ದಾವಣಗೆರೆ: ಜಮೀನೊಂದರ ವ್ಯಾಜ್ಯದಲ್ಲಿ ತಾಲೂಕು ದಂಡಾಧಿಕಾರಿಗಳು ತಮ್ಮ ಪರ ಆದೇಶ ನೀಡಲಿಲ್ಲವೆಂದು ಗ್ರಾಮ ಪಂಚಾಯತಿ ಸದಸ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕು ನಾರಾಯಣಪುರ ಗ್ರಾಮ ಪಂಚಾಯತಿ ಮಲ್ಲಾಪುರ ಗ್ರಾಮದ ಸದಸ್ಯ ಲೋಕೇಶನಾಯ್ಕ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗ್ರಾಮ ಪಂಚಾಯತಿ ಸದಸ್ಯನಾಗಿರುವ ಲೋಕೇಶನಾಯ್ಕ್ ತಮ್ಮ ಚಿಕ್ಕಪ್ಪನ ಆಸ್ತಿ ವಿಚಾರದಲ್ಲಿ ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ದಾವೆ ಹೂಡಿದ್ದ. ಚಿಕ್ಕಪ್ಪ ಕನ್ಯಾನಾಯ್ಕ್ ಇತ್ತೀಚೆಗಷ್ಟೇ ಮೃತರಾಗಿದ್ದರು. ಅವರ ಹೆಸರಲ್ಲಿ 4 ಎಕರೆ ಜಮೀನಿತ್ತು. ಅಲ್ಲದೆ ಕನ್ಯಾನಾಯ್ಕ್ ಅವರ ಮಕ್ಕಳು ಜಮೀನು ಖಾತೆ ಬದಲಾವಣೆ ಮಾಡಿಸಿಕೊಂಡಿದ್ದರು.
ಇದನ್ನು ಓದಿ | ಒಂದೇ ಮನೆಯ 9 ಮಂದಿ ಆತ್ಮಹತ್ಯೆ; ನಿಗೂಢ ಸಾವಿನ ತನಿಖೆ ಕೈಗೆತ್ತಿಕೊಂಡ ಪೊಲೀಸ್
ಸದ್ಯ ಈ ದಾವೆ ವಿಚಾರಣೆ ನಡೆಸಿದ ನ್ಯಾಮತಿ ತಾಲೂಕು ದಂಡಾಧಿಕಾರಿ ಎಂ.ರೇಣುಕಾ, ಕನ್ಯಾನಾಯ್ಕ್ ಮಕ್ಕಳ ಪರವಾಗಿ ಆದೇಶ ನೀಡಿದ್ದಾರೆ. ತಹಸೀಲ್ದಾರ್ ನೀಡಿದ ಆದೇಶ ವಿರೋಧಿಸಿ ಲೋಕೇಶನಾಯ್ಕ್ ತಾಲೂಕು ಕಚೇರಿ ಆವರಣದಲ್ಲೇ ಆತ್ಮಹತ್ಯೆಯ ಹೈಡ್ರಾಮ ಮಾಡಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ಲೋಕೇಶನಾಯ್ಕ್ ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.