರ್ 19ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪಡೆದುಕೊಂಡು ಶೀಘ್ರವಾಗಿ ಮೀಸಲಾತಿ ಘೋಷಿಸಬೇಕೆಂದು ಹಕ್ಕೊತ್ತಾಯ ಮಾಡಲಾಯಿತು.
ಪಡಿ ಇಲ್ಲವೇ ಮಡಿ ಹೋರಾಟಕ್ಕೆ ರೆಡಿ
ʻʻಮೀಸಲಾತಿ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇದುವರೆಗೆ ಮೀಸಲಾತಿಗೆ ಸಂಬಂಧಿಸಿ ಸಮೀಕ್ಷೆ ಆಗಿರಲಿಲ್ಲ. ಹೀಗಾಗಿ ನಾವು ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಅದರೆ, ಈಗ ಈಗ ಎಲ್ಲಾ ಜಿಲ್ಲೆಯ ಸಮೀಕ್ಷೆ ಆಗಿದೆ. ವಿಧಾನಸಭೆ ಅಧಿವೇಶದ ಒಳಗಾಗಿ ವರದಿಯನ್ನು ತೆಗೆದುಕೊಂಡು ಮೀಸಲಾತಿ ನೀಡಬೇಕು ಎಂದು ಸಿಎಂ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಒಂದು ವೇಳೆ ಮೀಸಲಾತಿ ಕೊಡದೇ ಹೋದರೆ ನಾವು ಪಡಿ ಇಲ್ಲವೇ ಮಡಿ ಎಂಬ ಹೋರಾಟಕ್ಕೆ ಮುಂದಾಗುತ್ತೇವೆʼʼ ಎಂದು ಸ್ವಾಮೀಜಿ ಹೇಳಿದರು.
ನೀವೇ ಮುಖ್ಯಮಂತ್ರಿಯಾಗಿ ಘೋಷಿಸಬೇಕು
ʻಪಂಚಮಸಾಲಿ ಮೀಸಲಾತಿ ಬೇಡಿಕೆ, ಅದರ ಕಾನೂನುಬದ್ಧತೆ ವಿಚಾರ ನಿಮಗಿಂತ ಹೆಚ್ಚು ತಿಳಿದವರು ಯಾರೂ ಇಲ್ಲ. ಶಿಗ್ಗಾಂವಿಯಲ್ಲಿ ನಿಮ್ಮನ್ನು ಪಂಚಮಸಾಲಿ ಭಕ್ತರೇ ಗೆಲ್ಲಿಸಿದ್ದಾರೆ. ನೀವು ಮುಖ್ಯಮಂತ್ರಿ ಆಗಿರುವಾಗಲೇ ಮೀಸಲಾತಿ ಘೋಷಿಸಬೇಕು. ನಾವೀಗ ಕೊನೆಯ ಹಂತದಲ್ಲಿ ಇದ್ದೇವೆ. ಇನ್ನು ಸ್ವಲ್ಪ ದಿನದಲ್ಲಿ ಎಲೆಕ್ಷನ್ ಬರುತ್ತದೆ. ಮೀಸಲಾತಿಯನ್ನು ಮುಂದೂಡಲು ಚುನಾವಣೆ ನೀತಿ ಸಂಹಿತೆಯ ನೆಪ ಆಗಬಾರದು. ನಮ್ಮ ಮೂಗಿಗೆ ತುಪ್ಪ ಹಚ್ಚುವ ಕೆಲಸ ಬೇಡʼʼ ಎಂದು ಸ್ವಾಮೀಜಿ ಹೇಳಿದರು.
ʻʻ28 ವರ್ಷಗಳ ಹೋರಾಟ ಮಾಡಿ ಸಾಕಾಗಿದೆ. ಸಚಿವರು, ಶಾಸಕರು ಇಲ್ಲಿಯವರೆಗೆ ಹೋರಾಟ ಮಾಡಿದ್ದಾರೆ. ಹಲವರು ಈ ಹೋರಾಟದ ಅವಧಿಯಲ್ಲೇ ನಿಧನರಾಗಿದ್ದಾರೆ. ಈ ಹೊತ್ತಿನಲ್ಲಿ ಸಿಎಂ ಅವರು ಮೀಸಲಾತಿ ಕೊಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಶೀಘ್ರವೇ ವರದಿ ತರಿಸಿಕೊಳ್ಳುತ್ತೇನೆ ಅಂತ ಸಿಎಂ ಹೇಳಿದ್ದಾರೆ. ಈ ವರದಿ ನಮಗೂ ಆಧಾರ ಸರ್ಕಾರಕ್ಕೂ ಆಧಾರʼʼ ಎಂದು ವಚನಾನಂದ ಶ್ರೀಗಳು ಹೇಳಿದರು.
ನಾವು ಯಾಕೆ ಟೀಕೆ ಮಾಡುತ್ತಿಲ್ಲ ಅಂದ್ರೆ..
ʻʻನಾವು ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿಲ್ಲ ಎಂದು ಕೆಲವು ಜೋಕರ್‌ಗಳು ಹೇಳುತ್ತಿದ್ದಾರೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಸಭೆಗಳನ್ನು, ಸಮಾವೇಶಗಳನ್ನು ಮಾಡಿದ್ದೇವೆ. ನಾವು ಸರಕಾರವನ್ನು, ಬೊಮ್ಮಾಯಿ ಅವರನ್ನು ಟೀಕೆ ಮಾಡಬೇಕಾದ ಅವಕಾಶ ಬಂದಿಲ್ಲ. ಯಾಕೆಂದರೆ, ನಮಗೆ ಮುಖ್ಯಮಂತ್ರಿಗಳು ಯಾವಾಗಲೂ ಸಂಪರ್ಕಕ್ಕೆ ಸಿಗುತ್ತಿದ್ದಾರೆʼʼ ಎಂದು ಯತ್ನಾಳ್ ಅವರನ್ನು ಉಲ್ಲೇಖಿಸದೆಯೇ ಸ್ವಾಮೀಜಿ ನುಡಿದರು. ಈ ಹಿಂದೆ ನಡೆದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿಗಳನ್ನು ವೇದಿಕೆಯಲ್ಲೇ ಪ್ರಶ್ನಿಸಿದ್ದರಿಂದ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಒಂದು ಹೊಸ ತಿರುವು ಸಿಕ್ಕಿತು ಎಂದು ಅವರು ಅಭಿಪ್ರಾಯಪಟ್ಟರು. ಆ ಮೂಲಕ ಅಂದಿನ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ವೀರಶೈವ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಜಿ.ಪಿ ಪಾಟೀಲ್, ಸಚಿವ ಮುರುಗೇಶ್ ನಿರಾಣಿ ಅವರು ಜತೆಗಿದ್ದರು.
ಇದನ್ನೂ ಓದಿ | Panchamasali Reservation | ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾರ್ಥದ್ದು, ಒಕ್ಕಲಿಗರಿಗೆ ನನ್ನ ಬೆಂಬಲ: ಚೇತನ್ ಅಹಿಂಸಾ