ಬೆಂಗಳೂರು: ರಾಜ್ಯದ ೨೫ ವಿವಿಧ ಜಾತಿಗಳ ಮೀಸಲಾತಿಗೆ (Panchamasali Reservation) ಸಂಬಂಧಿಸಿದಂತೆ ಸಿದ್ಧಪಡಿಸುತ್ತಿರುವ ಅಧ್ಯಯನ ವರದಿಯನ್ನು ಶೀಘ್ರದಲ್ಲಿಯೇ ಮಂಡಿಸುವಂತೆ ಹರಿಹರ ಪೀಠದ ವಚನಾನಂದ ಶ್ರೀಗಳು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಒತ್ತಾಯಿಸಿದ್ದಾರೆ.
ಕಾನೂನು ತಜ್ಞರಾದ ಬಿ.ಎಸ್.ಪಾಟೀಲ್ ಅವರೊಂದಿಗೆ ಬೆಂಗಳೂರಿನಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರ ನಿವಾಸಕ್ಕೆ ಭೇಟಿ ನೀಡಿದ ಶ್ರೀಗಳು, ಮೀಸಲಾತಿ ಸಂಬಂಧ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿಗಳನ್ನು ಪ್ರವರ್ಗ 2ಎ ಗೆ ಸೇರ್ಪಡೆಗೊಳಿಸುವ ವಿಚಾರವಾಗಿಯೂ ಹಲವು ಸಂಗತಿಗಳನ್ನು ಶ್ರೀಗಳು ಹೇಳಿದ್ದಾರೆನ್ನಲಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗ ಆಯೋಜಿಸಿದ್ದ ಬಹಿರಂಗ ವಿಚಾರಣೆಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ 1871 ರಿಂದ ಇದುವರೆಗಿನ ಸುಮಾರು ೯೫೦ ಪುಟಗಳ ಪೂರಕ ದಾಖಲೆಗಳ ಬಗ್ಗೆ ಚರ್ಚಿಸಲಾಗಿತ್ತು ಎಂಬ ಸಂಗತಿಯನ್ನೂ ಇದೇ ವೇಳೆ ಶ್ರೀಗಳು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ | Karnataka Election | ಡಿಕೆಶಿ ಬೇಡ ಅಂದ್ರೂ ಅಭ್ಯರ್ಥಿ ಘೋಷಣೆ ಮಾಡಲು ಸಿದ್ದರಾಮಯ್ಯಗೆ ಯಾರು ಅಧಿಕಾರ ಕೊಟ್ರು: ಈಶ್ವರಪ್ಪ
ಇದೇ ಡಿಸೆಂಬರ್ ೧೯ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನವು ಆರಂಭವಾಗಲಿದ್ದು, ಶೀಘ್ರವಾಗಿ ಸರ್ಕಾರಕ್ಕೆ ವರದಿ ಮಂಡಿಸಿದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಹಕ್ಕನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ವಚನಾನಂದ ಶ್ರೀಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮತ್ತು ಸದಸ್ಯರು ಆದಷ್ಟು ಶೀಘ್ರದಲ್ಲಿ ವರದಿಯನ್ನು ಮಂಡಿಸುವುದಾಗಿ ಭರವಸೆ ನೀಡಿದ್ದಾರೆಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
೧೭ ಜಾತಿಗಳ ವರದಿ ಸಿದ್ಧ
ರಾಜ್ಯದ ಒಟ್ಟು ೨೫ ವಿವಿಧ ಜಾತಿಗಳ ಮೀಸಲಾತಿಗೆ ಸಂಬಂಧಿಸಿದಂತೆ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ೧೭ ಜಾತಿಗಳ ಮೀಸಲಾತಿಗೆ ಸಂಬಂಧಪಟ್ಟ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ. ಅನಾಥ ಮಕ್ಕಳಿಗೆ ಜಾತಿಯೇ ಇರುವುದಿಲ್ಲ. ಇಂತಹ ಮಕ್ಕಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ನಿಟ್ಟಿನಲ್ಲಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಈಚೆಗೆ ಜಯಪ್ರಕಾಶ್ ಹೆಗ್ಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಬಿ.ಎಸ್. ಯಡಿಯೂರಪ್ಪ ಜತೆ ಮಾತುಕತೆ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿ ಸರ್ವಪಕ್ಷ ಸಭೆಯನ್ನು ಆಯೋಜಿಸಲು ಕ್ರಮವಹಿಸಬೇಕು ಎಂದು ವಚನಾನಂದ ಶ್ರೀಗಳು ಬುಧವಾರವಷ್ಟೇ (ಡಿ. ೧೪) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಮೀಸಲಾತಿ ನೀಡುವ ಸಂಬಂಧ ಆರಂಭವಾಗಿರುವ ಹೋರಾಟ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗವು ಜಾತಿಗಳ ಮೀಸಲಾತಿ ನೀಡುವ ಸಂಬಂಧ ಕೈಗೊಂಡಿರುವ ಅಧ್ಯಯನ ವರದಿಯನ್ನು ಮಂಡಿಸುವ ನಿಟ್ಟಿನಲ್ಲಿ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಸರ್ವಪಕ್ಷಗಳ ನಾಯಕರ ಸಹಕಾರ ಬೇಕಿದೆ ಎಂದು ಶ್ರೀಗಳು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಒಪ್ಪಿದ ಬಿಎಸ್‌ವೈ, ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ | Karnataka Election |ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನನ್ನನ್ನು ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ