ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆ ರಾತ್ರಿ ವೇಳೆ ಇಲ್ಲವೇ ಅಪರಿಚಿತ ಸ್ಥಳಕ್ಕೆ ಸಾರ್ವಜನಿಕ ಸೇವಾ ವಾಹನಗಳ ಮೂಲಕ ಹೋಗಬೇಕಾದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಗಳು ಆಗುತ್ತಲಿವೆ. ಕೆಲವು ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಂತಹ (sexual assault) ಪ್ರಕರಣಗಳು ಸಂಭವಿಸುತ್ತಲಿವೆ. ಈಗ ಇದಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇಂತಹ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್ಟಿ – Vehicle Location Tracking Device) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ (Panic button) ಅಳವಡಿಕೆಯನ್ನು ಕಡ್ಡಾಯ ಮಾಡಿ ಆದೇಶಿಸಲಾಗಿದೆ. ಈ ಆದೇಶ ಇನ್ನು ಎರಡೇ ದಿನಕ್ಕೆ ಅಂದರೆ ಡಿ.1ರಿಂದ ಅನ್ವಯವಾಗಲಿದೆ. ಆದರೆ, ಒಂದು ವರ್ಷ ಕಾಲ ಅಂದರೆ, 2024ರ ನ.30ರವರೆಗೆ ಅವಕಾಶ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ವಿಎಲ್ಟಿ ಹಾಗೂ ಪ್ಯಾನಿಕ್ ಬಟನ್ ಅನ್ನು ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳು ಅಳವಡಿಸಬೇಕು. ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳು (Yellow Board Taxi), ಕ್ಯಾಬ್ಗಳು, ಖಾಸಗಿ ಬಸ್ಗಳು (Cabs and private buses), ನ್ಯಾಷನಲ್ ಪರ್ವಿುಟ್ (National permit) ಹೊಂದಿರುವ ಗೂಡ್ಸ್ ವಾಹನಗಳಿಗೆ (Goods Vehicle) ಈ ಆದೇಶ ಅನ್ವಯವಾಗಲಿದೆ. ಅಂತಿಮ ಗಡುವಿನೊಳಗೆ ಅಳವಡಿಸದಿದ್ದರೆ ದಂಡ ಹಾಕಲಾಗುತ್ತದೆ.
ಎಲ್ಲವೂ ಇಲ್ಲಿ ಟ್ರ್ಯಾಕ್ ಆಗುತ್ತೆ!
ವಿಎಲ್ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಮಾಡುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಳವಡಿಸಲಾದ ಮಾನಿಟರಿಂಗ್ ನಕ್ಷೆಯಲ್ಲಿ ವಾಹನದ ಲೊಕೇಷನ್ ಟ್ರ್ಯಾಕಿಂಗ್ ನಡೆಯುತ್ತದೆ. ಹೀಗಾಗಿ ಯಾವುದೇ ವಾಹನ ಎಲ್ಲಿಯೇ ಸಂಚರಿಸಿದರೂ ಇದರಿಂದ ಗೊತ್ತಾಗುತ್ತದೆ. ಇದು ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಅತಿ ವೇಗದ ಚಾಲನೆ ಮಾಡಿದಾಗ ಎಚ್ಚರಿಕೆಯನ್ನು ರವಾನೆ ಮಾಡುತ್ತದೆ.
ಯಾವುದಕ್ಕೆಲ್ಲ ಅನುಕೂಲ?
ಒಮ್ಮೆ ಪ್ಯಾನಿಕ್ ಬಟನ್ ವಾಹನಗಳಲ್ಲಿ ಅಳವಡಿಕೆಯಾದರೆ ಹಲವು ರೀತಿಯ ಉಪಯೋಗಗಳು ಇವೆ. ವಾಹನಗಳಲ್ಲಿ ಪ್ರಯಾಣಿಸುವಾಗ ಆರೋಗ್ಯದಲ್ಲಿ ಏರುಪೇರಾಗಿ ತುರ್ತು ವೈದ್ಯಕೀಯ ಸೇವೆ ಬೇಕಿದ್ದರೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ಯಾವುದೇ ತೊಂದರೆಗೆ ಸಿಲುಕಿದರೆ ಪ್ಯಾನಿಕ್ ಬಟನ್ ಅನ್ನು ಕೂಡಲೇ ಒತ್ತಬಹುದಾಗಿದೆ. ಆಗ ಈ ಸಂದೇಶವು ಕಮಾಂಡ್ ಸೆಂಟರ್ಗೆ ರವಾನೆಯಾಗುತ್ತದೆ. ಅಲ್ಲಿನ ಸಿಬ್ಬಂದಿ ವಾಹನದ ಟ್ರ್ಯಾಕಿಂಗ್ ನೋಡಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಇದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ.
ಅಳವಡಿಸಲು ಬೇಕು 7,599 ರೂ.!
ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅನ್ನು ವಾಹನಕ್ಕೆ ಅಳವಡಿಕೆ ಮಾಡಬೇಕೆಂದರೆ 7,599 ರೂಪಾಯಿಯನ್ನು ಖರ್ಚು ಮಾಡಬೇಕಿದೆ. ಇದು ಈಗ ಕ್ಯಾಬ್ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಅಳವಡಿಸಲು ನಮ್ಮ ತಕರಾರು ಇಲ್ಲ. ಆದರೆ, ಇದಕ್ಕೆ ಸರ್ಕಾರದಿಂದಲೂ ಸಹಾಯಧನ ಬೇಕು ಎಂಬ ಕೂಗುಗಳು ಕೇಳಿಬರುತ್ತಿವೆ. ಆದರೆ, ಅಳವಡಿಕೆಗೆ ಒಂದು ವರ್ಷ ಕಾಲಾವಧಿಯನ್ನು ನೀಡಲಾಗಿದೆ.
ಇದನ್ನೂ ಓದಿ: HSRP Number Plate : ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಲ್ವಾ? ಕೂಡಲೇ ಈ ಕೆಲಸ ಮಾಡಿ!
ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್.ಸಿ ನವೀಕರಣ
ವಾಹನಗಳಿಗೆ ವಿಎಲ್ಟಿ ಮತ್ತು ಪ್ಯಾನಿಕ್ ಬಟನ್ ಡಿವೈಸ್ಗಳನ್ನು ಅಳವಡಿಸುವ ಸಂಬಂಧ ಗುತ್ತಿಗೆ ನೀಡಲು ಸಾರಿಗೆ ಇಲಾಖೆ 2023 ಫೆಬ್ರವರಿ 9ರಂದು ಇ-ಟೆಂಡರ್ ಮೂಲಕ ಕಂಪನಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ 13 ಕಂಪನಿಗಳು ಆಯ್ಕೆಯಾಗಿದ್ದವು. ಅ.16 ರಂದು ಸಾರಿಗೆ ಆಯುಕ್ತರು ಮತ್ತು ರಸ್ತೆ ಸುರಕ್ಷತಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿತ್ತು. ಅಲ್ಲಿ ವಿಎಲ್ಟಿ ಮತ್ತು ಪ್ಯಾನಿಕ್ ಬಟನ್ ಸಾಧನಗಳಿಗೆ ದರ ನಿಗದಿಪಡಿಸಲಾಗಿತ್ತು. ಆಯ್ಕೆಯಾಗಿರುವ ಕಂಪನಿಗಳು ವಾಹನಗಳಿಗೆ ಎಐಎಸ್ 140 ಪ್ರಮಾಣೀಕೃತ ವೆಹಿಕಲ್ ಲೊಕೇಷನ್ ಟ್ಯಾಕಿಂಗ್ ಡಿವೈಸ್ ಅಳವಡಿಸಲಿವೆ. ಈ ಯೋಜನೆ ತ್ವರಿತವಾಗಿ ಜಾರಿಯಾಗಬೇಕಿರುವುದರಿಂದ ಆರ್ಟಿಒಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್ಸಿ ನವೀಕರಣಗೊಳಿಸಲು ಸೂಚಿಸಲಾಗಿದೆ.